ಸಾರಾಂಶ
ಸಾಗರ ತಾಲೂಕಿನ ಬೇಳೂರು ಗ್ರಾಮದ ಸ.ನಂ. ೪೦ರ ಸೊಪ್ಪಿನ ಬೆಟ್ಟದಲ್ಲಿ ಅನಧಿಕೃತವಾಗಿ ಜಾಗ ಒತ್ತುವರಿ ಮಾಡುತ್ತಿರುವುದರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಬೇಳೂರು ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸೊಪ್ಪಿನ ಬೆಟ್ಟವನ್ನು ಅನಾದಿ ಕಾಲದಿಂದಲೂ ಕಾಪಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಕೆಲವರು ಅನಧಿಕೃತವಾಗಿ ಜಾಗವನ್ನು ಒತ್ತುವರಿ ಮಾಡಿ ತಾತ್ಕಾಲಿಕ ಷೆಡ್‌ಗಳನ್ನು ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನ ಬೇಳೂರು ಗ್ರಾಮದ ಸ.ನಂ. ೪೦ರ ಸೊಪ್ಪಿನ ಬೆಟ್ಟದಲ್ಲಿ ಅನಧಿಕೃತವಾಗಿ ಜಾಗ ಒತ್ತುವರಿ ಮಾಡುತ್ತಿರುವುದರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಬೇಳೂರು ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು.ಬೇಳೂರು ಗ್ರಾಮದ ಸ.ನಂ. ೪೦ರ ಸೊಪ್ಪಿನ ಬೆಟ್ಟವನ್ನು ಅನಾದಿ ಕಾಲದಿಂದಲೂ ಕಾಪಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಕೆಲವರು ಅನಧಿಕೃತವಾಗಿ ಜಾಗವನ್ನು ಒತ್ತುವರಿ ಮಾಡಿ ತಾತ್ಕಾಲಿಕ ಷೆಡ್‌ಗಳನ್ನು ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸದರಿ ಸ್ಥಳ ಸೊಪ್ಪಿನಬೆಟ್ಟವಾಗಿದ್ದು, ಲಾಗಾಯಿತಿನಿಂದ ಅಡಕೆ ತೋಟಗಳಿಗೆ ಹೊಸ ಮಣ್ಣು, ಸೊಪ್ಪು, ದರಕು ಹಾಗೂ ಒಣಕಟ್ಟಿಗೆ ತರಲು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಇದೇ ಜಾಗದಲ್ಲಿ ಜಾನುವಾರುಗಳನ್ನು ಮೇಯಲು ಬಿಡುವುದು, ಹಸಿರು ಹುಲ್ಲು ಸಂಗ್ರಹಿಸುತ್ತಾ ಬಂದಿದ್ದಾರೆ. ಏಕಾಏಕಿ ಜಾಗ ಒತ್ತುವರಿ ಮಾಡುತ್ತಿರುವುದರಿಂದ ಆ ಜಾಗ ನಿರ್ವಹಣೆಗೆ ಧಕ್ಕೆ ಉಂಟಾಗುತ್ತಿದೆ. ಇಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರಾಗಿದ್ದು, ಅತಿಕ್ರಮಣದಾರರಿಂದ ಇವೆಲ್ಲಾ ನಾಶವಾಗುವ ಸಾಧ್ಯತೆ ಇದೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಜೊತೆಗೆ ಸೊಪ್ಪಿನಬೆಟ್ಟ ರಕ್ಷಣೆಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನವಿ ಸಲ್ಲಿಸುವ ಸಂದರ್ಭ ಬೇಳೂರು ಗ್ರಾಮದ ಕೃಷ್ಣಮೂರ್ತಿ, ರಾಘವೇಂದ್ರ ಹೆಗಡೆ, ಮಂಜುನಾಥ್, ಚಂದ್ರು ಪೂಜಾರಿ, ಮಂಜಪ್ಪ ಗೌಡ, ಕೆರೆಯಪ್ಪ, ವಿನಾಯಕ ರಾವ್ ಇನ್ನಿತರರು ಹಾಜರಿದ್ದರು.
- - - -24ಕೆ.ಎಸ್.ಎ.ಜಿ.೨: