ಪುಟಾಣಿಗಳ ಕೈಯಲ್ಲಿ ಅರಳಿದ ಪರಿಸರಸ್ನೇಹಿ ಜೀವ ಗಣಪ

| Published : Aug 19 2025, 01:00 AM IST

ಪುಟಾಣಿಗಳ ಕೈಯಲ್ಲಿ ಅರಳಿದ ಪರಿಸರಸ್ನೇಹಿ ಜೀವ ಗಣಪ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಇದೊಂದು ವಿನೂತನ ಕಾರ್ಯಕ್ರಮ, ಮಕ್ಕಳಲ್ಲಿ ಹಬ್ಬ ಹರಿದಿನಗಳು, ಧಾರ್ಮಿಕ ಆಲೋಚನೆಗಳ ಅರಿವಿನೊಂದಿಗೆ ಪರಿಸರದ ಜಾಗೃತಿ ಮೂಡಿಸುವ ಪ್ರಯತ್ನ ಅಲ್ಲಿ ಯಶಸ್ವಿಯಾಗಿ ನಡೆದಿತ್ತು. ನೆರೆದಿದ್ದ ಮಕ್ಕಳಲ್ಲಿ ದೇಸಿ ಸೊಗಡಿನ ಕಲಾತ್ಮಕ ಬೆರಗುಗಳು ರೋಮಾಂಚನ ಮೂಡಿಸಿದರೆ, ಹಿರಿಯರಲ್ಲಿ ಹೊಸ ಪೀಳಿಗೆಗೆ ತಾವು ನೀಡುತ್ತಿರುವ ಮಾರ್ಗದರ್ಶನದ ಬಗ್ಗೆ ಹಮ್ಮು ಮನೆಮಾಡಿತ್ತು.

ದೊಡ್ಡಬಳ್ಳಾಪುರ: ಇದೊಂದು ವಿನೂತನ ಕಾರ್ಯಕ್ರಮ, ಮಕ್ಕಳಲ್ಲಿ ಹಬ್ಬ ಹರಿದಿನಗಳು, ಧಾರ್ಮಿಕ ಆಲೋಚನೆಗಳ ಅರಿವಿನೊಂದಿಗೆ ಪರಿಸರದ ಜಾಗೃತಿ ಮೂಡಿಸುವ ಪ್ರಯತ್ನ ಅಲ್ಲಿ ಯಶಸ್ವಿಯಾಗಿ ನಡೆದಿತ್ತು. ನೆರೆದಿದ್ದ ಮಕ್ಕಳಲ್ಲಿ ದೇಸಿ ಸೊಗಡಿನ ಕಲಾತ್ಮಕ ಬೆರಗುಗಳು ರೋಮಾಂಚನ ಮೂಡಿಸಿದರೆ, ಹಿರಿಯರಲ್ಲಿ ಹೊಸ ಪೀಳಿಗೆಗೆ ತಾವು ನೀಡುತ್ತಿರುವ ಮಾರ್ಗದರ್ಶನದ ಬಗ್ಗೆ ಹಮ್ಮು ಮನೆಮಾಡಿತ್ತು.

ದೊಡ್ಡಬಳ್ಳಾಪುರದ ನಾಗರಕೆರೆ ಏರಿಯ ಆಚೆಗುಡಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಅಂಗಳ ಮಕ್ಕಳಿಂದ ಕಿಕ್ಕಿರಿದು ತುಂಬಿತ್ತು. ಮಕ್ಕಳ ಕೈಯಲ್ಲಿ ಹದವಾದ ಜೇಡಿಮಣ್ಣು, ಗಣಪ ಮೂರ್ತಿಯ ತರಾವರಿ ಆಕೃತಿಗಳು ರೂಪ ತಳೆಯುವ ಧಾವಂತ ಗಮನ ಸೆಳೆದಿತ್ತು.

ಇಲ್ಲಿನ ನಾಗರಕೆರೆ ಜೀವಿ-ವೈವಿಧ್ಯ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗಾಗಿ ಪರಿಸರ ಸ್ನೇಹಿ ಜೀವಗಣೇಶ ಮೂರ್ತಿ ತಯಾರಿಸುವ ಶಿಬಿರದಲ್ಲಿ ಕಂಡು ಬಂದ ದೃಶ್ಯ ಕಾವ್ಯವಿದು.

ಅತ್ಯಂತ ಪುಟ್ಟ ವಾದ್ಯ ಗಣಪತಿ ನಿರ್ಮಿಸುವ ಮೂಲಕ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ದಾಖಲೆ ನಿರ್ಮಿಸಿರುವ ಕಲಾವಿದೆ ಜ್ಯೋತಿ ಕಾಂತರಾಜು ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೆ ಸುಲಭವಾಗಿ ಗಣಪತಿ ಮೂರ್ತಿ ತಯಾರಿಸುವ ವಿಧಾನ ಹೇಳಿಕೊಟ್ಟರು. ಪರಿಸರಸ್ನೇಹಿ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಭವಿಷ್ಯದ ಅಪಾಯಗಳನ್ನು ತಡೆಗಟ್ಟುವ ಎಚ್ಚರವನ್ನು ಪುಟಾಣಿ ಮಕ್ಕಳಿಗೆ ನೀತಿ ಪಾಠದಂತೆ ಹೇಳಲಾಯಿತು.

ಸುಮಾರು 75ಕ್ಕೂ ಹೆಚ್ಚು ಮಕ್ಕಳು ತಮ್ಮ ಪೋಷಕರೊಂದಿಗೆ ಬಂದು ಉತ್ಸಾಹದಿಂದ ಭಾಗಿಯಾಗಿದ್ದರು. ಎಲ್ಲರೂ ಶಿಬಿರದಲ್ಲಿ ತಮ್ಮದೇ ಆದ ವಿಭಿನ್ನ ಮಾದರಿಯ ಗಣಪ ಮೂರ್ತಿಗಳನ್ನು ತಯಾರಿಸಿ, ಮೂರ್ತಿಯ ಒಳಗೆ ಹಣ್ಣಿನ ಗಿಡದ ಬೀಜಗಳನ್ನು ಇಟ್ಟು ಜೀವ ಗಣಪತಿಯನ್ನಾಗಿ ಮಾಡಿ ಖುಷಿಪಟ್ಟು ಮನೆಗಳಿಗೆ ತೆಗೆದುಕೊಂಡು ಹೋದರು.

ಗಣಪಮೂರ್ತಿ ತಯಾರಿಕೆಯ ಜತೆಗೆ ಹಾಡು, ಪರಿಸರ ಜಾಗೃತಿ, ಜಲಮೂಲಗಳ ಸಂರಕ್ಷಣೆ ಮತ್ತು ರಾಸಾಯನಿಕ, ಕೃತಕ ಬಣ್ಣಗಳಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಿತು.

ಈ ವೇಳೆ ಮಾಹಿತಿ ನೀಡಿದ ಮುಖಂಡರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯತೆಯಾಗಬೇಕು. ಹಬ್ಬ ಅಥವಾ ಸಂಭ್ರಮದ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆಯಾಗುವ ಕೆಲಸ ಆಗಬಾರದು. ಹೀಗಾಗಿ ಮಣ್ಣಿನಿಂದ ಅಥವಾ ಅರಿಶಿಣ, ಸಗಣಿ ಇತ್ಯಾದಿ ನಿಸರ್ಗ ಸಹಜ ವಸ್ತುಗಳಿಂದ ಗಣಪ ಮೂರ್ತಿಯನ್ನು ತಯಾರಿಸಿ ಪೂಜಿಸುವುದು ಅತ್ಯಂತ ಅರ್ಥಪೂರ್ಣ ಎನಿಸಿದೆ. ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಲ್ಪಡುವ ಗಣಪ ಮೂರ್ತಿಗಳನ್ನು ಜಲಮೂಲಗಳಾದ ಕೆರೆ, ಕುಂಟೆಗಳಲ್ಲಿ ವಿಸರ್ಜನೆ ಮಾಡುವುದರಿಂದ ಅಪಾಯಕಾರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಪರಿಸರ ಪೂರಕ ಹಬ್ಬದ ಆಚರಣೆಗೆ ಪ್ರತಿಯೊಬ್ಬರೂ ಒತ್ತು ನೀಡುವುದು ಅಗತ್ಯ ಎಂದರು.

ಈ ಕುರಿತು ಜಿಲ್ಲಾಡಳಿತ ಸೇರಿದಂತೆ ಸರ್ಕಾರದ ಮಾರ್ಗದರ್ಶನವನ್ನು ಪಾಲಿಸಲು ಎಲ್ಲರೂ ಆದ್ಯತೆ ನೀಡಬೇಕು. ಗಣಪ ಮೂರ್ತಿಯನ್ನು ಕೂರಿಸಿ ಪೂಜಿಸುವುದರ ಜೊತೆಗೆ ನಿಸರ್ಗಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ ಶಬ್ಧಮಾಲಿನ್ಯ, ಜಲಮಾಲಿನ್ಯಗಳನ್ನು ತಪ್ಪಿಸಬೇಕು. ವಿದ್ಯುತ್ ಅಪವ್ಯಯವಾಗದಂತೆ ನಿಗಾವಹಿಸುವುದು ಅಗತ್ಯ ಎಂದು ತಿಳಿಸಿದರು.

ನಾಗದಳ ತಂಡದ ಸಿ.ನಟರಾಜ್, ಯುವ ಸಂಚಲನದ ಚಿದಾನಂದಮೂರ್ತಿ, ಮಂಜುನಾಥ್, ಕರವೇ ಮುಖಂಡ ರಾಜಘಟ್ಟ ರವಿ ಸೇರಿದಂತೆ ನಾಗರಕೆರೆ ಜೀವಿ-ವೈವಿಧ್ಯ ಸಂರಕ್ಷಣಾ ಸಮಿತಿಯ ಹಲವು ಮುಖಂಡರು ಹಾಜರಿದ್ದರು.

17ಕೆಡಿಬಿಪಿ2-

ಪುಟಾಣಿಗಳು ತಾವು ತಯಾರಿಸಿದ ತರಾವರಿ ಗಣಪ ಮೂರ್ತಿಗಳೊಂದಿಗೆ ಸಂಭ್ರಮಿಸಿದರು.