ಕನ್ನಡಪ್ರಭ ವಾರ್ತೆ, ತುಮಕೂರುಕುಟುಂಬಗಳು ವಿಘಟನೆಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಕೌಟುಂಬಿಕ ಸಂಬಂಧಗಳನ್ನು ಉತ್ತಮಗೊಳಿಸುವ ವಾತಾವರಣ ನಿರ್ಮಾಣ ಅತ್ಯಂತ ಅಗತ್ಯ ಎಂದು ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ತಿಳಿಸಿದರು.ಇಲ್ಲಿನ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ದಿನಾಚರಣೆ ಕುರಿತಾದ ಚರ್ಚಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷಗಳು ಉರುಳಿದಂತೆ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಕೌಟುಂಬಿಕ ಮೌಲ್ಯಗಳು ಮರೆಯಾಗುತ್ತಿವೆ. ಇಂತಹ ಕಾಲಘಟ್ಟದಲ್ಲಿ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ದೂರ ಮಾಡಿ ಕುಟುಂಬದಲ್ಲಿ ಸೌಹಾರ್ದ ಪ್ರೀತಿ ಉಂಟು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದು ಎಚ್ಚರಿಸಿದರು. ತಂದೆ ಇರಲಿ, ತಾಯಿ ಇರಲಿ ಅವರು ಬದುಕಿದ್ದಾಗ ಮಕ್ಕಳಿಗೆ ಅರ್ಥ ತಿಳಿಯುವುದಿಲ್ಲ, ಮೌಲ್ಯ ಗೊತ್ತಾಗುವುದಿಲ್ಲ. ಸತ್ತಾಗ ಅಳುತ್ತಾರೆ. ಆದರೆ, ಎಲ್ಲವನ್ನೂ ಕಳೆದುಕೊಂಡ ಮೇಲೆ ಅತ್ತೂ ಪ್ರಯೋಜನವೇನು ಎಂದು ಪ್ರಶ್ನಿಸಿದ ಅವರು, ಇರುವಷ್ಟು ದಿನಗಳ ಕಾಲ ತಾಯಿ ಪ್ರೀತಿ ಮತ್ತು ಕೌಟುಂಬಿಕ ಸೌಹಾರ್ದ ಕಾಪಾಡಿಕೊಂಡರೆ ಅದಕ್ಕಿಂತ ಉತ್ತಮವಾದ ಸಾಧನೆ ಮತ್ತೊಂದಿಲ್ಲ ಎಂದರು. ಲೇಖಕಿ ಸಿ.ಎಲ್.ಸುನಂದಮ್ಮ ಅವರು ಮಾತನಾಡಿ ಪ್ರಾಣಿಗಳಿಗೆ ಹಾನಿಯಾದಾಗ ಇತರೆ ಪ್ರಾಣಿಗಳು ಅದರ ಸಹಾಯಕ್ಕೆ ಬರುತ್ತವೆ. ಮರಿಯನ್ನು ಯಾರಾದರೂ ಅಪಾಯಕ್ಕೆ ಸಿಲುಕಿಸಲು ಹೋದರೆ ಅದರ ತಾಯಿ ಪ್ರಾಣದ ಹಂಗು ತೊರೆದು ಮೇಲೆ ಬೀಳುತ್ತದೆ. ಅಂದರೆ, ಅಷ್ಟರ ಮಟ್ಟಿಗೆ ಪ್ರಾಣಿಗಳಲ್ಲಿ ರಕ್ಷಣಾ ಮನೋಭಾವ ಇರುತ್ತದೆ. ಆದರೆ ಮನುಷ್ಯರಲ್ಲಿ ಸ್ವಾರ್ಥ ಮನೋಭಾವ ಹೆಚ್ಚುತ್ತಿದ್ದು, ಹಣ ಮತ್ತು ಆಸ್ತಿಯ ಹಿಂದೆ ಬೀಳುತ್ತಿದ್ದಾರೆ ಎಂದು ವಿಷಾದಿಸಿದರು.ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷೆ ಎನ್.ಅಕ್ಕಮ್ಮ ಅವರು ಮಾತನಾಡಿ, ಯಾವುದೇ ಕುಟುಂಬ ಇರಲಿ ಅಲ್ಲಿ ಹೆಣ್ಣು ಮಕ್ಕಳು ನಗುನಗುತ್ತಾ ಇದ್ದರೆ ಅಂತಹ ಕುಟುಂಬಗಳು ಉತ್ತಮ ಏಳಿಗೆ ಹೊಂದಲು ಸಹಕಾರಿಯಾಗುತ್ತದೆ. ಅಂತಹ ವಾತಾವರಣವನ್ನು ವಿದ್ಯಾವಂತರಾದವರು ಎಚ್ಚೆತ್ತುಕೊಂಡು ಕಾಪಾಡಿಕೊಳ್ಳಬೇಕಿದೆ ಎಂದರು.ನಿವೃತ್ತ ಉಪನ್ಯಾಸಕಿ ಜಯಮ್ಮ ಮಾತನಾಡಿ ತಾಯಿ ಪ್ರೀತಿಯನ್ನು ಯಾವತ್ತೂ ಕಳೆದುಕೊಳ್ಳಬಾರದು, ದೂರ ಮಾಡಿಕೊಳ್ಳಲೂ ಬಾರದು. ಹೆತ್ತು ಹೊತ್ತು ಸಲಹಿದ ತಾಯಂದಿರನ್ನು ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ ಎಂದರು.ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಸ್ತಿಯ ಹಕ್ಕಿಗೆ ದುಂಬಾಲು ಬೀಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ಹಿಂದೆ ಪ್ರಚೋದನೆಗಳೂ ಇವೆ. ಆಸ್ತಿಗಾಗಿ ಕೌಟುಂಬಿಕ ಸಂಬಂಧಗಳನ್ನು ಅಂತ್ಯಗೊಳಿಸಿಕೊಳ್ಳುವ ಪ್ರಮೇಯ ಬಾರದಿರಲಿ ಎಂದರು.ಸಾಂತ್ವನ ಕೇಂದ್ರದ ಪಾರ್ವತಮ್ಮ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಕೌಟುಂಬಿಕ ವ್ಯಾಜ್ಯಗಳು ಹೆಚ್ಚುತ್ತಿದ್ದು, ಇವುಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವುದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ ಎಂದರು. ವೇದಿಕೆಯ ಪದಾಧಿಕಾರಿ ಗಂಗಲಕ್ಷ್ಮಿ ಮಾತನಾಡಿ ಯಾವ ಕುಟುಂಬದಲ್ಲಿ ಅತ್ತೆಯನ್ನು ಸೊಸೆ ತಾಯಿ ಎಂದು ಭಾವಿಸುವಳೋ, ಅತ್ತೆ ಯಾದವಳು ಸೊಸೆಯನ್ನು ಮಗಳಂತೆ ಕಾಣುವಳೋ ಆ ಕುಟುಂಬ ಅತ್ಯಂತ ಸೌಹಾರ್ದ ಮತ್ತು ಸುಂದರವಾಗಿರುತ್ತದೆ ಎಂದರು.
ಕೌಟುಂಬಿಕ ಸಂಬಂಧ ಉತ್ತಮಗೊಳಿಸುವ ವಾತಾವರಣ ಅಗತ್ಯ
ಕುಟುಂಬಗಳು ವಿಘಟನೆಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಕೌಟುಂಬಿಕ ಸಂಬಂಧಗಳನ್ನು ಉತ್ತಮಗೊಳಿಸುವ ವಾತಾವರಣ ನಿರ್ಮಾಣ ಅತ್ಯಂತ ಅಗತ್ಯ ಎಂದು ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.