ಉದಯೋನ್ಮುಖ ಪತ್ರಕರ್ತರ ಕೌಶಲ್ಯ ಉತ್ತಮಗೊಳಿಸುವ ಪ್ರಯತ್ನ

| Published : Feb 18 2025, 12:30 AM IST

ಉದಯೋನ್ಮುಖ ಪತ್ರಕರ್ತರ ಕೌಶಲ್ಯ ಉತ್ತಮಗೊಳಿಸುವ ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ 2 ದಿನಗಳ ಮಾಧ್ಯಮ ಹಬ್ಬ (ಮೀಡಿಯಾ ಫೆಸ್ಟ್‌- 2025) ಕಲ್ಯಾಣ ನಾಡಿನ 7 ಜಿಲ್ಲೆಗಳು ಸೇರಿದಂತೆ ಇಡೀ ಉತ್ತರ ಕರ್ನಾಟಕದ ಉದಯೋನ್ಮುಖ ಮಾಧ್ಯಮ ಲೀಡರ್‌ಗಳನ್ನೆಲ್ಲ ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಮೊದಲ ದಿನವೇ ಯಶಸ್ವಿಯಾಯ್ತು.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ.ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ 2 ದಿನಗಳ ಮಾಧ್ಯಮ ಹಬ್ಬ (ಮೀಡಿಯಾ ಫೆಸ್ಟ್‌- 2025) ಕಲ್ಯಾಣ ನಾಡಿನ 7 ಜಿಲ್ಲೆಗಳು ಸೇರಿದಂತೆ ಇಡೀ ಉತ್ತರ ಕರ್ನಾಟಕದ ಉದಯೋನ್ಮುಖ ಮಾಧ್ಯಮ ಲೀಡರ್‌ಗಳನ್ನೆಲ್ಲ ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಮೊದಲ ದಿನವೇ ಯಶಸ್ವಿಯಾಯ್ತು.ವಾರ್ತಾ ಇಲಾಖೆ, ಮಾಧ್ಯಮ ಅಕ್ಯಾಡೆಮಿ, ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿರುವ ಮೀಡಿಯಾ ಫೆಸ್ಟ್‌ನಲ್ಲಿ ಭವಿಷ್ಯದ ಪತ್ರಕರ್ತರಾಗುವ ನೂರಾರು ಯುವಕ- ಯುವತಿಯರು ಸೇರಿದ್ದರು.ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುಮಾರು 200 ವಿದ್ಯಾರ್ಥಿಗಳು ಮತ್ತು ಕಾಲೇಜಿನ ಪ್ರಾಧ್ಯಾಪಕರು ಭಾಗವಹಿಸಬಹುದೆಂಬ ನಿರೀಕ್ಷೆ ಹೊಂದಿದ್ದರೂ 100ಕ್ಕೂ ಅಧಿಕ ಯುವ ಪತ್ರಕರ್ತರು ಅಲ್ಲಿದ್ದರು.ಪತ್ರಿಕೋದ್ಯಮ ಅದೆಂತಹ ಮಾಧ್ಯಮ ಉದಯೋನ್ಮುಖರನ್ನು ಬಯಸುತ್ತದೆ, ಅಂತಹವರನ್ನು ಕಾಲೇಜಿನಿಂದ ನೇರವಾಗಿ ಸುದ್ದಿ ಮನೆಗೆ ಕರೆತರಲು ಏನೆಲ್ಲಾ ಮಾಡಬೇಕಿದೆ, ಅದೆಂತಹ ಕಸರತ್ತುಗಳನ್ನು ನಡೆಸಬೇಕಿದೆ ಎಂಬುದನ್ನೆಲ್ಲ ಸವಿಸ್ತಾರವಾಗಿ ಚರ್ಚಿಸುವ ಉದ್ದೇಶದ ಮೀಡಿಯಾ ಹಬ್ಬ ಮೊದಲ ದಿನವೇ ಶೇ.50 ಯಶಸ್ವಿ ಕಂಡಿತ್ತು.ಈ ಮಾಧ್ಯಮೋತ್ಸವದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಲಾಗಿತ್ತು. ಉತ್ಸವ ಶುರುವಾದ ಬೆನ್ನಲ್ಲೇ ಕೆಕೆಆರ್‌ಡಿಸಿ ಅಧ್ಯಕ್ಷ ಅಜಯ್‌ ಸಿಂಗ್‌ ಅವರ ಸುದ್ದಿಗೋಷ್ಠಿ ನಡೆಸುವ ಮೂಲಕ ಸುದ್ದಿಗೋಷ್ಠಿ ಹಾಗೂ ಪ್ರಶ್ನೆಗಳನ್ನು ಹೇಗೆ ಕೇಳಬೇಕು ಎಂಬುದರ ತರಬೇತಿ ನೀಡುವ ಯತ್ನ ನಡೆಯಿತು. ಕಲ್ಯಾಣ ನಾಡಿನ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಡಾ.ಅಜಯ್ ಸಿಂಗ್‌ ಮಾತಿಗೆ ಯುವ ಮಾಧ್ಯಮ ಮಿತ್ರರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ವರದಿ ಮಾಡಿದ್ದು ಗಮನ ಸೆಳೆಯಿತು.ವೈಯಕ್ತಿಕ ಸ್ಪರ್ಧೆಗಳು ಮತ್ತು ಗುಂಪು ಸ್ಪರ್ಧೆಗಳು ಎಂದು ಎರಡು ವಿಭಾಗಗಳಾಗಿ ಸ್ಪರ್ಧೆಗಳನ್ನು ವಿಂಗಡಿಸಲಾಗಿದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ನೇರ ಪತ್ರಿಕಾಗೋಷ್ಠಿ ವರದಿ ಮಾಡುವಿಕೆ, ಪಿಟಿಸಿ ಮತ್ತು ಟಿವಿ ವರದಿ ಮಾಡುವಿಕೆ, ಸ್ಪಾಟ್ ಛಾಯಾಗ್ರಹಣ, ರೇಡಿಯೋ ಜಾಕಿ, ನುಡಿಚಿತ್ರ, ಜಾಹೀರಾತು ಬರವಣಿಗೆ, ಸಾಮಾಜಿಕ ಮಾಧ್ಯಮದ ವರದಿ ಮಾಡುವಿಕೆ ಮತ್ತು ಮುಖ್ಯಾಂಶಗಳನ್ನು ಬರೆಯುವ ಕಲೆ ಸೇರಿವೆ. ಗುಂಪು ಸ್ಪರ್ಧೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ರಸಪ್ರಶ್ನೆ, “ನಮ್ಮೂರ ಭಾಷೆ–ವರವಾ ? ಶಾಪವಾ ?” ಇವೆಲ್ಲವೂ ಇದ್ದು ಭವಿಷ್ಯದ ಮಾಧ್ಯಮ ಲೀಡರ್‌ಗಳನ್ನ ಸಿದ್ಧಪಡಿುವ ಕೆಲಸದ ಭಾಗವಾಗಿದ್ದವು.ಪತ್ರಕರ್ತರ ಕೌಶಲ್ಯ ಹದಗೊಳಿಸುವ ಯತ್ನ:ಉದಯೋನ್ಮುಖ ಪತ್ರಕರ್ತರ ಕೌಶಲ್ಯಗಳನ್ನು ಉತ್ತಮಗೊಳಿಸುವ ಎರಡು ಕಾರ್ಯಾಗಾರಗಳು ಇಲ್ಲಿ ನಡೆದವು. ಹಿರಿಯ ಪತ್ರಕರ್ತ ಮತ್ತು ಆಲ್ಮಾ ಮೀಡಿಯಾದ ಸಂಸ್ಥಾಪಕ ಗೌರೀಶ್ ಅಕ್ಕಿ, ಮಾಧ್ಯಮದ ಸ್ಪರ್ಧಾತ್ಮಕ ಜಗತ್ತನ್ನು ಪ್ರವೇಶಿಸುವ ಹಾಗೂ ಸವಾಲುಗಳನ್ನು ಎದುರಿಸಲು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ಸಿದ್ಧಪಡಿಸುವ ಕುರಿತು ಮಾತನಾಡಿದರೆ, ನಕಲಿ ಸುದ್ದಿಗಳನ್ನು ಹೇಗೆ ಗುರುತಿಸುವುದು ಎಂಬುದರ ಬಗ್ಗೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಹಿರಿಯ ಪತ್ರಕರ್ತೆ ಹಾಗೂ ಪ್ರಾಧ್ಯಾಪಕಿ ಪ್ರೊ.ಕಾಂಚನಾ ಕೌರ್ ಮಾತನಾಡಿದರು. ಕಾರ್ಯಾಗಾರ, ನುರಿತ ಪತ್ರಕರ್ತರಿಂದ ಗೋಷ್ಠಿ, ಸ್ಪರ್ಧೆಗಳು ನಡೆಸುವ ಮೂಲಕ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಮೀಡಿಯಾ ಹಬ್ಬ ಉತ್ತಮ ವೇದಿಕೆಯಾಗಿತ್ತು.ನಮ್ಮಲ್ಲಿ ಎಲ್ಲಾ ವಿಷಯಗಳ ಫೆಸ್ಟ್‌ ನಡೆಯುತ್ತಿದ್ದವು, ಇದೇ ಮೊದಲ ಬಾರಿಗೆ ಮೀಡಿಯಾ ಫೆಸ್ಟಿವಲ್‌ ನಡೆಯುತ್ತಿರೋದು ಸಂತಸದ ಸಂಗತಿ. ಭವಿಷ್ಯದ ಸ್ಪರ್ಧಾತ್ಮಕ ಪತ್ರಕರ್ತರಲ್ಲಿ ಅತ್ಯುತ್ತಮರನ್ನು ಹೊರತರಲು ಹತ್ತು ಹಲವು ಸ್ಪರ್ಧೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಈ ಹಬ್ಬವನ್ನು ಪ್ರತಿವರ್ಷ ಆಯೋಜಿಸಲು ನಿರ್ಧರಿಸಲಾಗಿದೆ.- ಡಾ.ಅನೀಲಕುಮಾರ್‌ ಬಿಡವೆ, ಕುಲಪತಿಗಳು, ಶರಣಬಸವ ವಿವಿ. ಕಲಬುರಗಿ