ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

| Published : Jan 25 2025, 01:04 AM IST

ಸಾರಾಂಶ

ಶಿವಮೊಗ್ಗ: ಹೂವಿನಲ್ಲಿ ಅರಳಿದ ರಾಷ್ಟ್ರ ಕವಿ ಕುವೆಂಪುರವರ ಕವಿಶೈಲ, ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬೆ ದೇಗುಲ. ಉದ್ದ ಗರಿಬಿಚ್ಚಿ ನರ್ತಿಸುತ್ತಿರುವ ನವಿಲು, ನೋಡುಗರ ಕಣ್ಮನ ಸೆಳೆಯುವ ರಂಗುರಂಗಿನ ಮತ್ಸ್ಯಗಳು, ವರ್ಣಮಯ ಲೋಕವನ್ನೇ ತೆರದಿಟ್ಟಿರುವ ಫಲಪುಷ್ಪಗಳು.

ಶಿವಮೊಗ್ಗ: ಹೂವಿನಲ್ಲಿ ಅರಳಿದ ರಾಷ್ಟ್ರ ಕವಿ ಕುವೆಂಪುರವರ ಕವಿಶೈಲ, ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬೆ ದೇಗುಲ. ಉದ್ದ ಗರಿಬಿಚ್ಚಿ ನರ್ತಿಸುತ್ತಿರುವ ನವಿಲು, ನೋಡುಗರ ಕಣ್ಮನ ಸೆಳೆಯುವ ರಂಗುರಂಗಿನ ಮತ್ಸ್ಯಗಳು, ವರ್ಣಮಯ ಲೋಕವನ್ನೇ ತೆರದಿಟ್ಟಿರುವ ಫಲಪುಷ್ಪಗಳು. ಇದು ನಗರದ ಅಲ್ಲಮಪ್ರಭು ಮೈದಾನದಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಹಾಗೂ ಮಲೆನಾಡ ಕರಕುಶಲ ಉತ್ಸವದಲ್ಲಿ ಕಂಡು ಬರುತ್ತಿರುವ ದೃಶ್ಯಾವಳಿಗಳಿವು.ತೋಟಗಾರಿಕಾ ಇಲಾಖೆ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಆರಂಭದಲ್ಲಿಯೇ ಮೇಳದ ಸ್ವಾಗತ ಕಮಾನು ಸ್ವಾಗತಿಸಿದರೆ, ಶಿವಮೊಗ್ಗವನ್ನು ಬಿಂಬಿಸುವ ಆಂಗ್ಲ ಭಾಷೆಯ ಎಸ್‌ಎಂಜಿ ಸೇವಂತಿಗೆ ಹೂವಿನಲ್ಲಿ ಕಣ್ಣುಕುಕ್ಕುತ್ತದೆ.ಕೆಂಪು ಗುಲಾಬಿಯಲ್ಲಿ ಮಾಡಿರುವ ಐ ಲವ್ ಶಿವಮೊಗ್ಗ ಎಂಬ ಹೃದಯಾಕೃತಿಯ ಕಲಾಕೃತಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿತ್ತು. ಇದರೊಳಗೆ ನಿಂತು ಫೋಟೋ ಕ್ಲಿಕ್ಕಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಗುಲಾಬಿ, ಸೇವಂತಿಗೆ, ಆರ್ಕಿಡ್, ಕಾರ್ನೇಷನ್, ಲಿಲ್ಲೀಸ್, ಪೊಲೀಯೇಜ್ ಮುಂತಾದ ಬಗೆಗಳ 4.80 ಲಕ್ಷ ಹೂವುಗಳನ್ನು ಬಳಸಿ ಕುಪ್ಪಳಿ ಕವಿಶೈಲದ 28 ಅಡಿ ಎತ್ತರದ ಕಲಾಕೃತಿ ಹಾಗೂ ಚಂದ್ರಗುತ್ತಿ ರೇಣುಕಾಂಬೆ ದೇವಾಲಯದ 14 ಅಡಿ ಎತ್ತರದ ಕಲಾಕೃತಿ ನಿರ್ಮಿಸಲಾಗಿದೆ. 45ಕ್ಕೂ ಹೆಚ್ಚು ಬೊನ್ಸಾಯ್ ಗಿಡಗಳ ಪ್ರದರ್ಶನ ಕೂಡ ನಡೆದಿದೆ.ಕರಕುಶಲ ವಸ್ತುಗಳು:ಮಲೆನಾಡು ಬ್ರಾಂಡ್ ಮೂಲಕ ಹಸೆ ಚಿತ್ತಾರ, ಗೃಹ ಅಲಂಕಾರ, ಟೆರಾಕೋಟಾ ವಸ್ತು ಮುಂತಾದವುಗಳನ್ನು ಮಾರಾಟಕ್ಕೆ ವೇದಿಕೆ ಕಲ್ಪಿಸಲಾಯಿತು.ಕರಕುಶಲ ಮಳಿಗೆಗಳಾದ ಮಲೆನಾಡ ಕರಕುಶಲತೆಗಳು, ಸಹ್ಯಾದ್ರಿ ಕರಕುಶಲತೆ, ಬಂಜಾರ ಲಂಬಾಣಿ ಉಡುಪು, ಕಲ್ಲಿನ ಆಭರಣಗಳು, ಮಲೆನಾಡು ಸವಿರುಚಿ ತಿನಿಸು, ಅಕ್ಕ ಕೆಫೆ, ಮ್ಯೂರಲ್ ಕಲಾ ಚಿತ್ರಗಳು, ಹಸೆ ಚಿತ್ತಾರೆ, ಮಣ್ಣಿನ ಅಲಂಕಾರಿಕ ಮಳಿಗೆ, ಸ್ವದೇಶಿ, ಕೌದಿ, ಈಚಲು ಚಾಪೆ, ಮರದ ಉತ್ಪನ್ನಗಳು, ಟೆರಾಕೋಟ, ಖಾದಿ ಉಡುಪುಗಳು ಸೇರಿದಂತೆ ಒಳಾಂಗಣದಲ್ಲಿ ೩೦ಕ್ಕೂ ಹೆಚ್ಚು ಮಳಿಗೆ ಹಾಗೂ ಹೊರಾಂಗಣದಲ್ಲಿ ನರ್ಸರಿ ಗಿಡಗಳು, ವಿವಿಧ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳು, ತಿಂಡಿ-ತಿನಿಸು, ಸೀರೆ-ಬಟ್ಟೆ ಇನ್ನೂ ವಿವಿಧ ರೀತಿಯ 20ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ.ರೈತರ ಉತ್ಪನ್ನಕ್ಕೂ ಅವಕಾಶ, ಖಾಸಗಿ ಕಂಪನಿಗಳಿಗೂ ಪ್ರಚಾರ:ರೈತರು ಬೆಳೆದ ಉತ್ಪನ್ನಗಳನ್ನು ಪ್ರದರ್ಶಿಸಲು ಈ ಬಾರಿಯ ಫಲಪುಷ್ಪ ಪ್ರದರ್ಶನ ಹಾಗೂ ಮಲೆನಾಡ ಕರಕುಶಲ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದರ ಜತೆಗೆ ಖಾಸಗಿ ಕಂಪನಿಗಳು ಪ್ರಚಾರಕ್ಕಾಗಿ ತಮ್ಮ ಉತ್ಪನ್ನಗಳನ್ನು ಇರಿಸಿದ್ದಾರೆ. ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳು ಮಳಿಗೆಗಳನ್ನು ತೆರೆದು ಜನರಿಗೆ ಸಮಗ್ರ ಮಾಹಿತಿ ನೀಡುತ್ತಿದೆ. ಮೇಳಕ್ಕೆ ಬರುವಂತಹವರಿಗೆ ಆಹಾರ ಮಳಿಗೆಗಳನ್ನು ಕೂಡ ತೆರೆಯಲಾಗಿದೆ. ಒಟ್ಟಾರೆ ಈ ಬಾರಿಯ ಫಲಪುಷ್ಪ ಪ್ರದರ್ಶನ ಹಿಂದೆಂದಿಗಿಂತಲೂ ಭಿನ್ನವಾಗಿದೆ.ಫಲಪುಷ್ಪ ಪ್ರದರ್ಶನಕ್ಕೆ ಶಾಸಕರಿಂದ ಚಾಲನೆ:ಜಿಲ್ಲಾ ಪಂಚಾಯಿತಿ, ತೊಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಹಯೋಗದಲ್ಲಿ ಅಲ್ಲಮಪ್ರಭು ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಮಲೆನಾಡ ಕರಕುಶಲ ಉತ್ಸವ ಸರಸ್ ಮೇಳ ಹಾಗೂ ಪುಷ್ಪಸಿರಿ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪನವರು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ವೈವಿಧ್ಯಮಯ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು ಇಲ್ಲಿ ಸೃಷ್ಟಿಯಾಗಿದೆ. ಕರಕುಶಲ ಕಲಾವಿದರಿಗೆ ಶಾಶ್ವತವಾಗಿ ಮಾರುಕಟ್ಟೆ ಒದಗಿಸಲು ಮಾಲ್‌ನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ. ಇದಕ್ಕೆ ನಮ್ಮ ಸಹಕಾರ ಸಹ ಇದೆ ಎಂದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ, ಜಿ.ಪಂ.ಯೋಜನಾ ನಿರ್ದೇಶಕಿ ನಂದಿನಿ, ಉದ್ಯಾನ ಕಲಾ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.ಬೆಂಗಳೂರಿನಂತೆಯೇ ನಮ್ಮ ಜಿಲ್ಲೆಯಲ್ಲೂ ಬೃಹತ್ ಮಟ್ಟದಲ್ಲಿ ಕರಕುಶಲ ಮತ್ತು ಫಲ ಪುಷ್ಪ ಪ್ರದರ್ಶನ ಏರ್ಪಟ್ಟಿದೆ. ಕುಪ್ಪಳಿಯಲ್ಲಿನ ಕುವೆಂಪುರವರ ಮನೆಯನ್ನು ಇಡೀ ದೇಶದ ಜನ ನೋಡುವಂತಾಗಿದೆ. ಅಂತಹ ಕುವೆಂಪುರವರ ಮನೆಯ ಕಲಾಕೃತಿಯನ್ನು ಕಲಾವಿದರು ಈ ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಧಾರ್ಮಿಕ ಕೇಂದ್ರವಾದ ಚಂದ್ರಗುತ್ತಿ ದೇವಾಲಯ ಜನರನ್ನು ಸೆಳೆಯುತ್ತಿದೆ. ಮಲೆನಾಡ ಕರಕುಶಲ ಉತ್ಸವದ ಕನಸು ಇಂದು ನನಸಾಗಿದೆ. ಇಚ್ಛಾಶಕ್ತಿ ಇರುವ ಅಧಿಕಾರಗಳಿಂದ ಮಾತ್ರ ಇದು ಸಾಧ್ಯ.- ಎನ್‌.ಹೇಮಂತ್, ಜಿ.ಪಂ. ಸಿಇಒಮಲೆನಾಡ ಕರಕುಶಲ ಉತ್ಸವವನ್ನು ಬಹಳ ಅರ್ಥಪೂರ್ಣವಾಗಿ ಮಾಡಲಾಗಿದೆ. ಧಾರ್ಮಿಕ, ಸಾಹಿತ್ಯಿಕ ಕಲಾಕೃತಿಗಳು, ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳಾದ ಟೆರಾಕೊಟ, ಹಸೆ ಚಿತ್ತಾರ, ರೇಶಿಮೆ, ಬಿದಿರು, ರೈತರು ಬೆಳೆದ ಫಲ-ಪುಷ್ಪಗಳು, ರಾಷ್ಟ್ರಕವಿ ಕುವೆಂಪುರವರ ಪುಸ್ತಕ ಪ್ರದರ್ಶನ ತುಂಬಾ ವಿಶೇಷವಾಗಿದೆ. ಈ ಉತ್ಸವ ೩ ದಿನಗಳ ಕಾಲ ಯಶಸ್ವಿಯಾಗಿ ನಡೆಯಲಿ.-ಆರ್.ಎಂ.ಮಂಜುನಾಥ ಗೌಡ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು.ಈ ಫಲಷುಪ್ಪ ಪ್ರದರ್ಶನದಲ್ಲಿ ಸುಮಾರು 4,28,000 ಹೂಗಳನ್ನು ಬಳಕೆ ಮಾಡಲಾಗಿದೆ. ಇಂತಹ ಪ್ರದರ್ಶನದಿಂದ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಉತ್ತಮ ಕರಕುಶಲ ವಸ್ತುಗಳು ಸಿದ್ಧವಾಗುತ್ತಿವೆ. ಆದರೆ ಅವುಗಳ ಮಾರಾಟ ಮಾತ್ರ ಕುಂಠಿತವಾಗಿದೆ. ಇಂತಹ ಮೇಳದಲ್ಲಿ ಆನ್‌ಲೈನ್ ಮೂಲಕ ಮಾರಾಟಕ್ಕೆ ಮುಂದಾಗಿದ್ದೇವೆ. ಇದರಿಂದ ಕಲಾವಿದರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ.- ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ.