ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ಕೇಂದ್ರ ಶಿಕ್ಷಣ ಇಲಾಖೆ ಖಾತೆ ನೀಡಿರುವುದು ಧಾರವಾಡ ಜಿಲ್ಲೆಯಲ್ಲಿ ಅವರ ಅಭಿಮಾನಿಗಳಲ್ಲಿ ಹರ್ಷದ ಹೊನಲು ಹೊಮ್ಮಿಸ್ಸಿದೆ. ಈ ಮೂಲಕ ಕೇಂದ್ರ ಶಿಕ್ಷಣ ಸಚಿವರಾಗಿ ರಾಜ್ಯದ ಮೊದಲ ವ್ಯಕ್ತಿಯಾಗಿದ್ದಾರೆ. ಈ ನಡುವೆ ಶನಿವಾರ ಸಂಜೆಯೇ ದಿಢೀರ್‌ನೆ ಜೋಶಿ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ.
ಅದರಲ್ಲೂ ಧಾರವಾಡವನ್ನು ವಿದ್ಯಾಕಾಶಿ ಎಂದು ಕರೆಯಲಾಗುತ್ತದೆ. ವಿದ್ಯಾಕಾಶಿಯ ಸಂಸದರೇ ವಿದ್ಯಾಮಂತ್ರಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾದಂತಾಗಿದೆ. ಜಿರಳೆ ಜನತಾ ಪಾರ್ಟಿಯ (ಜಿಜೆಪಿ) ಪ್ರತಿಭಟನೆಯಿಂದಾಗಿ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು. ಅತ್ತ ರಾಜೀನಾಮೆ ನೀಡುತ್ತಿದ್ದಂತೆ ಇತ್ತ ಕೇಂದ್ರ ಹೊಸ ನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಖಾತೆಯ ಹೊಂದಿದ್ದ ಪ್ರಹ್ಲಾದ ಜೋಶಿ ಅವರಿಗೆ ಶಿಕ್ಷಣ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕಳೆದ ಬಾರಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದ ಜೋಶಿ ಅವರು, ಈ ಅವಧಿಯಲ್ಲಿ ಅವರಿಗೆ ವಹಿಸಿರುವ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಹೀಗಾಗಿ ಸದ್ಯದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಿಕ್ಷಣ ಖಾತೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ನಾಯಕ ಎಂದುಕೊಂಡು ಜೋಶಿ ಅವರಿಗೆ ಹೆಚ್ಚುವರಿಯಾಗಿ ಈ ಖಾತೆ ನೀಡಲಾಗಿದೆ ಎಂದು ವಿಶ್ಲೇಷಣೆ ನಡೆದಿದೆ.ಮೊದಲ ಸಚಿವ:
ಮೊದಲು ಮಾನವ ಸಂಪನ್ಮೂಲ ಸಚಿವಾಲಯದ (ಎಚ್‌ಆರ್‌ಡಿ) ವ್ಯಾಪ್ತಿಯಲ್ಲೇ ಶಿಕ್ಷಣ ಇಲಾಖೆಯೂ ಬರುತ್ತಿತ್ತು. ಹಿಂದೆ 1996-98ರ ವರೆಗೆ ಎಸ್.ಆರ್. ಬೊಮ್ಮಾಯಿ ಇದರ ಸಚಿವರು ಆಗಿದ್ದರು. ಆಗ ಶಿಕ್ಷಣ ಖಾತೆಯೂ ಅದರಲ್ಲೇ ಇತ್ತು. ಇದೀಗ ಶಿಕ್ಷಣ ಖಾತೆ ಪ್ರತ್ಯೇಕವಾಗಿದೆ. ಹೀಗಾಗಿ ಪ್ರತ್ಯೇಕ ಖಾತೆಯಾದ ಬಳಿಕ ಶಿಕ್ಷಣ ಖಾತೆಗೆ ರಾಜ್ಯದ ಮೊದಲ ಸಚಿವರಾಗಿರುವುದು ಜೋಶಿ ಎಂಬಂತಾಗಿದೆ.
5ನೇ ಬಾರಿ ಸಂಸದ:
ಬಿಎ ಪದವೀಧರರಾಗಿರುವ ಜೋಶಿ ಅವರು, ಈದ್ಗಾ ಮೈದಾನದ ರಾಷ್ಟ್ರಧ್ವಜ ಹಾರಾಟ ಹೋರಾಟದಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು. ಬಿಜೆಪಿ ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷರಾಗಿ ಸಮರ್ಥವಾಗಿ ನಿಭಾಯಿಸಿದವರು. 2004ರಿಂದ ಜೋಶಿ ಅವರು 5ನೇ ಬಾರಿಗೆ ಸಂಸದರಾಗಿದ್ದಾರೆ. ಕಳೆದ ಅವಧಿ ಹಾಗೂ ಈ ಅವಧಿ ಎರಡು ಬಾರಿ ಸಚಿವರಾಗಿದ್ದಾರೆ. ಇದೀಗ ಶಿಕ್ಷಣ ಖಾತೆ ಹೆಚ್ಚುವರಿ ಜವಾಬ್ದಾರಿ ಸಿಕ್ಕಂತಾಗಿದೆ.ನಿರೀಕ್ಷೆ ಬೆಟ್ಟದಷ್ಟು?:
ಇದೀಗ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಇಡೀ ದೇಶದ ಗಮನ ಇದೀಗ ಜೋಶಿ ಅವರ ಮೇಲಿದೆ. ಯುವ ಸಮುದಾಯದ ನಿರೀಕ್ಷೆ ಬೆಟ್ಟದಷ್ಟಿವೆಶಿಕ್ಷಣ ಇಲಾಖೆಯ ಆಡಳಿತ ಸುಧಾರಿಸಬೇಕು ಎಂಬ ಬೇಡಿಕೆ ಇದ್ದು ಅದ್ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಕಾಯ್ದು ನೋಡಬೇಕಿದೆ ಅಷ್ಟೇ!
