ಕಣ್ಮನ ಸೆಳೆದ ಕನ್ನಡ ಸಾಂಸ್ಕೃತಿಕ ದಿಬ್ಬಣ, ಕನ್ನಡಮಯವಾದ ವಿವಿ ಆವರಣ!

| Published : Feb 21 2025, 11:47 PM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸೈಗೋಳಿಯ ಕೇಂದ್ರ ಮೈದಾನದಿಂದ ವೈಭವದ ಸಾಂಸ್ಕೃತಿಕ ಮೆರವಣಿಗೆ ಶುಕ್ರವಾರ ನಡೆಯಿತು. ಸಾಂಸ್ಕೃತಿಕ ಮೆರವಣಿಗೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ಚಾಲನೆ ನೀಡಿದರು.

ವಜ್ರ ಗುಜರನ್‌ ಮಾಡೂರು

ಕನ್ನಡಪ್ರಭ ವಾರ್ತೆ ಕೊಣಾಜೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸೈಗೋಳಿಯ ಕೇಂದ್ರ ಮೈದಾನದಿಂದ ವೈಭವದ ಸಾಂಸ್ಕೃತಿಕ ಮೆರವಣಿಗೆ ಶುಕ್ರವಾರ ನಡೆಯಿತು. ಸಾಂಸ್ಕೃತಿಕ ಮೆರವಣಿಗೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ಚಾಲನೆ ನೀಡಿದರು.

ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿ ಗುರುದತ್ತ್ ಎಂ.ಎನ್. ಅವರು ಭುವನೇಶ್ವರಿಗೆ ಪುಪ್ಪಾರ್ಚನೆಯನ್ನು ಸಲ್ಲಿಸಿದರು.ಅಸೈಗೋಳಿ ಮೈದಾನದಿಂದ ಉದ್ಘಾಟನೆಗೊಂಡು ಮಂಗಳೂರು ವಿವಿ ಮಾರ್ಗದ ಮೂಲಕ ಸಾಗಿದ ಈ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನ ಮನಸೂರೆಗೊಂಡಿತು. ಕೀಲು ಕುದುರೆ, ಕೋಲಾಟ, ಸುಗ್ಗಿ ಕುಣಿತ, ಕಂಗೀಲು, ಯಕ್ಷಗಾನ, ಪೂಜಾ ಕುಣಿತ, ಡೊಳ್ಳು ಕುಣಿತ ಶಾಲಾ ಮಕ್ಕಳಿಂದ ಜಾನಪದ ನೃತ್ಯಗಳು, ಕುಣಿತ ಭಜನೆ, ಚೆಂಡೆ, ಡೋಲು-ಕೋಲು ಕುಣಿತ, ಕಂಸಾಲೆ, ಗೊಂಬೆ ಕುಣಿತ ಮೊದಲಾದ ತಂಡಗಳು ಮೆರವಣಿಗೆಗೆ ರಂಗು ತುಂಬಿದವು. ಮೆರವಣಿಗೆಯು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದ ವರೆಗೂ ಸಾಗಿ ಬಂತು.

ಸಭಾಂಗಣದ ಬಳಿ ಕೊಣಾಜೆ ಗ್ರಾ.ಪಂ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನಡೆಸಿದರು. ಉಳ್ಳಾಲ ತಾಲೂಕು ತಹಶೀಲ್ದಾರ ಪುಟ್ಟರಾಜು ಸಮ್ಮೇಳನ ಧ್ವಜಾರೋಹಣ ನೆರವೇರಿಸಿದರು. ವಿಶ್ವ ಮಂಗಳ ಪ್ರೌಢಶಾಲೆ ಕೊಣಾಜೆ ಇದರ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹೇಳಿದರು. ಕೊಣಾಜೆ ಪದವು ಶಿಕ್ಷಕ ರಾಜೀವ ನಾಯ್ಕ ನಿರೂಪಿಸಿದರು.

ಸಮ್ಮೇಳನದಲ್ಲಿ ಪಟ್ಟಾಂಗ ಕಟ್ಟೆಯ ಆಕರ್ಷಣೆ:

ಸಭಾಂಗಣದ ಹೊರಾಂಗಣದಲ್ಲಿ ಎಡಭಾಗದಲ್ಲಿ ಮರವೊಂದರ ಕೆಳ ಭಾಗದಲ್ಲಿ ನಿರ್ಮಿಸಲಾಗಿರುವ ಪಟ್ಟಾಂಗ ಕಟ್ಟೆಯು ವಿಶೇಷವಾಗಿ ಸಾಹಿತ್ಯಾಭಿಮಾನಿಗಳು ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.ಪಟ್ಟಾಂಗ ಕಟ್ಟೆಯ ಉದ್ಘಾಟನೆಯನ್ನು ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ನೆರವೇರಿಸಿದರು. ಎರಡು ದಿನಗಳ ಕಾಲ ಈ ಪಟ್ಟಾಂಗ ಕಟ್ಟೆಯಲ್ಲಿ ಅಜ್ಜಿಕತೆ, ಉತ್ತರ ಹೇಳಿ ಪುಸ್ತಕ ಗೆಲ್ಲಿ, ಗ್ರಾಮ ಪ್ರತಿಭೆಗಳ ನೃತ್ಯ, ವಿವಿಧ ಲೇಖಕರೊಂದಿಗೆ ಮಾತುಕತೆ ಹೀಗೆ ಹತ್ತು ಹಲವು ಬಗೆಯ ಆತ್ಮೀಯ ಚಟುವಟಿಕೆಗಳು ನಡೆಯುತ್ತಿವೆ. ಈ ಪಟ್ಟಾಂಗ ಕಟ್ಟೆಯ ಕಾರ್ಯಕ್ರಮ ವೀಕ್ಷಣೆಗೆ ನೂರಾರು ಸಾಹಿತ್ಯಭಿಮಾನಿಗಳು ವೇದಿಕೆಯ ಮುಂಭಾಗದಲ್ಲಿ ಸೇರಿದ್ದರು.ಗುರುವಪ್ಪ ಎನ್. ಟಿ. ಬಾಳೆಪುಣಿ ಪುಸ್ತಕ ಮಳಿಗೆ:

ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ದಿ. ಗುರುವಪ್ಪ ಎನ್. ಟಿ. ಬಾಳೆಪುಣಿ ಅವರ ಹೆಸರಿನ ಪುಸ್ತಕ ಮಳಿಗೆ ಸಮ್ಮೇಳನದ ಇನ್ನೊಂದು ಆಕರ್ಷಣೆ. ಈ ಮಳಿಗೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಿದರು.

ಈ ಮಳಿಗೆಯಲ್ಲಿ ವಿವಿಧ ಪ್ರಕಾಶನಗಳ ಪುಸ್ತಕಗಳಲ್ಲದೆ, ಪ್ರಸಾರಾಂಗಗಳ ಸಾಹಿತ್ಯ ಕೃತಿಗಳು ಮಾರಾಟ ಹಾಗೂ ಪ್ರದರ್ಶನಕ್ಕೆ ಇವೆ.

ತುಳುನಾಡ ಸಂಸ್ಕೃತಿ ವೈಭವ: ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅನೇಕ ವಸ್ತುಗಳು ಸಾಹಿತ್ಯಭಿಮಾನಿಗಳನ್ನು ಆಕರ್ಷಿಸುವಂತೆ ಮಾಡಿವೆ.

ಕೊರಗ ಆದಿವಾಸಿಗಳ ಕರಕುಶಲ ವಸ್ತುಗಳ ಮಳಿಗೆ, ಹಳೆ ಕಾಲದ ತರಹೇವಾರಿ ದೀಪಗಳು, ಹಳೆ ರೆಡಿಯೋ, ಹಳೆ ಗಡಿಯಾರ, ಸಾವಿರಾರು ಇತಿಹಾಸವಿರುವ ಲಿಪಿಗಳು, ಮರದ ಮೂರ್ತಿಗಳು, ತುಳುನಾಡಿನ ದೈವಗಳ ಪರಿಕರಗಳನ್ನು ನೋಡಲು ನೂರಾರು ಜನರು ತಂಡೋಪತಂಡವಾಗಿ ಈ ವಸ್ತು ಸಂಗ್ರಹಕ್ಕೆ ಆಗಮಿಸುತ್ತಿದ್ದರು‌.

ದಣಿವಿಗಾಗಿ ಗೋಳಿ ಸೋಡ!:

ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ರೀತಿಯ ಮಳಿಗೆಗಳನ್ನು ಮಂಗಳ ಸಭಾಂಗಣದ ಎರಡು ಭಾಗಗಳಲ್ಲಿ ಹಾಕಲಾಗಿದೆ. ಸರಿ ಸುಮಾರು 40 ಸ್ಟಾಲ್‌ಗಳು ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿವೆ. ಬಿಸಿಲಿನ ಬೇಗೆಗೆ ದಣಿದು ಬರುವವರಿಗೆ ಗೋಳಿ ಸೋಡದ ಸ್ಟಾಲ್ ಆಕರ್ಷಣೆಯ ಕೇಂದ್ರವಾಗಿದೆ. ಮಹಿಳೆಯರನ್ನು ವಿಶೇಷವಾಗಿ ಆಕರ್ಷಿಸುವ ಸಲುವಾಗಿ ಬಟ್ಟೆ ಮಳಿಗೆಗಳು ಹಾಕಲಾಗಿದ್ದು ಅದರಲ್ಲಿ ಕೈಮಗ್ಗದಿಂದ ಮಾಡಿದ ಸೀರೆಗಳು ಗಮನ ಸೆಳೆಯುತ್ತಿವೆ. -----------------ಕೈಬೀಸಿ ಕರೆಯುವ ಸೆಲ್ಫಿ ಬೂತ್‌! ಸಾಹಿತ್ಯ ಸಮ್ಮೇಳನದ ಅಂಗವಾಗಿ ಬರುವ ಸಾಹಿತ್ಯಭಿಮಾನಿಗಳಿಗಾಗಿ ವಿಶೇಷವಾಗಿ ಸೆಲ್ಫಿ ಬೂತ್ ಕೈಬೀಸಿ ಕರೆಯುತ್ತಿದೆ. ಸಮ್ಮೇಳನಕ್ಕೆ ಬಂದವರೆಲ್ಲ ಸೆಲ್ಫಿ ಬೂತ್‌ನಲ್ಲಿ ನಿಂತು ತಮ್ಮ ಜೊತೆಗಿದ್ದವರ ಜೊತೆ ಸ್ಪೆಲ್ಫಿ ಕ್ಲಿಕ್ಕಿಸಿಕೊಂಡರು. ಶಾಲಾ ವಿದ್ಯಾರ್ಥಿಗಳಿಂದ ತುಂಬಿದ ಸಮ್ಮೇಳನ

ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಾಗಿ ಸಾಹಿತಿಗಳೇ ತುಂಬಿರುವುದು ಸಾಮಾನ್ಯ. ಆದರೆ ಈ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳೇ ತುಂಬಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳೇ ಸ್ವಯಂಸೇವಕರಾಗಿ ಸಮ್ಮೇಳನ ಯಶಸ್ಸಿಗೆ ಸಹಕರಿಸುತ್ತಿದ್ದರು. ಸಮ್ಮೇಳನದ ಗೋಷ್ಠಿಗಳಲ್ಲೂ ವಿದ್ಯಾರ್ಥಿಗಳ ಹಾಜರಾತಿ ಕಾಣುತ್ತಿತ್ತು.

-------------------