ಭೂಮಿಗಾಗಿ ಮಾಜಿ ಯೋಧನ ಅಲೆದಾಟ

| Published : Jul 20 2024, 12:48 AM IST

ಸಾರಾಂಶ

ಜಮೀನು ಪಡೆಯಲು ಪಾದಯಾತ್ರೆ, ಮುಖ್ಯಮಂತ್ರಿ-ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೂ ಫಲವಿಲ್ಲ. ಲಂಚ ಕೇಳಿದ ಅಧಿಕಾರಿ ಲೋಕಾ ಬಲೆಗೆ ಬೀಳಿಸಿದ ನಿವೃತ್ತ ಯೋಧಗೆ ನ್ಯಾಯ ಸಿಕ್ಕಿಲ್ಲ. ಈಗ ಜಿಲ್ಲಾಧಿಕಾರಿ ನೀಡದ ಭರವಸೆಯನ್ನೇ ನಂಬಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಿವೃತ್ತ ಯೊಧರೊಬ್ಬರಿಗೆ ಸರ್ಕಾರ 24 ವರ್ಷಗಳಿಂದ ಜಮೀನು ಮಂಜೂರು ಮಾಡದೆ ಅಲೆದಾಡಿಸುತ್ತಿದೆ. ಜಮೀನು ಮಂಜೂರು ಮಾಡುವಂತೆ ಸೇನೆಯ ಹಿರಿಯ ಅಧಿಕಾರಿಗಳು ಶಿಫಾರಸು ಪತ್ರವನ್ನೂ ನೀಡಿದ್ದರೂ ಸಹ ಆಡಳಿತಾಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ.

ತಾಲೂಕಿನ ರಾಯಪ್ಪಲ್ಲಿ ಗ್ರಾಮದ ಶಿವಾನಂದ ರೆಡ್ಡಿ ಎಂಬುವರು ೧೭ ವರ್ಷ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಗಡಿಯಲ್ಲಿಯೇ ನಡೆದ ಅಪಘಾತವೊಂದರಲ್ಲಿ ಕಾಲಿಗೆ ತೀವ್ರ ಪೆಟ್ಟಾಗಿ ಸೇನೆಯಿಂದ ಕಡ್ಡಾಯ ನಿವೃತ್ತಿ ಪಡೆದಿದ್ದಾರೆ. ಅವರು ನಿಪೃತ್ತರಾಗಿ ಎರಡೂವರೆ ದಶಕವೇ ಕಳೆದಿದ್ದರೂ ಸರ್ಕಾರದಿಂದ ಸಿಗಬೇಕಾದ ಜಮೀನು ಸಿಕ್ಕಿಲ್ಲ.

ಅಪಘಾತಲ್ಲಿ ಕಾಲು ಊನ

೧೯೯೯ರ ಕಾರ್ಗಿಲ್ ಯುದ್ಧದ ವೇಳೆ ಕರ್ತವ್ಯದಲ್ಲಿದ್ದಾಗಲೇ ಪೂಂಚ್ ಸೆಕ್ಟರ್‌ನಲ್ಲಿ ನಡೆದ ಅಪಘಾತದಲ್ಲಿ ಅವರ ಕಾಲಿಗೆ ತೀವ್ರ ಗಾಯವಾಗಿದೆ. ಇದರಿಂದ ಸೇನೆ ಕಡ್ಡಾಯ ನಿವೃತ್ತಿ ಘೋಷಿಸಿದೆ. ಆದರೆ ನಿವೃತ್ತ ಯೋಧಗೆ ಸರ್ಕಾರದಿಂದ ದೊರೆಯಬೇಕಾದ ಭೂಮಿ ಸಿಗುತ್ತಿಲ್ಲ. ಕಳೆದ ೨೪ ವರ್ಷಗಳಿಂದ ಮಾಜಿ ಯೋಧ ಭೂಮಿಗಾಗಿ ಮನವಿ ಮಾಡದ ಅಧಿಕಾರಿಗಳು ಇಲ್ಲ.

ಚಿಂತಾಮಣಿ ತಾಲೂಕು ಆಡಳಿತ ಲಂಚದ ಬೇಡಿಕೆ ಇಟ್ಟ ಕಾರಣ ರೋಸಿಹೋದ ಈ ಮಾಜಿ ಯೋಧ ಲೋಕಾಯುಕ್ತರನ್ನು ಸಂಪರ್ಕಿಸಿದ್ದಾರೆ. ಇದರಿಂದ ಲೋಕಾಯುಕ್ತರು ದಾಳಿ ಮಾಡಿ, ಲಂಚ ಸ್ವೀಕರಿಸುವಾಗಲೇ ಅಧಿಕಾರಿಗಳ ಹೆಡೆಮುರಿ ಕಟ್ಟಿ ಜೈಲಿಗೂ ಅಟ್ಟಿದ್ದಾರೆ. ಇದರಿಂದಾಗಿ ತಾಲೂಕು ಆಡಳಿತಕ್ಕೆ ಇವರ ಮೇಲೆ ಮುನಿಸು ಎನ್ನಲಾಗಿದೆ.

ಸಿಎಂ, ರಾಜ್ಯಪಾಲರಿಗೂ ಮನವಿ

ಎರಡು ಬಾರಿ ಚಿಂತಾಮಣಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳಿಗೆ ಮೊರೆ ಇಡುವ ಪ್ರಯತ್ನವನ್ನೂ ಮಾಡಿದ್ದಾರೆ. ತಾಲೂಕು ಕಚೇರಿ ಮುಂದೆ ೧೧ ದಿನ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೂ ಮೊರೆ ಹೋಗಿ ಮನವಿ ಮಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ನಿರಾಸೆಗೊಂಡ ಮಾಜಿ ಯೋಧ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರ ಬಳಿ ಬಂದು ತಮ್ಮ ಗೋಳು ಹೇಳಿಕೊಂಡಿದ್ದು, ಆದಷ್ಟು ಶೀಘ್ರದಲ್ಲೇ ಜಮೀನು ದೊರಕಿಸುವ ಭರವಸೆ ನೀಡಿದ್ದಾರೆ.