ಸಾರಾಂಶ
ಧಾರವಾಡ: ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ ಎಂಬ ಸಂದೇಶವನ್ನು ನೀಡಿದ ಮಹಾನ್ ಶಬ್ದ ಗಾರುಡಿಗ ವರಕವಿ ಬೇಂದ್ರೆ. ಶಬ್ದಗಳ ಮೂಲಕ ಲೀಲಾಜಾಲವಾಗಿ ನಮ್ಮನ್ನು ಕವಿತೆ ಆಳಕ್ಕೆ ಕರೆದೊಯ್ದವರು ಬೇಂದ್ರೆ ಎಂದು ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ ತಿಳಿಸಿದ್ದಾರೆ.
ಇಲ್ಲಿನ ಸಾಧನಕೇರಿ ಬೇಂದ್ರೆ ಭವನದಲ್ಲಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಏರ್ಪಡಿಸಿದ್ದ ವರಕವಿ ಡಾ. ದ.ರಾ. ಬೇಂದ್ರೆ ಅವರ 43ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬೇಂದ್ರೆ ಅವರ ಕವಿತೆಗಳ ಸಾಲುಗಳು ನಮ್ಮನ್ನು ಸಮ್ಮೋಹನಗೊಳಿಸಿವೆ. ಸಖೀಗೀತ ಉತ್ಕೃಷ್ಟವಾದ ಖಂಡ ಕಾವ್ಯವಾಗಿದೆ. ಭಾರತೀಯ ಸಾಹಿತ್ಯದಲ್ಲಿ ಅದಕ್ಕೆ ಮಹೋನ್ನತ ಸ್ಥಾನವಿದೆ ಎಂದರು.
ಬೇಂದ್ರೆಯವರು ಬರೆದ 1427 ಕವನಗಳನ್ನೊಳಗೊಂಡ ಔದುಂಬರ ಗಾಥೆಯ ಆರು ಬೃಹತ್ ಸಂಪುಟಗಳು ಅವರ ಜೀವನ ಮಹಾಕಾವ್ಯವಾಗಿದೆ. ಬೇಂದ್ರೆ ಹಾಗೂ ಕುವೆಂಪು ಅವರು ಕನ್ನಡದ ಭಾವಗೀತದ ಮಹಾಕವಿಗಳು. ಕುವೆಂಪು ಅವರನ್ನು ಸೂರ್ಯೋದಯದ ಕವಿಗಳೆಂದರೆ, ಬೇಂದ್ರೆಯವರನ್ನು ಶ್ರಾವಣದ ಕವಿ, ಚನ್ನವೀರ ಕಣವಿ ಅವರನ್ನು ಮಳೆಗಾಲದ ಕವಿ ಎಂದು ಕರೆಯುತ್ತಾರೆ. ಬೇಂದ್ರೆಯವರು ಕನ್ನಡದಲ್ಲಿ ಛಂದಸ್ಸಿನ ವಿವಿಧ ಪ್ರಯೋಗಗಳನ್ನು ಮಾಡಿದರು. ಬೇಂದ್ರೆಯವರ ಕವನಗಳು ಮುಂದಿನ ಎಲ್ಲ ಕವಿಗಳಿಗೆ ಮಾರ್ಗದರ್ಶಿಯಾಗಿವೆ. ಈ ಮೂಲಕ, ಕನ್ನಡ ಕಾವ್ಯಕ್ಕೆ ಹೊಸ ದೆಸೆಯನ್ನು ಕಲ್ಪಿಸಿಕೊಟ್ಟವರು ಬೇಂದ್ರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮಾತನಾಡಿ, ವರಕವಿ ಡಾ. ದ.ರಾ. ಬೇಂದ್ರೆ ಆಧುನಿಕ ಕನ್ನಡ ಸಾಹಿತ್ಯದ ಅಗ್ರಕವಿ, ಅವಧೂತ ಪ್ರಜ್ಞೆ ಮತ್ತು ದೇಶಿ ಅಭಿವ್ಯಕ್ತಿಗಳ ಅಪೂರ್ವ ಸಂಗಮವೆನಿಸಿದ ಇವರ ಕಾವ್ಯ ಕನ್ನಡದ ಒಂದು ಅಭೂತಪೂರ್ವ ಪ್ರಯೋಗ. ಈ ಕಾವ್ಯ ಪದ್ಧತಿಗೆ ಇವರೇ ಆದಿ, ಇವರ ಪದ್ಯ ಭಂಡಾರದಲ್ಲಿ 1427 ಕವನಗಳಿವೆ. ಸಖೀಗೀತ ಮತ್ತು ಮೇಘದೂತಗಳಂಥ ಖಂಡಕಾವ್ಯಗಳಿವೆ. ನಾಟಕ, ವಿಮರ್ಶೆ, ಕಾವ್ಯ ಮೀಮಾಂಸೆ, ವಿಚಾರ ಸಾಹಿತ್ಯ, ಸಂಶೋಧನಾ ಪ್ರಬಂಧ, ಉಪನ್ಯಾಸ ಇವರ ಸಾಹಿತ್ಯದ ಪ್ರಕಾರಗಳಾಗಿವೆ ಎಂದರು.
ವಿಜಯಪುರ ಜಿಲ್ಲೆಯ ಕಲಾವಿದ ಜ್ಯೋತಿರ್ಲಿಂಗ ಹೊನಕಟ್ಟಿ, ಬೇಂದ್ರೆ ಭಾವಗೀತ ಗಾಯನವನ್ನು ಅತ್ಯಂತ ಮನಮೋಹಕವಾಗಿ ಪ್ರಸ್ತುತ ಪಡಿಸಿದರು. ಅವರೊಂದಿಗೆ ಸಹಗಾಯನದಲ್ಲಿ ಶಿವರಂಜಿನಿ, ಗಾಯನಾ, ಭಾವಗೀತೆಗಳನ್ನು ಸುಶ್ರಾವ್ಯವಾಗಿ ಸಾದರ ಪಡಿಸಿದರು. ತಬಲಾದಲ್ಲಿ ನೂರುದ್ದೀನ್ ಬೈಲಹೊಂಗಲ ಹಾಗೂ ಹಾರ್ಮೋನಿಯಂದಲ್ಲಿ ಆಕಾಶ ಮನಗೂಳಿ, ಡೋಲಕದಲ್ಲಿ ವಲಿಅಹಮ್ಮದ ಸಾಥ್ ಸಂಗತ ನೀಡಿದರು.ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಜಯಲಕ್ಷ್ಮೀ ಎಚ್. ನಿರೂಪಿಸಿದರು. ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ವಂದಿಸಿದರು. ಸುರೇಶ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇಮಠ, ಡಾ. ಎ.ಎಲ್. ದೇಸಾಯಿ, ಎಂ.ಎಂ. ಚಿಕ್ಕಮಠ, ಎನ್.ಎಸ್. ಗೋವಿಂದರೆಡ್ಡಿ, ಸಿದ್ದಣ್ಣ ಕಂಬಾರ, ಶಂಕರ ಗುರವ, ಸಂಗಮೇಶ ಹಡಪದ, ಡಾ. ಜಿ.ಕೆ. ಹಿರೇಮಠ, ಎಂ.ಜಿ. ಹಿರೇಮಠ ಎಂ.ವಿ. ಹೊಸಮನಿ, ಎಸ್.ಎಸ್. ಬಂಗಾರಿಮಠ, ಶಿವಾನಂದ ಹಡಪದ, ಚಂದ್ರಣ್ಣವರ, ಶೋಭಾ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.