ಕನಕದಾಸರು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಬದಲಾಗಿ ಇಡೀ ದೇಶ ಹಾಗೂ ನಾಡಿನ ಶ್ರೇಷ್ಠ ಆಸ್ತಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ರಾಯಚೂರು
ದಾಸ ಶ್ರೇಷ್ಠ,ಭಕ್ತ ಶ್ರೇಷ್ಠ, ಸಂತಕವಿ ಕನಕದಾಸರು ತಮ್ಮ ಕೀರ್ತನೆ ಮತ್ತು ಸಾಹಿತ್ಯಗಳ ಮೂಲಕ ಸಮಾಜದ ಸುಧಾರಣೆಗೆ ಹಾಗೂ ಮಾನವ ಕುಲದ ಒಳಿತಿಗೆ ಶ್ರಮಿಸಿ ಮಹಾನ್ ಚೇತನರಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹೇಳಿದರು.ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಸಂತಕವಿ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, ಕನಕದಾಸರು ರಾಜನಂತೆ ಅಧಿಕಾರ ಮತ್ತು ಸಂಪತ್ತು ಹೊಂದಿದ್ದರೂ ಎಲ್ಲವನ್ನೂ ತ್ಯಾಗ ಮಾಡಿ, ವಚನ ಹಾಗೂ ಕೀರ್ತನೆಗಳ ಮೂಲಕ ಸಮಾಜ ಸುಧಾರಣೆ ಮಾಡಿ, ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಇಂದಿನ ಕಾಲದಲ್ಲಿ ಸಣ್ಣ ತ್ಯಾಗ ಮಾಡುವುದೂ ಕಷ್ಟವಾಗಿರುವಾಗ, ಅವರ ತ್ಯಾಗಮಯ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ. ಅವರು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಬದಲಾಗಿ ಇಡೀ ದೇಶ ಹಾಗೂ ನಾಡಿನ ಶ್ರೇಷ್ಠ ಆಸ್ತಿಯಾಗಿದ್ದಾರೆ ಎಂದರು.
ಕನಕ ಭವನ ನಿರ್ಮಾಣದ ಭರವಸೆ: ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನದ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಶಾಸಕರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಅದನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ, ಮುಂದಿನ ಜಯಂತಿಯನ್ನು ಅದೇ ಭವನದಲ್ಲಿ ಆಚರಿಸುವ ಭರವಸೆ ನೀಡಿದರು.ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಮಾತನಾಡಿ, ಭಕ್ತ ಕನಕದಾಸರು ''''''''ತಿಮ್ಮಪ್ಪ ನಾಯಕ'''''''' ಎಂಬ ಹೆಸರಿನಲ್ಲಿ ಜನಿಸಿ, ಮೂಲತಃ ಪಾಳೇಗಾರರಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಯುದ್ಧದ ಭೀಕರತೆಯನ್ನು ಕಂಡು ಮನನೊಂದು ತಮ್ಮ ಅಧಿಕಾರ, ಸಂಪತ್ತು ಎಲ್ಲವನ್ನೂ ತ್ಯಜಿಸಿ ಭಕ್ತಿ ಮಾರ್ಗದಲ್ಲಿ ತೊಡಗಿಸಿಕೊಂಡರು. ಕಾಗಿನೆಲೆ ಆದಿಕೇಶವ ಎಂಬ ಅಂಕಿತನಾಮದಲ್ಲಿ ನೂರಾರು ಕೀರ್ತನೆಗಳು ಹಾಗೂ ಮುಂಡಿಗೆಗಳನ್ನು ರಚಿಸುವ ಮೂಲಕ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು ಎಂದು ಹೇಳಿದರು.
ತಾಲೂಕಿನ ಜಾಗೀರ ವೆಂಕಟಾಪೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ಮುಕ್ಕನಗೌಡ ಪೋಲೀಸ್ ಪಾಟೀಲ್ ಅವರು ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಶಿಕ್ಷಕಿ ಗಿರಿಜಾ, ಪತ್ರಕರ್ತ ಸಿದ್ದಯ್ಯಸ್ವಾಮಿ ಕುಕನೂರು, ಮುಖಂಡ ಬಿ.ಬಸವರಾಜ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕನಕಶ್ರೀ ಹಾಗೂ ಕನಕಾನುಗ್ರಹ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಸಮಾಜದ ಕಾರ್ಯದರ್ಶಿ ಹನುಮಂತಪ್ಪ ಜಾಲಿಬೆಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾನಿಧ್ಯವನ್ನು ಮಟಮಾರಿ ಶಿವಾನಂದ ಮಠದ ಜ್ಞಾನಾನಂದ ಸ್ವಾಮಿ, ಲಕ್ಷ್ಮಣ ತಾತ, ಮುಂಡರಗಿಯ ಸದಾನಂದ ತಾತ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಅಧ್ಯಕ್ಷ ರುದ್ರಪ್ಪ ಅಂಗಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಎಸಿ ಡಾ.ಹಂಪಣ್ಣ ಸಜ್ಜನ್, ಪಾಲಿಕೆಯ ಆಡಳಿತ ವಿಭಾಗದ ಉಪಆಯುಕ್ತ ಶರಣಪ್ಪ,ತಹಸೀಲ್ದಾರ್ ಸುರೇಶ್ ವರ್ಮಾ, ಸಮಾಜದ ಹಿರಿಯ-ಕಿರಿಯ ಮುಖಂಡರು,ಮಹಿಳೆಯರು,ಯುವಕರು, ನೌಕರರ ಸಂಘದವರು ಸೇರಿ ಅನೇಕರು ಇದ್ದರು.
ಪುತ್ಥಳಿಗೆ ಮಾಲಾರ್ಪಣೆ, ಮೆರವಣಿಗೆ:ಸಂತಕವಿ ಕನಕದಾಸರ ಜಯಂತಿ ಪ್ರಯುಕ್ತ ಗಂಜ್ ಸಮೀಪದಲ್ಲಿರುವ ಕನಕದಾಸರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ, ನಂತರ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಚಾಲನೆ ನೀಡಿದರು. ಮೆರವಣಿಗೆಯು ಗಂಜ್ ವೃತ್ತ ದಿಂದ ಆರಂಭವಾಗಿ ಚಂದ್ರ ಮೌಳೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗಮಂದಿರಕ್ಕೆ ಬಂದು ತಲುಪಿತು.
ಸಿಂಧನೂರಲ್ಲೂ ಕನಕದಾಸರ ಜಯಂತಿ:ಸಿಂಧನೂರು: ಸಮಾನತೆಯ ಸಮಾಜ ನಿರ್ಮಿಸುವುದು ಕನಕದಾಸರ ಆಶಯವಾಗಿತ್ತು. ಅದಕ್ಕಾಗಿ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕಾಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸರ 539ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಾಸ ಸಾಹಿತ್ಯದಲ್ಲಿ ಕನಕದಾಸ ಮತ್ತು ಪುರಂದರದಾಸರು ಪ್ರಮುಖರು. ಬದುಕಿನ ಅಂಕು-ಡೊಂಕುಗಳನ್ನು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಎತ್ತಿ ತೋರಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಜಯಂತಿಗಳು ಆಚರಿಸಿದರೆ ಸಾಲದು, ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಂತರ ನಗರದ ಕನಕದಾಸ ವೃತ್ತದಲ್ಲಿರುವ ಕನಕದಾಸರ ಕಂಚಿನ ಪುತ್ಥಳಿಗೆ ಅಧಿಕಾರಿಗಳು, ಕುರುಬ ಸಮಾಜ, ರಾಜಕೀಯ ಪಕ್ಷಗಳ ಮುಖಂಡರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಮಾತನಾಡಿದರು. ಬಿಜೆಪಿ ಮುಖಂಡ ಕೆ.ಕರಿಯಪ್ಪ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಾಪಂ ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ:ಮುದಗಲ್: ಪಟ್ಟಣದ ಪುರಸಭೆ ಕಾರ್ಯಾಲಯ, ನಾಡ ಕಾರ್ಯಾಲಯ, ಶಾಖಾ ಗ್ರಂಥಾಲಯ, ರೈತ ಸಂಪರ್ಕ ಕೇಂದ್ರ, ಉಪ್ಪಾರಪೇಟೆ ಶಾಲೆ , ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟೂರ, ಕನಕದಾಸರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ದೊಡ್ಡ ಸಿದ್ದಯ್ಯ ಪೂಜೆ ಸಲ್ಲಿಸಿ ಪುಷ್ಪಾ ರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಮಂಜುನಾಥ ಬನ್ನಿಗೋಳ್ಕರ ಅಯ್ಯಪಯ್ಯ, ನಂದಪ್ಪ, ಮಂಜುನಾಥ ಬನ್ನಿಗೋಳ್ಕರ, ಚನ್ನಬಸಪ್ಪ , ರಾಯಪ್ಪ ಬಸವರಾಜ ಜೆಲ್ಲಿ, ರಾಮು ಯಾದವ್ ,ಗ್ಯಾನಪ್ಪ, ಮೌನೇಶ್ , ನಾಗ ರಾಜ್, ದೇಪೇದಾರ,ಉದಯ್ ಕುಮಾರ್ ಕಂಬಾರ, ಮಲ್ಲಣ್ಣ ಮಾಟೂರ, ಸಮಾಜದ ಹಿರಿಯರು ಹಾಗೂ ಯುವಕರು ಸೇರಿದಂತೆ ಇನ್ನಿತರರು ಇದ್ದರು.