ಹಗಲು ದರೋಡೆಗೆ ಉದ್ಯೋಗಸ್ಥ ದಂಪತಿಯೇ ಟಾರ್ಗೆಟ್‌!

| Published : Feb 21 2024, 02:02 AM IST

ಸಾರಾಂಶ

ಕೆಲಸಕ್ಕೆ ತೆರಳಿದವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಖದೀಮನ ಬಂಧನವಾಗಿದೆ. ಅವರಿಂದ ₹30.15 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಗಲು ಹೊತ್ತಿನಲ್ಲೇ ಉದ್ಯೋಗಸ್ಥ ದಂಪತಿ ಕೆಲಸಕ್ಕೆ ತೆರಳಿದ ಬಳಿಕ ಅವರ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಖದೀಮನೊಬ್ಬ ಮೈಕೋ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಿಟಿಎಂ ಲೇಔಟ್ 2ನೇ ಹಂತದ ನಿವಾಸಿ ಸುನೀಲ್ ಬಂಧಿತನಾಗಿದ್ದು, ಆರೋಪಿಯಿಂದ 525 ಗ್ರಾಂ ಚಿನ್ನಾಭರಣ, 550 ಗ್ರಾಂ ಬೆಳ್ಳಿ ವಸ್ತುಗಳು, 2 ಮೊಬೈಲ್‌ಗಳು ಹಾಗೂ ಬೈಕ್ ಸೇರಿದಂತೆ 30.15 ಲಕ್ಷ ರು. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಇತ್ತೀಚಿಗೆ ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ಹಗಲು ಮನೆಗಳ್ಳತನ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಎಚ್ಚೆತ್ತ ಇನ್ಸ್‌ಪೆಕ್ಟರ್‌ ಎಂ.ಎಲ್.ಗಿರೀಶ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ ಶ್ರೀನಿವಾಸ್ ನೇತೃತ್ವದ ತಂಡವು, ಕೃತ್ಯದ ನಡೆದ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಉದ್ಯೋಗಸ್ಥ ದಂಪತಿ ಮನೆಯೇ ಟಾರ್ಗೆಟ್:

9ನೇ ತರಗತಿ ಓದಿಗೆ ಟಾಟಾ ಹೇಳಿದ ಸುನೀಲ್‌, ತನ್ನ ಕುಟುಂಬದ ಜತೆ ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದ. ಮೊದಲು ಖಾಸಗಿ ಆಸ್ಪತ್ರೆಯಲ್ಲಿ ನೌಕರಿಯಲ್ಲಿದ್ದ ಆತ, ಬಳಿಕ ಆ ಕೆಲಸ ತೊರೆದು ಸುಲಭವಾಗಿ ಹಣ ಸಂಪಾದನೆಗೆ ಕಳ್ಳತನಕ್ಕಿಳಿದಿದ್ದ. ತಾನು ವಾಸವಾಗಿದ್ದ ಪ್ರದೇಶ ಸುತ್ತಮುತ್ತ ನೆಲೆಸಿರುವ ಉದ್ಯೋಗಸ್ಥ ದಂಪತಿ ಮನೆಗಳನ್ನು ಆತ ಗುರಿಯಾಗಿಸಿಕೊಂಡು ಮನೆಗಳ್ಳತನ ಕೃತ್ಯ ಎಸಗುತ್ತಿದ್ದ. ಮೊದಲು ಸತಿ-ಪತಿ ಉದ್ಯೋಗದಲ್ಲಿರುವ ಮನೆಗಳನ್ನು ಆತ ಗುರುತಿಸುತ್ತಿದ್ದ. ಬಳಿಕ ಬೆಳಗ್ಗೆ ಮನೆ ಬೀಗ ಹಾಕಿಕೊಂಡು ಆ ದಂಪತಿ ಕೆಲಸಕ್ಕೆ ತೆರಳಿದ ಬಳಿಕ ಆ ಮನೆಗಳಿಗೆ ಆರೋಪಿ ಕನ್ನ ಹಾಕುತ್ತಿದ್ದ. ಇದೇ ರೀತಿ ಕಳೆದ ಎರಡ್ಮೂರು ವರ್ಷಗಳಿಂದ ಆತ ನಿರಂತರವಾಗಿ ಮನೆಗಳ್ಳತನ ಕೃತ್ಯ ಎಸಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಸೆರೆಯಾಗಿದ್ದು ಹೇಗೆ?

ಕೆಲ ದಿನಗಳ ಹಿಂದೆ ಬಿಟಿಎಂ ಲೇಔಟ್‌ನ ಮನೆಯೊಂದರಲ್ಲಿ ಕಳ್ಳತನ ಕೃತ್ಯ ಎಸಗಿ ಆರೋಪಿ ಪರಾರಿಯಾಗುವಾಗ ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದರು. ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಆ ಮೊಬೈಲ್‌ನಲ್ಲಿ ಸೆರೆಯಾಗಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಸುನೀಲ್ ಜಾಡು ಸಿಕ್ಕಿದೆ. ಶಂಕೆ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಈಗ ಆರೋಪಿಯಿಂದ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 11 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಚಯಸ್ಥರಿಗೆ ಚಿನ್ನ ಮಾರಾಟ:

ಕಳ್ಳತನ ಸಂಪಾದಿಸಿದ ಚಿನ್ನಾಭರಣವನ್ನು ತನ್ನ ಪರಿಚಯಸ್ಥರಿಗೆ ಆತ ಮಾರಾಟ ಮಾಡುತ್ತಿದ್ದ. ಮನೆಯಲ್ಲಿ ತೊಂದರೆ ಇದೆ ಎಂದು ಹೇಳಿ ಸ್ನೇಹಿತರಿಗೆ ಚಿನ್ನ ಕೊಟ್ಟು ಸುನೀಲ್ ಹಣ ಪಡೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಂಪಾದಿಸಿದ ಹಣದಲ್ಲಿ ಬೆಟ್ಟಿಂಗ್:

ಕಳವು ಮಾಡಿದ ಸಂಪಾದಿಸಿದ ಹಣದಲ್ಲಿ ಆನ್‌ಲೈನ್‌ ಬೆಟ್ಟಿಂಗ್ ಹಾಗೂ ಮೋಜು ಮಸ್ತಿಗೆ ಆರೋಪಿ ವಿನಿಯೋಗಿಸುತ್ತಿದ್ದ. ಬೆಟ್ಟಿಂಗ್ ಹುಚ್ಚಿನಿಂದಲೇ ಆತ ಹಾದಿ ತಪ್ಪಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.