ಮನರಂಜಿಸಿದ ಕೆಸರುಗದ್ದೆ ಆಟೋಟ ಸ್ಪರ್ಧೆ

| Published : Aug 17 2024, 12:45 AM IST

ಸಾರಾಂಶ

ಬಾಳೆಹೊನ್ನೂರಿನ ಜೇಸಿಐ ಸಂಸ್ಥೆಯ ವತಿಯಿಂದ ಕೊಪ್ಪ ರಸ್ತೆಯ ಎಂ.ಎಸ್.ಅರುಣೇಶ್ ಅವರ ಗದ್ದೆಯಲ್ಲಿ ಕೆಸರುಗದ್ದೆ ಆಟೋಟ ಸ್ಪರ್ಧೆಗಳು ನಡೆಯಿತು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಪ್ಪ ರಸ್ತೆಯ ಎಂ.ಎಸ್.ಅರುಣೇಶ್ ಅವರ ಕೃಷಿ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾ ವೈಭವ ಕೆಸರುಗದ್ದೆ ಆಟೋಟ ಸ್ಪರ್ಧೆಗಳು ಕ್ರೀಡಾಭಿಮಾನಿಗಳ ಮನರಂಜಿಸಿದವು.ಗುರುವಾರ ಮಧ್ಯಾಹ್ನ ಕ್ರೀಡಾಕೂಟ ಆರಂಭಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸಾವಿರಾರು ಕ್ರೀಡಾಭಿಮಾನಿಗಳು ಸ್ಪರ್ಧೆಗಳು ಮುಕ್ತಾಯಗೊಳ್ಳುವವರೆಗೂ ವೀಕ್ಷಿಸಿ ಆಟಗಾರರನ್ನು ಹುರಿದುಂಬಿಸಿದರು. ಕಿಕ್ಕಿರಿದು ತುಂಬಿದ್ದ ಕ್ರೀಡಾಸಕ್ತರ ಹರ್ಷೋದ್ಘಾರ, ಕೇಕೆ, ಸಿಳ್ಳೆಗಳು ಆಟಗಾರರನ್ನು ಮತ್ತಷ್ಟು ಪ್ರೇರೆಪಿಸಿತು. ಹಗ್ಗಜಗ್ಗಾಟ, ವಾಲಿಬಾಲ್, ಟಿ20 ಕ್ರಿಕೆಟ್ ಪಂದ್ಯಾವಳಿಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. ಸ್ಪರ್ಧಾಳುಗಳು ಎದುರಾಳಿ ತಂಡಕ್ಕೆ ತೀವ್ರ ಸ್ಪರ್ಧೆ ನೀಡಿದರು.

ಕೆಸರುಗದ್ದೆ ಸಮಾರಂಭದಲ್ಲಿ ಜೇಸಿ ವಲಯಾಧ್ಯಕ್ಷೆ ಆಶಾ ಜೈನ್ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಂಗವಾಗಿ ಜೇಸಿ ಸಂಸ್ಥೆಯು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ದೇಶಾಭಿಮಾನ ಮೆರೆಯುತ್ತಿರುವುದು ಸಂತಸ ತಂದಿದೆ. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಕ್ರೀಡಾಕೂಟಗಳು ಮರೆಯಾಗುತ್ತಿದ್ದು, ಜೇಸಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ನಗರ ಪ್ರದೇಶದ ಜನ ಮುಂದುವರೆದ ಕ್ರೀಡೆಗಳಿಗೆ ಗಮನನೀಡುವ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಕ್ರೀಡೆ ಆಯೋಜಿಸಿರುವುದು ಉತ್ತಮವಾಗಿದೆ ಎಂದರು.ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್ ಮಾತನಾಡಿ, ಕ್ರೀಡೆಗಳು ಮಾನಸಿಕ, ದೈಹಿಕ ಸ್ಥಿರತೆಗೆ ಪೂರಕವಾಗಿದ್ದು, ಕೃಷಿಯೆಡೆಗೆ ಆಸಕ್ತಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ಕೆಸರುಗದ್ದೆ ಆಟಗಳು ಯುವಕರಿಗೆ ಹೊಸ ಅನುಭವ ನೀಡಲಿದೆ. ಆರೋಗ್ಯದ ದೃಷ್ಟಿಯಿಂದಲೂ ಕೆಸರಿನಲ್ಲಿ ಮಿಂದೇಳುವುದು ಉತ್ತಮವಾಗಿದೆ ಎಂದರು.ಜೇಸಿ ಅಧ್ಯಕ್ಷ ಎನ್.ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ದಾನಿಗಳಾದ ಕೆ.ಕೆ.ವೆಂಕಟೇಶ್, ಸಂತೋಷ್ ಅರೆನೂರು, ಮೋಹನ್‌ದಾಸ್ ಹೆಗ್ಡೆ, ಪ್ರಸಾದ್ ಹೆಗ್ಡೆ, ಟಿ.ಎಂ.ಉಮೇಶ್ ಕಲ್ಮಕ್ಕಿ, ಹರೀಶ್ ಬಿಕ್ಕರಣೆ, ಎಚ್.ಎಸ್.ರವಿ, ಸುವಿಕ್ರಮ್, ಎ.ಕೆ.ಸಂದೇಶ್, ಆರ್ಧನ್, ಡಾ. ನವೀನ್ ಲಾಯ್ಡ್ ಮಿಸ್ಕಿತ್, ಜೇಸಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ಕಾರ್ಯದರ್ಶಿ ಎಚ್.ಟಿ.ಶೃಜಿತ್, ಪ್ರಕಾಶ್ ಮುದುಗುಣಿ, ಸಿ.ವಿ.ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.ವಿಜೇತರು: ಹಗ್ಗಜಗ್ಗಾಟ- ಹೂವಿನಹಕ್ಲು ತಂಡ (ಪ್ರಥಮ), ಚೆಂಕಿ ಚಡಲ್ಸ್ (ದ್ವಿತೀಯ), ವಾಲಿಬಾಲ್- ಸಂಗಮ್ ಫ್ರೆಂಡ್ಸ್ ಎ ತಂಡ ಉಜಿರೆ (ಪ್ರಥಮ), ಸಂಗಮ್ ಫ್ರೆಂಡ್ಸ್ ಬಿ ತಂಡ (ದ್ವಿತೀಯ), ಕ್ರಿಕೆಟ್- ಎ.ಕೆ.ಸ್ಪೋರ್ಟ್ಸ್ (ಪ್ರಥಮ), ಯುನೈಟೆಡ್ ಭದ್ರಾ (ದ್ವಿತೀಯ), ಕೆಸರುಗದ್ದೆ ಓಟ- ಮುರುಳಿ ಪುತ್ತೂರು (ಪ್ರಥಮ), ಶರತ್ ಕಟ್ಟೇಮನೆ (ದ್ವಿತೀಯ), ಸುಮಂತ್ (ತೃತೀಯ) ಸ್ಥಾನ ಪಡೆದರು. ವಿಜೇತರಿಗೆ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಯಿತು.