ಸಾರಾಂಶ
ಫಲ-ಪುಷ್ಪ, ಕೃಷಿ ವಸ್ತು ಪ್ರದರ್ಶನ, ಸ್ವ-ಸಹಾಯ ಸಂಘದ ಮಳಿಗೆಗಳ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳಿಂದ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಗಳು ಎಲ್ಲರ ಗಮನ ಸೆಳೆಯುತ್ತಿದೆ.ಗವಿಮಠದ ಆವರಣದಲ್ಲಿ ಜಿಪಂ ಸಹಯೋಗದಲ್ಲಿ ಹಮ್ಮಿಕೊಂಡ ಕೃಷಿ ಇಲಾಖೆಯ ಕೃಷಿ ವಸ್ತು ಹಾಗೂ ಜಲಾನಯನ ಮಾದರಿಗಳ ಪ್ರದರ್ಶನ, ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಎನ್.ಆರ್.ಎಲ್.ಎಂ. ಮಹಿಳಾ ಸ್ವ-ಸಹಾಯ ಸಂಘಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಐಕ ಹಾಗೂ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಚಾಲನೆ ನೀಡಿದರು.
ಸಂಸದ ರಾಜಶೇಖರ ಬಸವರಾಜ ಹಿಟ್ನಾಳ ಮಾತನಾಡಿ, ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಜಿಪಂ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಎನ್.ಆರ್.ಎಲ್.ಎಂ. ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರದರ್ಶನ, ತೋಟಗಾರಿಕೆಯ ತಂತ್ರಜ್ಞಾನಗಳ ಪ್ರದರ್ಶನ, ವಿವಿಧ ಹಣ್ಣುಗಳ ಪ್ರದರ್ಶ, ಸ್ವ-ಸಹಾಯ ಗುಂಪುಗಳು ಸಿದ್ದಪಡಿಸಲಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದ್ದು, ಜಾತ್ರೆಗೆ ಬರುವ ಭಕ್ತಾದಿಗಳು ಇವುಗಳನ್ನು ವೀಕ್ಷಿಸಬೇಕೆಂದರು.ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಾತ್ರೆಯ ನಿಮಿತ್ತ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳು ರೈತರಿಗೆ ಬೇಕಾಗಿರುವ ಕೃಷಿ ಸಲಕರಣೆ ಬಗ್ಗೆ ಮಾಹಿತಿ ನೀಡುವಂತಹ ಕಾರ್ಯ ಮಾಡುತ್ತಿವೆ. ಇಲ್ಲಿಗೆ ರೈತರು ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬೇಕು. ಇದರ ಜೊತೆಗೆ ಸ್ತ್ರೀಶಕ್ತಿ ಸಂಘಗಳು ಯಾವ ರೀತಿ ಸಬಲೀಕರಣವಾಗಬೇಕೆಂಬುವುದರ ಬಗ್ಗೆ ಎನ್.ಆರ್.ಎಲ್.ಎಂ. ಯೋಜನೆಯಡಿ ಜಿಪಂನಿಂದ ಮಾಹಿತಿ ನೀಡವಾಗುತ್ತಿದೆ. 15 ದಿನಗಳ ಕಾಲ ನಡೆಯುವ ಈ ಪ್ರದರ್ಶನ ಮಳಿಗೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕೃಷಿ ವಸ್ತು ಪ್ರದರ್ಶನದಿಂದ ರೈತರಿಗೆ ಅನುಕೂಲವಾಗುವುದಲ್ಲದೇ ವಿಶೇಷವಾಗಿ ಇಂದಿನ ಪೀಳಿಗೆಯವರಿಗೆ ಪಾರಂಪರಿಕ ಕೃಷಿ ಪದ್ಧತಿಗಳ ಬಗ್ಗೆ ತಿಳಿಯುತ್ತದೆ ಎಂದರು.ಜಿಪಂ ಯೋಜನಾ ನಿರ್ದೆಶಕ ಪ್ರಕಾಶ ವಡ್ಡರ ಸರಸ್ ಮೇಳದ ಕುರಿತು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಕೃಷ್ಣ ಉಕುಂದ್ ಫಲ-ಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೃಷಿ ಇಲಾಖೆಯ ಜಂಟಿ ನಿರ್ದೆಶಕ ರುದ್ರೇಶಪ್ಪ ಟಿ.ಎಸ್. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರು, ಸಾರ್ವಜನಿಕರಿದ್ದರು.