ಸಾರಾಂಶ
ಡಾ.ಸಿ.ಎಂ.ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಹಾಗೂ ಜನಪ್ರತಿನಿಧಿಗಳಲ್ಲಿ ಬದ್ಧತೆ ಇಲ್ಲದಿದ್ದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೂಪಿಸಿದ ಸರ್ಕಾರದ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆ ಎಂಬುವುದಕ್ಕೆ ಇಂಜಿನವಾರಿ ಏತ ನೀರಾವರಿ ಕಾಮಗಾರಿ ಉತ್ತಮ ಉದಾಹರಣೆಯಾಗಿದೆ.
ಸಣ್ಣ ನೀರಾವರಿ ಇಲಾಖೆಯ ಆರ್‌ಐಡಿಎಫ್ 14ನೇ ಹಣಕಾಸು ಯೋಜನೆಯಡಿ 2010ರಲ್ಲಿ ಇಂಜಿನವಾರಿ ಗ್ರಾಮದ ಬಳಿ ಸುಮಾರು ₹4.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಏತ ನೀರಾವರಿ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಈ ಭಾಗದ 1225 ಎಕರೆ ಬರಡು ಭೂಮಿ ಹಸಿರಿನಿಂದ ನಳನಳಿಸುತ್ತ ರೈತರ ಬದುಕು ಬಂಗಾರವಾಗಬೇಕಿತ್ತು. ಆದರೆ, ಕಾಮಮಾರಿ ಪೂರ್ಣ ಮುಗಿದು 6-7 ವರ್ಷ ಕಳೆದರೂ ಕಾಲುವೆ ನೀರು ಹರಿಯುತ್ತಿಲ್ಲ. ಈ ವರ್ಷ ಬರಬಹುದು, ಮುಂದಿನ ವರ್ಷ ಬರಬಹುದು ಎಂದು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಯೋಜನೆಯಿಂದ ನೀರಾವರಿಗೆ ಒಳಪಡಬೇಕಿದ್ದ 1225 ಎಕರೆ ಭೂಮಿ ಇನ್ನೂ ಬರಡಾಗಿಯೇ ಇದೆ. ರೈತರು ನೀರಿಗಾಗಿ ಹಲಬುವಂತಾಗಿದೆ. ಕಾಲುವೆ ನೀರು ಹರಿಯದೇ ಪಾಳುಬಿದ್ದಿವೆ. ಇಷ್ಟಾದರೂ ನೀರಾವರಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಮುಳ್ಳು ಕಂಟಿಗಳಿಂದ ಆವರಿಸಿದ ಕಾಳುವೆ:ಮಲಪ್ರಭಾ ನದಿ ದಂಡೆಯ ಮೇಲಿರುವ ಇಂಜಿನವಾರಿ ಗ್ರಾಮದ ಹತ್ತಿರ ನಿರ್ಮಿಸಿದ ಪಂಪ್‌ಹೌಸ್ ಸದ್ಯ ಬಂದ್ ಆಗಿದೆ. ಬೀಗ ಹಾಕಿ ಕೆಲ ವರ್ಷಗಳೇ ಕಳೆದಿವೆ. ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಯೋಜನೆಗೆ ಕೋಟ್ಯಂತರ ರೂಪಾಯಿ ವೆಚ್ಚವೇನೋ ಆಯ್ತು. ಸರ್ಕಾರದ ದಾಖಲೆಯಲ್ಲಿ ಏತ ನೀರಾವರಿ ಅನುಷ್ಠಾನಗೊಂಡಿದೆ. ಆದರೆ, ರೈತರ ಜಮೀನುಗಳಿಗೆ ನೀರು ಮಾತ್ರ ಬಂದಿಲ್ಲ. ಕಾಲುವೆ ಕಟ್ಟಡ ಅಲ್ಲಲ್ಲಿ ಕುಸಿದು ಬೀಳುವ ಹಂತದಲ್ಲಿದೆ. ಕಾಲುವೆಯಲ್ಲಿ ಮುಳ್ಳುಕಂಟಿಗಳು ಆವರಿಸಿವೆ. ಅಧಿಕಾರಿಗಳು ಕೇವಲ ಯೋಜನೆ ಕಾಮಗಾರಿ ಹಾಗೂ ಕಾಲುವೆ ಪೂರ್ಣಗೊಳಿಸಿದರೇ ಹೊರತು ಭೂಮಿಗೆ ನೀರು ಹರಿಸುವ ಚಿಂತನೆ ನಡೆಸಲಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
ಗಾಢ ನಿದ್ರೆಯಲ್ಲಿ ಸಣ್ಣ ನೀರಾವರಿ ಇಲಾಖೆ:ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚಾಗಿದೆ. ಯೋಜನೆ ಮಾತ್ರ ಜನರಿಗೆ ತಲುಪಿಲ್ಲ. ಗುತ್ತಿಗೆದಾರರಿಗೆ ಈ ಯೋಜನೆ ಕೆಲಸ ಕೊಟ್ಟಿತೇ ವಿನಃ ರೈತರ ಜಮೀನುಗಳಿಗೆ ಹರಿಯಲಿಲ್ಲ. ಕಾಮಗಾರಿ ಪೂರ್ಣಗೊಂಡು 5-6 ವರ್ಷ ಕಳೆದರೂ ನೀರಾವರಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆಗೆ ತಿರುಗಿ ನೋಡುತ್ತಿಲ್ಲ. ಕಾಲುವೆಗೆ ನೀರು ಬಿಡದಿರುವುದರಿಂದ ರೈತರ ಬೆಳೆಗಳು ಬಾಡಿ ಹೋಗುತ್ತಿವೆ. ಪ್ರತಿ ವರ್ಷ ಕಾಲುವೆಗಳಿಗೆ ನೀರು ಹರಿಸುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ.ರೈತರಿಗೆ ಅನುಕೂಲಕ್ಕೆ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಅಧಿಕಾರಿಗಳು ನಿರಾಸಕ್ತಿಯಿಂದ ಕಾಮಗಾರಿ ಹಳ್ಳಹಿಡಿದೆ. 3 ವರ್ಷ ಹಿಂದೆ ಬೇಸಿಗೆಯಲ್ಲಿ ಒಂದು ಬಾರಿ ಕಾಲುವೆಗೆ ನೀರು ಬಿಡಲಾಗಿತ್ತು. ನಂತರ ನೀರು ಬಿಟ್ಟಿಲ್ಲ. ಕಾಲುವೆಗೆ ಭೂಮಿ ಹೋಯಿತು. ಆದರೆ ನೀರು ಬರಲಿಲ್ಲ. ಈ ಕುರಿತು ಶಾಸಕರ ಗಮನಕ್ಕೆ ತಂದು ರೈತರೊಂದಿಗೆ ಹೋರಾಟ ಮಾಡಲಾಗುವುದು.
- ಬೂದಿನಗಡ ಗ್ರಾಮದ ಗ್ರಾಮಸ್ಥರು.ಇಂಜಿನವಾರಿ ಹತ್ತಿರ ಇರುವ ಪಂಪ್ ಹೌಸ್‌ನಲ್ಲಿಯ ಟಿ.ಸಿ. ಕಳೆದ ವರ್ಷ ಕಳ್ಳತನವಾಗಿತ್ತು. ಹೊಸ ಟಿಸಿ ಕೂಡ್ರಿಸಲು ಅನುದಾನಕ್ಕೆ ಬಾದಾಮಿ ಶಾಸಕರ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ಬಂದರೆ ಟಿಸಿ ಕೂಡ್ರಿಸಿ ಕಾಲುವೆಗೆ ನೀರು ಬಿಡಲಾಗುವುದು. ಈ ನಿಟ್ಟಿನಲ್ಲಿ ನಾವೂ ಪ್ರಯತ್ನ ಮಾಡುತ್ತಿದ್ದೇವೆ.
-ಪ್ರಕಾಶ ನಾಯಕ, ಎಇಇ, ಸಣ್ಣ ನೀರಾವರಿ ಇಲಾಖೆ, ಬಾಗಲಕೋಟೆ