ಲೋಕ ಚುನಾವಣೆಯಲ್ಲಿ ಕುಂಚಿಟಿಗರಿಂದ ತಕ್ಕ ಪಾಠ :

| Published : Jun 07 2024, 12:32 AM IST

ಲೋಕ ಚುನಾವಣೆಯಲ್ಲಿ ಕುಂಚಿಟಿಗರಿಂದ ತಕ್ಕ ಪಾಠ :
Share this Article
  • FB
  • TW
  • Linkdin
  • Email

ಸಾರಾಂಶ

ಕೈ ತಪ್ಪಿದ ಒಬಿಸಿ ಮಿಸಲಾತಿ । 30 ವರ್ಷಗಳಿಂದ ಶಿಕ್ಷಣ , ಉದ್ಯೋಗದಲ್ಲಿ ತುಂಬಲಾರದ ನಷ್ಟ

ಕನ್ನಡಪ್ರಭ ವಾರ್ತೆ ಹಿರಿಯೂರು

ಕುಂಚಿಟಿಗರ ಕೇಂದ್ರ ಒಬಿಸಿ ಮೀಸಲಾತಿಗೆ ಕೊಡಲಿಪೆಟ್ಟು ನೀಡಿ ಭಾವನಾತ್ಮಕ ಬ್ಲಾಕ್ ಮೇಲ್ ಮಾಡಿದವರಿಗೆ ಸ್ವಾಭಿಮಾನಿ ಕುಂಚಿಟಿಗರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ. ರಂಗನಾಥ್ ಹೇಳಿದ್ದಾರೆ.

ನಗರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಕುಂಚಿಟಿಗರಿಗೆ ಕೇಂದ್ರ ಒಬಿಸಿ ಮೀಸಲಾತಿ ಕೈ ತಪ್ಪಿಹೋಗಿ ಕಳೆದ 30 ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ. ಎಲ್ಲಾ ರಾಜಕೀಯ ಪಕ್ಷ ಮುಖಂಡರು ಕುಂಚಿಟಿಗರ ಒಬಿಸಿ ಮೀಸಲಾತಿ ವಿಷಯ ಜೀವಂತವಾಗಿಟ್ಟು ಮೂರು ದಶಕಗಳ ಕಾಲ ಭಾವನಾತ್ಮಕವಾಗಿ ಮರುಳು ಮಾಡಿ ಮೀಸಲಾತಿ ತಪ್ಪಿಸಿದ್ದಾರೆ. ರಾಜ್ಯದ 18 ಜಿಲ್ಲೆ 46 ತಾಲೂಕುಗಳಲ್ಲಿ ನೆಲೆಸಿರುವ 25 ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಕುಂಚಿಟಿಗರ ನಿರ್ಣಾಯಕ ಮತದಾರರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಂಡಿದೆ.

ನಿಷ್ಠಾವಂತ ಕುಂಚಿಟಿಗರಿಗೆ ಎಂಪಿ ಟಿಕೆಟ್ ನೀಡಿಲ್ಲ. ರಾಜ್ಯದಲ್ಲಿ ಮಂತ್ರಿ ಸ್ಥಾನ ಕೊಡಲಿಲ್ಲ. ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿ ಇಲ್ಲದೆ ಇರುವ ಶಬ್ದ ಸೇರಿಸಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಕೇಂದ್ರ ಒಬಿಸಿ ಮೀಸಲಾತಿ ಕೊಡುವಂತೆ ಶಿಫಾರಸು ಮಾಡಿ ಕುಂಚಿಟಿಗರನ್ನು ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ಇಬ್ಬಾಗ ಮಾಡಿದ್ದಾರೆ. ಜಾತಿ ಜನಗಣತಿ ವರದಿಯಲ್ಲಿ ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಗೆ ವಿಲೀನ ಮಾಡಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ಕುಂಚಿಟಿಗರು ಹೆಚ್ಚು ಮಾತನಾಡದೆ ಚುನಾವಣೆಯಲ್ಲಿ ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ.

ಪಕ್ಷದ ವರಿಷ್ಠರು ಆತ್ಮಾವಲೋಕನ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಕುಂಚಿಟಿಗರಿಗೆ ರಾಜಕೀಯ ಪ್ರಾತಿನಿದ್ಯ, ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ಶಿಕಾರಿಪುರದಲ್ಲಿ ನಡೆದ ಕುಂಚಿಟಿಗರ ಒಬಿಸಿ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಬಿ.ವೈ ರಾಘವೇಂದ್ರ ಮೂರು ಜನ ಕೊಟ್ಟ ಮಾತಿನಂತೆ ಕುಂಚಿಟಿಗ ಸಮಾಜದ ನಂಬಿಕೆ ಉಳಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಅವೈಜ್ಞಾನಿಕ ಪ್ರಸ್ತಾವನೆಯನ್ನು ಪುನರ್ ಪರಿಶೀಲನೆ ನಡೆಸಿ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ತಾರತಮ್ಯ ಮಾಡದೆ ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಒಬಿಸಿ ಮೀಸಲಾತಿ ಕೊಡಿಸಿಕೊಡಬೇಕೆಂದು ರಂಗನಾಥ್‌ ಮನವಿ ಮಾಡಿದ್ದಾರೆ.