ಸಾರಾಂಶ
ಬಿ. ರಾಮಪ್ರಸಾದ್ ಗಾಂಧಿ
ಹಂಪಿ: ಕಳೆದು ಹೋಗುತ್ತಿರುವ ದೇಸಿ ತಳಿಗಳ ರಕ್ಷಣೆಗೆ ಅರಿವು ಮೂಡಿಸುವ ಪ್ರಯತ್ನ ಈ ಬಾರಿಯ ಹಂಪಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಕಂಡು ಬಂದಿತು.ಕೃಷಿ ಇಲಾಖೆಯವರು ಹಂಪಿ ಉತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನದಲ್ಲಿ ಕಳೆದು ಹೋಗಿರುವ ದೇಶಿ ತಳಿಗಳ ಉಳಿಸಿಕೊಂಡು ಬಂದಿರುವ ರೈತರಿಗೆ ಈ ಪ್ರದರ್ಶನ ಉತ್ತೇಜನ ನೀಡುವಂತಿತ್ತು. ಸಕ್ಕರೆ ಅಂಶ ಜಾಸ್ತಿ ಇಲ್ಲದ ಗೋದಿ, ವಿಶಿಷ್ಟವಾದ ಔಷಧ ಗುಣ ಹೊಂದಿರುವ ಹಾಲು ನವಣಿ, ಸಾಮೆ, ಬರಗು, ಸಜ್ಜೆ, ಜೋಳಗಳ ಬೀಜಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ದೇಶಿ ತಳಿಗಳನ್ನು ಉಳಿಸಿಕೊಂಡು ಬಂದು 2021ರಲ್ಲಿ ರಾಷ್ಚ್ರೀಯ ಪ್ರಶಸ್ತಿ ಪಡೆದಿರುವ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ರೈತ ಕಲ್ಲಪ್ಪ ಕಾಟ್ರಹಳ್ಳಿ ಅವರು ದೇಶಿ ತಳಿಗಳ ಪ್ರದರ್ಶನ ಮಾಡುತ್ತ, ರೈತರಿಗೆ ತಿಳಿವಳಿಗೆ ನೀಡುತ್ತಿದ್ದರು.ಈ ಕುರಿತು ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ದೇಶಿ ತಳಿಗಳ ಉಳಿಸಿ ಬೆಳೆಸುವ ರೈತರಿಗೆ ಸರ್ಕಾರ ರಾಯಲ್ಟಿ ಕೊಟ್ಟು ಉತ್ತೇಜನ ನೀಡುವ ಚಿಂತನೆಯಲ್ಲಿದೆ ಎಂದರು. ಇತರ ಇಲಾಖೆಯ ಯೋಜನೆಗಳನ್ನು ಪ್ರದರ್ಶನ ಮಾಡಿದ್ದೇವೆ ಎಂದು ಹೇಳಿದರು.
ಜಲಾನಯನ ಮಾದರಿ, ಇಂದಿನ ಮಕ್ಕಳಿಗೆ ಗತಕಾಲದ ಅರಿವು ಮೂಡಿಸಲು ಹಳ್ಳಿ ಮನೆ ಪ್ರದರ್ಶನ ಹಾಗೂ ಸಿರಿದಾನ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದ್ದೇವೆ. ಇದರ ಸದುಪಯೋಗವನ್ನು ಹಂಪಿ ಉತ್ಸವಕ್ಕೆ ಬರುವ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.ಫಲಪುಷ್ಪ ಪ್ರದರ್ಶನ: ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯದಲ್ಲಿ ಮೂಡಿದ ಹಂಪಿ ಉತ್ಸವದ ಲಾಂಛನ ಮನಮೋಹಕವಾಗಿತ್ತು. ಹಕ್ಕ-ಬುಕ್ಕರ ಸ್ತಬ್ಧಚಿತ್ರ, ಸಿರಿಧಾನ್ಯದಲ್ಲಿ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ವಿವಿಧ ಜಾತಿ ಹೂವುಗಳಿಂದ ಎದುರು ಬಸವಣ್ಣ ದೇವಸ್ಥಾನ, ಸಂವಿಧಾನ ಮಹತ್ವ ತಿಳಿಸಲು ಸಂವಿಧಾನ ಪುಸ್ತಕ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆದವು. ಸ್ವಯಂ ಹವಮಾನ ಮುನ್ಸೂಚನಾ ಘಟಕ ಈ ಬಾರಿಯ ವಿಶೇಷವಾಗಿತ್ತು. ಸಹಾಯಕ ಕೃಷಿ ನಿರ್ದೇಶಕ ಉಮೇಶ ಪ್ರವಾಸಿಗರಿಗೆ ವಿವರ ನೀಡುತ್ತಿದ್ದರು.
ಒಟ್ಟಿನಲ್ಲಿ ಕೃಷಿ ವಸ್ತು ಪ್ರದರ್ಶನ ಹಾಗೂ ಫಲ-ಪುಷ್ಪ ಪ್ರದರ್ಶನ ಹಂಪಿ ಉತ್ಸವಕ್ಕೆ ಮೆರಗು ನೀಡಿದ್ದವು.