ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹುನ್ನಾರ

| Published : Aug 30 2025, 01:02 AM IST

ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹುನ್ನಾರ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಧರ್ಮಸ್ಥಳ ಚಲೋ ಅಭಿಯಾನ ನಡೆಸುತ್ತಿದ್ದು, ಅದರ ಭಾಗವಾಗಿ ರಾಜ್ಯ ಸರ್ಕಾರದ ಧರ್ಮವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹುನ್ನಾರ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಧರ್ಮಸ್ಥಳ ಚಲೋ ಅಭಿಯಾನ ನಡೆಸುತ್ತಿದ್ದು, ಅದರ ಭಾಗವಾಗಿ ರಾಜ್ಯ ಸರ್ಕಾರದ ಧರ್ಮವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

ನಗರದ ಗಾಂಧಿ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ ವೃತ್ತದವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ರ‍್ಯಾಲಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಧರ್ಮಸ್ಥಳ ಪವಿತ್ರ ಕ್ಷೇತ್ರ, ಹಿಂದೂಗಳು ಭಕ್ತಿಭಾವದಿಂದ ನಡೆದುಕೊಳ್ಳುವ ಧರ್ಮಸ್ಥಳದ ಮೇಲೆ ಕಳಂಕ ತರುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ವನಾಶವಾಗುತ್ತದೆ. ಶಿವ ಎಲ್ಲವನ್ನೂ ನೋಡುತ್ತಿದ್ದಾನೆ, ಆತ ಮೂರನೇಯ ಕಣ್ಣು ತೆರೆದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾರೋ ಒಬ್ಬ ಅವಿವೇಕಿ ಹೇಳಿದ ಮಾತ್ರಕ್ಕೆ ಅಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುವುದೆಂದರೆ ಇನ್ನೇನು?. ಇದು ಧರ್ಮವಿರೋಧಿ ಕಾರ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಧರ್ಮಸ್ಥಳದ ವಿಷಯವಾಗಿ ರಾಜ್ಯ ಸರ್ಕಾರ ಅಧರ್ಮದಿಂದ ನಡೆದುಕೊಳ್ಳುತ್ತಿದೆ. ಯಾರದ್ದೋ ಮಾತು ಕೇಳಿ ಈ ರೀತಿ ತನಿಖೆ ನಡೆಸುವುದು ಸರಿಯಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಧರ್ಮಸ್ಥಳ ಒಂದು ಪವಿತ್ರ ಅಧ್ಯಾತ್ಮಿಕಮ, ಧಾರ್ಮಿಕ ಕ್ಷೇತ್ರ. ಅನೇಕ ಬಡವರ ಪುಣ್ಯಕ್ಷೇತ್ರ. ಶ್ರೇಷ್ಠತೆಗೆ ಇನ್ನೊಂದು ಹೆಸರಾಗಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಪ್ರೋತ್ಸಾಹ ನೀಡಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಡಾ.ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ರಾಹುಲ್‌ ಜಾಧವ, ರವಿಕಾಂತ ಬಗಲಿ, ಸಂಜೀವ ಐಹೊಳಿ, ಗೋಪಾಲ ಘಟಕಾಂಬಳೆ, ಮಂಜುನಾಥ ಮೀಸೆ, ಸ್ವಪ್ನಾ ಕಣಮುಚನಾಳ, ವಿಜಯ ಜೋಶಿ, ಸಂದೀಪ ಪಾಟೀಲ, ವಿವೇಕಾನಂದ ಡಬ್ಬಿ, ಮಲ್ಲಿಕಾರ್ಜುನ ದೇವರಮನಿ, ಭರತ ಕೋಳಿ, ಶ್ರೀಕಾಂತ ಸಿಂಧೆ, ರಾಜಕುಮಾರ ಸಗಾಯಿ, ಸಿದ್ದು ಮಲ್ಲಿಕಾರ್ಜುನಮಠ, ಕಾಸುಗೌಡ ಬಿರಾದಾರ, ಶಿವಾನಂದ ಭುಯ್ಯಾರ. ಶರಣು ಸಬರದ ಉಪಸ್ಥಿತರಿದ್ದರು.