ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಜಲಜೀವನ್ ಮಿಷನ್ ಯೋಜನೆ ಅಡಿಯ ಮನೆಮನೆ ಕೊಳಾಯಿ ಆಳವಡಿಕೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಮಾ. 30ರೊಳಗೆ ತಾಲೂಕಿಗೆ ತುಂಗಭದ್ರಾ ನೀರು ಪೂರೈಕೆಯ ಸಾಧ್ಯತೆ ಇದೆ ಎಂದು ಜಿಪಂ ನೈರ್ಮಲ್ಯ ಹಾಗೂ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ ತಿಳಿಸಿದ್ದಾರೆ.ಜಿಪಂ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಲಜೀವನ್ ಮಿಷನ್ ಯೋಜನೆಯ ಜಾಗೃತಿ ಹಾಗೂ ಅರಿವು ಜಾಥಾ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ತುಂಗಭದ್ರಾ ಯೋಜನೆಯ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜೆಜೆಎಂ ಯೋಜನೆಯ ಮನೆ ಮನೆಗೂ ನಲ್ಲಿ ಆಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು ಶೇ.90ರಷ್ಟು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಅಣೆಕಟ್ಟುನಿಂದ ಮೊಳಕಾಲ್ಮೂರು, ಚಳ್ಳಕರೆ ಹಾಗೂ ಪರುಶುರಾಮಪುರ ಹಾಗೂ ಪಾವಗಡಕ್ಕೆ ತುಂಗಭದ್ರಾ ಹಿನ್ನಿರಿನ ಪೈಪ್‌ಲೈನ್ ಕಾಮಗಾರಿಯ ಪ್ರಗತಿ ಅಂತಿಮ ಹಂತದಲ್ಲಿದೆ.ಈ ಹಿನ್ನಲೆಯಲ್ಲಿ ನೀರಿನ ಸದ್ಬಳಿಕೆ ಹಾಗೂ ಮಿತಿಯಾಗಿ ನೀರು ಬಳಸುವುದು ಹೇಗೆ ಹಾಗೂ ಸ್ವಚ್ಛತೆ ಮತ್ತು ನೈರ್ಮಲ್ಯ ಶುಚಿತ್ವದ ಬಗ್ಗೆ ಜಾಗೃತಿ ಅರಿವು ಮೂಡಿಸಲು ಜೆಜೆಎಂ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ. ತಲ ಮನೆಗೆ 50 ಲೀಟರ್ ನೀರು ಬಳಕೆಗೆ ಅವಕಾಶವಿದ್ದು ದೇವಸ್ಥಾನ, ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಿಗೂ ನಿಯಮನುಸಾರ ಮಿತಿಯೊಳಗೆ ನೀರು ಪೂರೈಕೆ ಅವಕಾಶ ಕಲ್ಪಿಸಲಾಗಿದೆ. ಬಯಲು ಬರ್ಹಿದೇಸೆ ತಡೆ, ಶೌಚಾಲಯ ಸುಸುಜಿತ್ವ ನಿರ್ವಹಣೆ ಹಾಗೂ ಇತರೆ ಸಮಸ್ಯೆ ನಿವಾರಣೆಗೆ ಪ್ರಚಾರದ ವಾಹನದಲ್ಲಿ ಅರಿವು ಮೂಡಿಸಲಾಗುತ್ತದೆ. ಇಂದಿನಿಂದ ಪ್ರತಿ ದಿನ ನಾಲ್ಕು ಗ್ರಾಪಂಗಳಲ್ಲಿ ನಾಲ್ಕು ಮಂದಿ ತಂಡವಿರುವ ಜೆಜೆಎಂ ಪ್ರಚಾರ ವಾಹನ ತೆರಳಿ ಜನತೆಗೆ ಜಾಗೃತಿ ಮೂಡಿಸಲಿದೆ ಎಂದರು.
ಸಾಕುಪ್ರಾಣಿಗಳ ದಾಹ ನಿಗಿಸಲು ತೊಟ್ಟಿಗಳಿಗೆ ಯೋಜನೆಯ ನೀರು ಪೂರೈಸಲಿದ್ದು, ತುಂಗಭದ್ರಾ ಯೋಜನೆಯ ಪೈಪುಲೈನ್ ಕಾಮಗಾರಿಗೆ ತಾಲೂಕಿನ ರಾಮಗಿರಿ ಹಾಗೂ ಬಂಜೆಗೇರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 150ಮೀಟರ್‌ನಷ್ಟು ಅಡೆ ತಡೆ ಇದೆ. ಸಮಸ್ಯೆ ನಿವಾರಿಸಿದ್ದು ಮುಂದಿನ ವಾರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಹಾಲಿ ಲಭ್ಯವಿರುವ ಕುಡಿವ ನೀರು ಸದ್ಯ ಜೆಜೆಎಂ ಯೋಜನೆಯ ಪೈಪ್‌ಲೈನ್ ಮೂಲಕ ಮನೆಮನೆಗೆ ಸರಬರಾಜ್ ಮಾಡಲಿದ್ದೇವೆ. ಮುಂದಿನ ತಿಂಗಳ ಮಾರ್ಚ್ ಅಂತ್ಯಕ್ಕೆ ಪಾವಗಡ ತಾಲೂಕಿಗೆ ತುಂಗಭದ್ರಾ ಯೋಜನೆಯ ಕುಡಿವ ನೀರು ಪೂರೈಕೆ ಆಗಲಿದೆ ಎಂದರು.ಇದೇ ವೇಳೆ ಇಲ್ಲಿನ ಜಿಪಂ ಸಹಾಯಕ ಎಂಜಿನಿಯರ್ ಬಸವಲಿಂಗಪ್ಪ, ಜೆಜೆಎಂ ಯೋಜನೆ ಪ್ರಚಾರ ತಂಡದ ಮುಖ್ಯಸ್ಥ ಶ್ರೀನಾಥ್ ಹಾಗೂ ಚೈತನ್ ಪ್ರಚಾರ ವಾಹನ ಚಾಲಕ ರಮೇಶ್ ಸೇರಿದಂತೆ ಸ್ಥಳೀಯ ಮುಖಂಡರಾದ ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ, ಬ್ರಹ್ಮನಂದರೆಡ್ಡಿ, ನಾಗರಾಜ್ ಇತರೆ ಆನೇಕ ಮಂದಿ ಅಧಿಕಾರಿ ಹಾಗೂ ಮುಖಂಡರು ಇದ್ದರು.