ಸಾರಾಂಶ
ರೈತರ ಸಭೆ । ಹೆಚ್ಚುವರಿ ಜಮೀನು ಅರಣ್ಯ ಇಲಾಖೆಗೆ ಬಿಡುವಂತೆ ನೀಡಿರುವ ನೋಟಿಸ್‌ಗೆ ವಿರೋಧ | ವಾಪಾಸ್ ಪಡೆಯಲು ಆಗ್ರಹ
ಕನ್ನಡಪ್ರಭ ವಾರ್ತೆ ಹನೂರುತಲತಲಾಂತರದಿಂದ ವ್ಯವಸಾಯ ಮಾಡುತ್ತಿರುವ ಜಮೀನಿನ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ತಿಳಿಸಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಮೀಪದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಗ್ರಾಮಗಳ ರೈತರ ಸಭೆಯಲ್ಲಿ ಮಾತನಾಡಿದರು.ಗೋಪಿನಾಥ ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು ಅತ್ತೂರು ಗ್ರಾಮದ ಚಿನ್ನ ಕುಂಜಿ ಬಿನ್ ಪೆರುಮಾಳ್ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಜು.18 ರಂದು 3 ಎಕರೆಗಿಂತ ಹೆಚ್ಚುವರಿ ಇರುವ ಜಮೀನು ಅರಣ್ಯ ಇಲಾಖೆಗೆ ಬಿಡುವಂತೆ ನೋಟಿಸ್ ಜಾರಿಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಏಳಕ್ಕೂ ಹೆಚ್ಚು ಗ್ರಾಮಗಳು ನದಿತೀರ ಹಾಗೂ ಅರಣ್ಯದ ಹಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಸಾವಿರಾರು ಜನಸಂಖ್ಯೆ ವ್ಯವಸಾಯವನ್ನೇ ನಂಬಿ ಬದುಕುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಅರಣ್ಯಾಧಿಕಾರಿಗಳು ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನೇರವಾಗಿ ನೋಟಿಸ್ ಜಾರಿಗೊಳಿಸಿರುವುದು ಸರಿಯಲ್ಲ ಎಂದರು.ತಲತಲಾಂತರದಿಂದ ಜಮೀನನ್ನು ವ್ಯವಸಾಯ ಮಾಡಿಕೊಂಡು ಬಂದಿರುವ ರೈತರ ಬದುಕಿಗೆ ಕೊಳ್ಳಿ ಇಡಲು ಮುಂದಾಗಿರುವ ಅರಣ್ಯಾಧಿಕಾರಿಗಳ ಈ ಕ್ರಮಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸಿ ಈ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಹಾಗೂ ನೂರಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತನಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಡಳಿತದ ವಿರುದ್ಧ ಮತ್ತು ಅರಣ್ಯ ಇಲಾಖೆ ವಿರುದ್ಧವಾಗಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹನೂರು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್, ರೈತ ಮುಖಂಡರಾದ ಶೈಲೆಂದರ್ ಕುಮಾರ್, ಕೂಡ್ಲೂರು ವೆಂಕಟೇಶ್, ರೈತ ಮುಖಂಡರು ಇದ್ದರು. ಜಂಬೂಕಾ ಪಟ್ಟಿ, ಆತೂರು, ಆಲಂಬಾಡಿ, ಮಾರಿಕೊಟ್ಟೆ, ಪುದೂರು ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿನ ಜನತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು ತಲತಲಾಂತರದಿಂದ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಿ, ಗ್ರಾಮಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು.
ಅಮ್ಜಾದ್ ಖಾನ್, ಹನೂರು ಘಟಕದ ಅಧ್ಯಕ್ಷ