ನರೇಗಾ ಕಾರ್ಮಿಕರಿಗೆ ಹೆಚ್ಚುವರಿ 50 ದಿನ ಕೆಲಸ ನೀಡಿ: ರೂಪ್ಲಾ ನಾಯ್ಕ

| Published : Feb 21 2024, 02:02 AM IST

ನರೇಗಾ ಕಾರ್ಮಿಕರಿಗೆ ಹೆಚ್ಚುವರಿ 50 ದಿನ ಕೆಲಸ ನೀಡಿ: ರೂಪ್ಲಾ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಹರಿಹರ ತಾಲೂಕಿನ ಅರ್ಹ ಕಾರ್ಮಿಕರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಕಾಯ್ದೆ ಪ್ರಕಾರ ದುಡಿಯುವ ಕೈಗಳಿಗೆ ಉದ್ಯೋಗ, ಕೂಲಿ ಹಣ ಪಾವತಿಸುವ ಕೆಲಸ ಆಗಬೇಕು. ಆದರೆ, ಅರ್ಹ ಫಲಾನುಭವಿಗಳಿಗೆ ಹಣವನ್ನು ಸಕಾಲದಲ್ಲಿ ಪಾವತಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಕೂಲಿ ಹಣ ಪಾವತಿಗೆ ಕಾನೂನು ಕ್ರಮ, ಹೆಚ್ಚುವರಿ ಇನ್ನೂ 50 ದಿನ ಮಾನವ ದಿನ ನೀಡುವುದು, ಯೋಜನೆ ಅನುಷ್ಠಾನದ ಲೋಪದೋಷ ಸರಿಪಡಿಸಲು ಒತ್ತಾಯಿಸಿ ಜಿಲ್ಲಾ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯಿಂದ ನಗರದ ಜಿಪಂ ಕಚೇರಿ ಬಳಿ ಮಂಗಳವಾರ ಧರಣಿ ನಡೆಸಲಾಯಿತು.

ನಗರದ ಹೊರ ವಲಯದ ಜಿಪಂ ಕಚೇರಿ ಬಳಿ ಸಂಘಟನೆ ಪದಾಧಿಕಾರಿಗಳ ನೇತೃತ್ವದಲ್ಲಿ ಧರಣಿ ನಡೆಸಿದ ಉದ್ಯೋಗ ಖಾತರಿ ಕೂಲಿ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿ ಜಿಪಂ ಸಿಇಒ ಡಾ.ಸುರೇಶ ಬಿ.ಇಟ್ನಾಳ್‌, ಉಪ ಕಾರ್ಯದರ್ಶಿ ಕೃಷ್ಣನಾಯ್ಕರಿಗೆ ವಿವಿಧ ಬೇಡಿಕೆ ಒಳಗೊಂಡ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆ ಮುಖಂಡ ಕೆ.ಬಿ.ರೂಪ್ಲಾ ನಾಯ್ಕ ಮಾತನಾಡಿ, ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಹರಿಹರ ತಾಲೂಕಿನ ಅರ್ಹ ಕಾರ್ಮಿಕರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಕಾಯ್ದೆ ಪ್ರಕಾರ ದುಡಿಯುವ ಕೈಗಳಿಗೆ ಉದ್ಯೋಗ, ಕೂಲಿ ಹಣ ಪಾವತಿಸುವ ಕೆಲಸ ಆಗಬೇಕು. ಆದರೆ, ಅರ್ಹ ಫಲಾನುಭವಿಗಳಿಗೆ ಹಣವನ್ನು ಸಕಾಲದಲ್ಲಿ ಪಾವತಿಸುತ್ತಿಲ್ಲ ಎಂದು ದೂರಿದರು.

ತಾಲೂಕು, ಜಿಲ್ಲಾಮಟ್ಟದ ಅನುಷ್ಠಾನ ಮತ್ತು ಉಸ್ತುವಾರಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ, ಅಸಡ್ಡೆ ತೋರುತ್ತಿದ್ದಾರೆ. ನಿಜವಾಗಿಯೂ ಕೆಲಸ ಮಾಡುತ್ತಿರುವ ಬಡವರು, ಕೂಲಿ ಕಾರ್ಮಿಕರು, ಶ್ರಮಿಕ ಮಹಿಳೆಯರು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ವಿಫಲವಾಗುತ್ತಿದ್ದಾರೆ ಎಂದು ಆರೋಪಿಸಿದರು.

ಬಾಕಿ ಇರುವ ಕೂಲಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಅರ್ಹ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಬ್ಯಾಂಕ್ ಖಾತೆಗೆ ಬರುವಂತೆ ಜಮಾ ಮಾಡಬೇಕು. ಅನುಷ್ಟಾನಗೊಂಡ ಕಾಮಗಾರಿಗಳಲ್ಲಿ ನೈಕ ಕೂಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳದೇ, ನಕಲಿ ಕೂಲಿ ಕಾರ್ಮಿಕರನ್ನು ಸೃಷ್ಟಿಸಿ, ಅಂತಹವರ ಖಾತೆಗಳಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಕಾಯಕ ಬಂಧುಗಳ ಹಣವನ್ನು ತಕ್ಷಣವೇ ಪಾವತಿ ಮಾಡಬೇಕು. ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮಟ್ಟದಲ್ಲಿ ಖಾತರಿ ಕೂಲಿ ಕಾರ್ಮಿಕರ ಸಭೆ ಕನಿಷ್ಟ 2 ತಿಂಗಳಿಗೊಮ್ಮೆ ಕಡ್ಡಾಯವಾಗಿ ಕರೆಯಬೇಕು. ಕಾರ್ಮಿಕರಿಗೆ ಸಲಕರಣೆ ವೆಚ್ಚ ಕಡ್ಡಾಯ ನೀಡಬೇಕು. ವಿಶೇಷ ಚೇತನರಿಗೆ ಅನುಕೂಲಕರವಾದ ಉದ್ಯೋಗ ನೀಡಬೇಕು. ಇಡೀ ರಾಜ್ಯವನ್ನೇ ತೀವ್ರ ಬರ ಆವರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 50 ದಿನಗಳ ಕೆಲಸ ಕಡ್ಡಾಯ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ಎ.ಕೆ.ಗುಡ್ಡದಯ್ಯ,ಮುಖಂಡರಾದ ಕೆ.ಎಂ.ವೀರಮ್ಮ, ಆರ್.ತಿಪ್ಪೇರುದ್ರಪ್ಪ, ನೇತ್ರಾವತಿ, ರೇಖಾ, ಬಿ.ಎಚ್.ಬಸವರಾದ, ಹೇಮಾವತಿ, ವಂದನಾ, ಗೀತಮ್ಮ, ಗಂಗಮ್ಮ, ರೇಖಾ, ಮುದುಕಪ್ಪ, ಗೀತಮ್ಮ, ತಿಪ್ಪೇಶ, ಗಂಗಮ್ಮ, ಹೇಮಮ್ಮ, ಸುಮಲತಾ, ಸಾವಿತ್ರಮ್ಮ, ಆರ್.ತಾರಾ, ಸಿ.ಶಶಿಕಲಾ, ನೀಲಮ್ಮ, ಪದ್ಮ, ನಾಗರತ್ನ, ಸ್ವಪ್ನಾ, ಸುಧಾ, ತಿಪ್ಪಮ್ಮ, ಲಕ್ಷ್ಮಿ, ಎ.ಶೃತಿ, ವೃಂದಮ್ಮ ಇತರರಿದ್ದರು.