ಸಾರಾಂಶ
ಮುಂಡರಗಿ: ಜನ್ಮದಿನಾಚರಣೆ, ವಾರ್ಷಿಕೋತ್ಸವದ ನೆಪದಲ್ಲಿ ದುಂದುವೆಚ್ಚ ಮಾಡುವ ಬದಲು, ರಕ್ತದಾನ ಶಿಬಿರ ಆಯೋಜಿಸಿರುವ ದೇವು ಹಡಪದ ಕಾರ್ಯ ಮಾದರಿ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಜ್ಜಯ್ಯನವರು ಹೇಳಿದರು.
ಅವರು ಸೋಮವಾರ ವಿಶ್ವ ರಕ್ತದಾನ ದಿನಾಚರಣೆ, ಪತ್ರಿಕಾ ದಿನಾಚರಣೆ, ವೈದ್ಯ ದಿನಾಚರಣೆ, ಯೋಗ ದಿನಾಚರಣೆ ಅಂಗವಾಗಿ ಗ್ರಾಪಂ ಮಾಜಿ ಸದಸ್ಯ ದೇವು ಹಡಪದ ಅಭಿಮಾನಿ ಬಳಗದ ವತಿಯಿಂದ 44ನೇ ಜನ್ಮ ದಿನಾಚರಣೆ, ಶಿವು ಲಕ್ಕಿ ಮೆನ್ಸ್ ಪಾರ್ಲರ್ ಇದರ 15ನೇ ವಾರ್ಷಿಕೋತ್ಸವ ಹಾಗೂ ಬಸವೇಶ್ವರ ರಕ್ತ ಕೇಂದ್ರ ಗದಗ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜರುಗಿದ ರಕ್ತದಾನ ಶಿಬಿರ, ರಕ್ತದ ಮಾದರಿ ಗುರುತಿಸುವುದು ಹಾಗೂ ಲಕ್ಕಿ ಬ್ಲಡ್ ಹೆಲ್ಪಿಂಗ್ ಫೌಂಡೇಶನ್ ಉದ್ಘಾಟಿಸಿ ಮಾತನಾಡಿದರು.ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ರಕ್ತವನ್ನು ತಯಾರು ಮಾಡಲು ಆಗುವುದಿಲ್ಲ. ರಕ್ತವನ್ನು ಮನುಷ್ಯನೇ ದಾನ ಮಾಡಬೇಕು. ಅಪಘಾತ, ಹೆರಿಗೆ, ಮಹಿಳೆ ಹಾಗೂ ಪುರುಷರು ರಕ್ತ ಹೀನತೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನೀವು ದಾನ ಮಾಡುವ ರಕ್ತ ಅನೇಕ ಜೀವಗಳನ್ನು ಉಳಿಸುತ್ತದೆ. ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು. ಕಳೆದ ಅನೇಕ ವರ್ಷಗಳಿಂದ ದೇವು ಹಡಪದ ತಮ್ಮ ಕುಟುಂಬಸ್ಥರು ಹಾಗೂ ಗೆಳೆಯರೊಂದಿಗೆ ಸೇರಿ ಅನೇಕರಿಗೆ ರಕ್ತದಾನ ಮಾಡಿದ್ದಾರೆ.
ಇದೀಗ ಲಕ್ಕಿ ಬ್ಲಡ್ ಹೆಲ್ಪಿಂಗ್ ಫೌಂಡೇಶನ್ ಪ್ರಾರಂಭಿಸುವ ಮೂಲಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ನೆರವಾಗಲಿದ್ದಾರೆ. ಕಳೆದ 15 ವರ್ಷಗಳಿಂದ ನಮ್ಮ ಪುಣ್ಯಾಶ್ರಮಕ್ಕೆ ಬಂದು ಅಂಧ-ಅನಾಥ ಮಕ್ಕಳೆಲ್ಲರಿಗೂ ಉಚಿತವಾಗಿ ಕ್ಷೌರ ಮಾಡುವ ಮೂಲಕ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರಿಂದ ಇನ್ನಷ್ಟು ಜನೋಪಯೋಗಿ ಕೆಲಸಗಳಾಗಲಿ ಎಂದರು.ಪತ್ರಕರ್ತರಿಗೆ, ವೈದ್ಯರಿಗೆ, ಸಂಗೀತಗಾರರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನಾಗರಾಜ ಮುಖೆ ಅಧ್ಯಕ್ಷತೆ ವಹಿಸಿದ್ದರು. ಲಿಂಗರಾಜಗೌಡ ಪಾಟೀಲ, ಸಿಕೆಎಚ್ ಕಡಣಿಶಾಸ್ತ್ರಿ, ಪಾರ್ವತೆವ್ವ ಹಡಪದ, ಸುರೇಶ ಹಡಪದ, ಡಾ. ಬಿ.ಎಸ್. ಮೇಟಿ, ದೇವು ಹಡಪದ, ಮೌನೇಶ ಬಡಿಗೇರ, ಮೋಹನ್ ಚಂದಪ್ಪನವರ, ಹು.ಬಾ. ವಡ್ಡಟ್ಟಿ, ಕಲ್ಲಪ್ಪ ಕುಡಗುಂಟಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ನಾಗಪ್ಪ ಹಡಪದ, ಈಶಣ್ಣ ಬಡಿಗೇರ, ಶಿವಾನಂದ ಹಡಪದ, ಡಾ. ಮಲ್ಲಿಕಾರ್ಜುನ ತಾಂಬ್ರಗುಂಡಿ, ಶರಣಪ್ಪ ಹೊಸಮನಿ ಉಪಸ್ಥಿತರಿದ್ದರು. 30ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ದೇವು ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವು ವಾಲಿಕಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.