ಬಸವರಾಜ ಹಿರೇಮಠ

ಧಾರವಾಡ:

ಪುಸ್ತಕಗಳನ್ನು ಮೀರಿ ವಿದ್ಯಾರ್ಥಿಗಳು ತರಹೇವಾರಿ ಪ್ರಯೋಗ ಹಾಗೂ ಕಲ್ಪನೆಯ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಅರ್ಥೈಸಿಕೊಳ್ಳಲು ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರವು ಹತ್ತು-ಹಲವು ಪ್ರಯತ್ನಗಳಲ್ಲಿದೆ. ಈ ಪೈಕಿ ನೂತನವಾಗಿ ನಿರ್ಮಾಣವಾಗಿರುವ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ ಹೆಸರಿನ ಗಣಿತ ಉದ್ಯಾನ ಸಹ ಒಂದು.

ಈಗಾಗಲೇ ವಿಜ್ಞಾನದ ತರಹೇವಾರಿ ಮಾದರಿಗಳಿಂದ ಜನಪ್ರಿಯವಾಗಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಗಣಿತದ ವಿಷಯದಲ್ಲಿ ಇಂತಹ ಉದ್ಯಾನ ಸಿದ್ಧವಾಗಿದೆ. ಒಂದು ಎಕರೆಯಲ್ಲಿ ಅಭಿವೃದ್ಧಿಪಡಿಸಲಾದ ಈ ಉದ್ಯಾನವು ಸಂವಾದಾತ್ಮಕ ಮಾದರಿ ಮತ್ತು ಪ್ರದರ್ಶನ ಹೊಂದಿದೆ. ಗಣಿತದ ಪರಿಕಲ್ಪನೆ ಪ್ರಸ್ತುತಪಡಿಸಿ ಮಕ್ಕಳಿಗೆ ಗಣಿತ ವಿಷಯದಲ್ಲಿರುವ ಭಯ ಹೋಗಲಾಡಿಸುವುದೇ ಉದ್ಯಾನದ ಪ್ರಮುಖ ಉದ್ದೇಶ.

ಏನೇನಿದೆ?


ನೋಡಿ ಮತ್ತು ಅರ್ಥಮಾಡಿಕೊಳ್ಳಿ, ಮಾಡಿ ಮತ್ತು ಅರ್ಥಮಾಡಿಕೊಳ್ಳಿ ಚಿಂತನೆಯಲ್ಲಿ ಕಾರ್ಯನಿರ್ವಹಿಸುವ ಈ ಉದ್ಯಾನದಲ್ಲಿ ತ್ರಿಕೋನದ ವಿಧ, ಆಯಾಮ ವ್ಯವಸ್ಥೆ, ಫೈಥಾಗೋರಸ್‌ನ ಪ್ರಮೇಯ, ನಾಲ್ಕು ಆಯಾಮದ ಟೆಸ್ಸೆರಾಕ್ಟ್‌, ಚೌಕಾಕಾರ ಚಕ್ರದ ಟ್ರೈಸಿಕಲ್‌, ದೈತ್ಯ ಕೋನಮಾಪಕ, ಮಾಂತ್ರಿಕ ಷಡ್ಬುಜಾಕೃತಿ, ಟಿಟ್ರಾಹೆಕ್ಡರನ್‌, ಬಹುಭುಜಾಕೃತಿ, ಸಮಾನ ಭಿನ್ನರಾಶಿ ಹೀಗೆ ಗಣಿತ ಹಾಗೂ ಅದರಲ್ಲಿನ ಬೀಜಗಣಿತ, ಅಂಕಗಣಿತದ ಮೂಲಭೂತ ಶಾಖೆ ಒಳಗೊಂಡ ಪ್ರದರ್ಶನ ಒಳಗೊಂಡಿದೆ.

29 ಮಾದರಿ:

ಒಟ್ಟು 29 ಮಾದರಿಗಳನ್ನು ಸ್ಥಾಪಿಸಿದ್ದು 5ರಿಂದ 10ನೇ ತರಗತಿಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು ವೀಕ್ಷಣೆ ಮತ್ತು ಪ್ರಾಯೋಗಿಕ ಸಂವಹನದ ಮೂಲಕ ಗಣಿತದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಈ ಉದ್ಯಾನ ಪ್ರೋತ್ಸಾಹಿಸಲಿದೆ. ಪ್ರತಿಯೊಂದು ಮಾದರಿಯು ಗಣಿತದ ಸಂಕೀರ್ಣ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಒದಗಿಸುವ ಮತ್ತು ಮಕ್ಕಳಿಗೆ ಅನುಭವದ ಕಲಿಕೆ ನೀಡುವ ಫಲಕಗಳನ್ನು ಹೊಂದಿದೆ. ಸಾಂಪ್ರದಾಯಿಕ ತರಗತಿ ವಿಧಾನಗಳಿಗಿಂತ ಪ್ರಾಯೋಗಿಕ ಪ್ರದರ್ಶನಗಳ ಮೂಲಕ ಗಣಿತ ಅಥವಾ ವಿಜ್ಞಾನ ಕಲಿಯಲು ಈ ಉದ್ಯಾನ ಅನುವು ಮಾಡಿಕೊಡುತ್ತಿದೆ. ನಿತ್ಯ ಸಾಕಷ್ಟು ಮಕ್ಕಳು, ಶಿಕ್ಷಕರು ಈ ಉದ್ಯಾವನ ವೀಕ್ಷಿಸಲು ಆಗಮಿಸುತ್ತಿದ್ದಾರೆ ಎಂದು ಈ ಉದ್ಯಾನದ ಮೇಲ್ವಾಚಾರಕ ಸಂದೀಪ ರಂಜನಗಿ ''''ಕನ್ನಡಪ್ರಭ''''ಕ್ಕೆ ಮಾಹಿತಿ ನೀಡಿದರು.

ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ನಾವೀನ್ಯತೆ ಆಧಾರಿತ ಬೆಳವಣಿಗೆಯತ್ತ ಹೆಚ್ಚು ಕಾರ್ಯೋನ್ಮುಖವಾಗಿದೆ. ಅಂತೆಯೇ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರವು ಮಕ್ಕಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ಕಾರ್ಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಮಾನುಜನ್‌ ಹೆಸರಿನ ಗಣಿತ ಉದ್ಯಾನ ಸಹ ಒಂದಾಗಿದೆ ಎನ್ನುವುದು ಕೇಂದ್ರದ ಸಿಬ್ಬಂದಿ ಅಭಿಪ್ರಾಯ. ಶಾಲಾ ಮಕ್ಕಳಿಗೆ ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದ ಅದ್ಭುತಗಳ ಪರಿಚಯದಿಂದ ಹಿಡಿದು ಯುವ ಮನಸ್ಸುಗಳನ್ನು ಮೂಲಭೂತ ವಿಜ್ಞಾನಗಳಿಗೆ ಕರೆದೊಯ್ಯಲು ಕೇಂದ್ರವು ತರಗತಿಯ ಆಚೆಗೆ ವೈಜ್ಞಾನಿಕ ವಿಚಾರಣೆಯ ಸಂಸ್ಕೃತಿಯನ್ನು ಇಲ್ಲಿ ಸೃಷ್ಟಿಸಿದೆ. ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ವಿಜ್ಞಾನ, ಗಣಿತದ ಶಿಕ್ಷಣ, ನಾವೀನ್ಯತೆ ಮತ್ತು ಸಂಶೋಧನೆಗೆ ಸಮಗ್ರ ತಾಣವಾಗಿ ಪರಿವರ್ತಿಸುವ ಗುರಿ ಹೊಂದಿದೆ.

ವೀರಣ್ಣ ಬೋಳಿಶೆಟ್ಟಿ, ಕೇಂದ್ರದ ನಿರ್ದೇಶಕ₹ 1.80 ಕೋಟಿ ವೆಚ್ಚದ ನಾವೀನ್ಯತಾ ಕೇಂದ್ರ

ಕರ್ನಾಟಕ ವಿವಿ ಆವರಣದಲ್ಲಿರುವ ಈ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾಮಾನ್ಯ ವಿಜ್ಞಾನ, ಗಣಿತದ ಮಾದರಿಗಳಲ್ಲದೇ, ₹ 1.80 ಕೋಟಿ ವೆಚ್ಚದ ನಾವೀನ್ಯತಾ ಕೇಂದ್ರ ಸ್ಥಾಪನೆಯಾಗುತ್ತಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿರುವ ಈ ಸೌಲಭ್ಯವು ಯುವ ಸಂಶೋಧಕರಿಗೆ ಆಧುನಿಕ ಮೂಲಸೌಕರ್ಯ ಮತ್ತು ತಜ್ಞರ ಮಾರ್ಗದರ್ಶನ ಒದಗಿಸುತ್ತದೆ. ವಿದ್ಯಾರ್ಥಿಗಳು ಮತ್ತು ಯುವ ಸಂಶೋಧಕರು ತಮ್ಮ ಆಲೋಚನೆಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಈ ಕೇಂದ್ರ ಸಹಾಯ ಮಾಡುತ್ತದೆ. ಅವರು ಮಾದರಿಗಳನ್ನು ವಿನ್ಯಾಸಗೊಳಿಸಲು, ಪ್ರಯೋಗಗಳನ್ನು ನಡೆಸಲು ಮತ್ತು ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಪರಿಕಲ್ಪನೆಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಇಲ್ಲಿ ಸಾಧ್ಯವಾಗಲಿದೆ.

ಹಾಗೆಯೇ, ಆಧುನಿಕ ಡಿಜಿಟಲ್ ಪ್ಲಾನೆಟೇರಿಯಮ್ ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಎನ್.ಎಸ್‌. ಬೋಸರಾಜು ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾಗ ಈ ಆವರಣದಲ್ಲಿ 2D 4K ಡಿಜಿಟಲ್ ಪ್ಲಾನೆಟೇರಿಯಮ್ ಸ್ಥಾಪಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ₹ 12.69 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ 2D 4K ಪ್ರೊಜೆಕ್ಷನ್ ಸಿಸ್ಟಮ್, ಗುಮ್ಮಟ ಮೂಲಸೌಕರ್ಯ, ಸಾಫ್ಟ್‌ವೇರ್ ಮತ್ತು ಸುಧಾರಿತ ಆಡಿಯೋ ಸಿಸ್ಟಮ್‌ಗಳನ್ನು ಇದು ಹೊಂದಲಿದೆ. ಈ ಪ್ರಸ್ತಾವನೆಗೆ ಈಗ ಹಣಕಾಸು ಇಲಾಖೆ ಮತ್ತು ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ದೊರೆತಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿಯ ಮೂಲಕ ಉಪಕರಣಗಳ ಖರೀದಿ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.