ಸಾರಾಂಶ
ರಾಮನಗರ: ನಾವು ರಾಷ್ಟ್ರಕ್ಕೆ ಸಂವಿಧಾನ ನೀಡಿದ ಕುಲದಿಂದ ಬಂದವರು. ಕಾನೂನನ್ನು ಗೌರವಿಸುವ, ಶಾಂತಿ ಬಯಸುವವರು. ಪಟ್ಟಭದ್ರರೊಂದಿಗೆ ಸೇರಿರುವ ಕೆಲ ನಾಯಕರು ರಾಮನಗರದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲರು ಬದುಕಿರುವವರೆಗೆ ಅದಕ್ಕೆಲ್ಲ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ - ಬಿಜೆಪಿ ನಾಯಕರ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕೆಲ ವಕೀಲರ ವಿರುದ್ಧ ಜಾತಿ ನಿಂದನೆ ದೂರು ನೀಡಿದರೂ ಪ್ರಕರಣ ದಾಖಲಿಸದ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ನಡೆಸಿದ ತಮಟೆ ಚಳವಳಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.ರಾಮನಗರದಲ್ಲಿ 40 ವರ್ಷಗಳಿಂದ ನಾವೆಲ್ಲರು ಪ್ರೀತಿಯಿಂದ ಶಾಂತಿ ಸೌಹಾರ್ದತೆಯಿಂದ ಸಹಬಾಳ್ವೆಯ ಜೀವನ ನಡೆಸುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಅಶ್ವತ್ಥ ನಾರಾಯಣಗೌಡರವರು ವಕೀಲರಿಗೆ ಕುಮ್ಮಕ್ಕು ನೀಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ನಿಮಗೆಲ್ಲ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ್ಞಾನವಾಪಿ ಪ್ರಕರಣದ ತೀರ್ಪಿನ ವಿಚಾರವಾಗಿ ಒಬ್ಬ ವಕೀಲ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದನು. ನಾವು ಅಂತಹ ವ್ಯಕ್ತಿಯ ಪರವಾಗಿ ನಿಲ್ಲಲ್ಲ. ಆ ಘಟನೆಗೆ ಸಂಬಂಧಿಸಿದಂತೆ ವಕೀಲ ತಪ್ಪಾಗಿದೆ ಕ್ಷಮಿಸಿ, ಅದನ್ನು ತಿರುಚಲಾಗಿದೆ ಅಂತ ವಕೀಲ ಹೇಳಿ ಕ್ಷಮಾಪಣೆ ಕೇಳಿದ್ದನು. ಆದರೂ ಬಿಜೆಪಿ - ಜೆಡಿಎಸ್ ಮುಖಂಡರು ರಾಜಾರೋಷವಾಗಿ ಹೋಗಿ ಆ ವಕೀಲನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ಮನವಿಯನ್ನು ವಕೀಲರ ಸಂಘದವರು ಪ್ರೀತಿಯಿಂದ ಸ್ವೀಕರಿಸಿದರು. ನಮ್ಮ ವಿಚಾರದಲ್ಲಿ ವಕೀಲರು ಅಂತಹ ಪ್ರೀತಿ ತೋರಲಿಲ್ಲ ಎಂದು ಟೀಕಿಸಿದರು.ಅಷ್ಟಕ್ಕೂ ಪ್ರಗತಿಪರ ಚಿಂತಕರು ವಕೀಲರ ಸಂಘದ ಕಾರ್ಯದರ್ಶಿ ತಿಮ್ಮೇಗೌಡ ಅವರನ್ನು ಸಂಪರ್ಕಿಸಿ ಅನುಮತಿ ಪಡೆದು ಮನವಿ ಸಲ್ಲಿಸಲು ಹೋಗಿದ್ದೆವು. ನಾವ್ಯಾರು ಏಕಾಏಕಿ ಹೋಗಲಿಲ್ಲ. ಈ ವೇಳೆ ಕೆಲ ವಕೀಲರು ನೀವೇಕೆ ಇಲ್ಲಿ ಬಂದಿದ್ದೀರಿ, ನಿಮ್ಮನ್ನು ಬರಲು ಹೇಳಿದವರ್ಯಾರು, ನೀವಿಲ್ಲಿ ಬರಬಾರದೆಂದು ಅಸ್ಪೃಶ್ಯತೆ ಆಚರಣೆ ಮಾಡುವ ಪದ ಉಪಯೋಗಿಸಿದರು. ಅಲ್ಲದೆ, ತಳ್ಳಾಡಿ, ನೂಕಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದರು.
ವಕೀಲರ ಸಂಘದಲ್ಲಿ ನಡೆದಿರುವ ಘಟನೆಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದರಿಂದ ಮನನೊಂದ ಹಿರಿಯ ಮುಖಂಡ ಗೋವಿಂದರಾಜು ಹಲ್ಲೆ ಮಾಡಿದ ಕೆಲ ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಆದರೆ, ಇಲ್ಲಿವರೆಗೂ ಎಫ್‌ಐಆರ್ ದಾಖಲಿಸಿಲ್ಲ. ಕೆಲ ವಕೀಲರು ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರು ರಾಜಕಾರಣ ಮಾಡುವುದಾದರೆ ಹೊರಗೆ ಬಂದು ಮಾಡಲಿ. ಸಾರ್ವಜನಿಕರಿಗೆ ವಕೀಲರ ಸಂಘ ಪ್ರವೇಶಕ್ಕೆ ಅವಕಾಶವಿದೆ. ಆದರೆ, ಅಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಕ್ಕೆ ವಿರೋಧ ಇದೆ. ಈ ಕೂಡಲೇ ತಪ್ಪಿತಸ್ಥ ವಕೀಲರನ್ನು ಬಂಧಿಸಬೇಕು ಎಂದು ಶಿವಕುಮಾರಸ್ವಾಮಿ ಒತ್ತಾಯಿಸಿದರು.ದಲಿತ ಮುಖಂಡ ಶಿವಶಂಕರ್ ಮಾತನಾಡಿ, ವಕೀಲರ ಸಂಘದಲ್ಲಿ ವಕೀಲರು ನಡೆದುಕೊಂಡ ರೀತಿ ನೋವು ತಂದಿದೆ. ಹೀಗಾಗಿ ಅಂಬೇಡ್ಕರ್ ರವರ ಸಂವಿಧಾನ , ಪ್ರಜಾಪ್ರಭುತ್ವ ಉಳಿವು ಹಾಗೂ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ ವಾಕ್ಯದ ಆದರ್ಶಗಳನ್ನಿಟ್ಟುಕೊಂಡು ನಾವು ಹೋರಾಟ ನಡೆಸುತ್ತಿದ್ದೇವೆ. ಪ್ರಗತಿಪರರ ಮನವಿ ವಿಚಾರವಾಗಿ ವಕೀಲರು ಅಸಡ್ಡೆಯಿಂದ ನಡೆದುಕೊಂಡರು. ಅಲ್ಲದೆ, ವಕೀಲರೇ 11ಮಂದಿ ಮುಖಂಡರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇಲ್ಲದಂತೆ ಗೂಂಡಾಗಳಂತೆ ಜಾತಿ ಮನೋಭಾವನೆ ಇಟ್ಟುಕೊಂಡು ಹೊರಗೆ ತಳ್ಳುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.
ನಮಗೆ ವಕೀಲರ ಮೇಲೆ ಅಪಾರವಾದ ಗೌರವ ಇದೆ. ಆದರೆ, ವಕೀಲರಲ್ಲಿನ ಕೆಲ ಕಿಡಿಗೇಡಿಗಳ ಕೃತ್ಯ, ಅವರೆಲ್ಲರು ವಕೀಲಿ ವೃತ್ತಿ ಗೆ ಯೋಗ್ಯರೆ ಎಂಬ ಪ್ರಶ್ನೆ ಮೂಡಿದೆ. ದಲಿತರ ಮೇಲೆ ಹೂಡಿರುವ ಪ್ರಕರಣ ಹಿಂಪಡೆಯಬೇಕು. ಮುಖಂಡ ಗೋವಿಂದರಾಜು ನೀಡಿರುವ ದೂರಿನ ಮೇಲೆ ವಕೀಲರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.20ಕೆಆರ್ ಎಂಎನ್ 2.ಜೆಪಿಜಿದಲಿತ ಪರ ಸಂಘಟನೆಗಳ ಮುಖಂಡರು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.