ಸಾರಾಂಶ
ಲಾಂಡ್ರಿ ಮಾಲೀಕನಿಗೆ ಸಿಕ್ಕಿದ್ದ 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾಂಗಲ್ಯ ಸರವನ್ನು ವಾರಸುದಾರರಿಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆತ ಘಟನೆ ಸವಣೂರು ಪಟ್ಟಣದಲ್ಲಿ ನಡೆದಿದೆ.
ಸವಣೂರು: ಲಾಂಡ್ರಿ ಮಾಲೀಕನಿಗೆ ಸಿಕ್ಕಿದ್ದ 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾಂಗಲ್ಯ ಸರವನ್ನು ವಾರಸುದಾರರಿಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆತ ಘಟನೆ ಸವಣೂರು ಪಟ್ಟಣದಲ್ಲಿ ನಡೆದಿದೆ.
ಸವಣೂರು ತಾಲೂಕಿನ ನಂದಿಹಳ್ಳಿ ಗ್ರಾಮದ ಬಸನಗೌಡ ಪಾಟೀಲ ಎಂಬವರು ಇಸ್ಟ್ರಿ ಮಾಡಲು ಇಲ್ಲಿಯ ಹಳೆ ಕೋರ್ಟ್ ಹತ್ತಿರದ ಜೋಯಾ ಲಾಂಡ್ರಿಗೆ ಬಟ್ಟೆ ನೀಡಿದ್ದರು. ಆ ಬಟ್ಟೆಗಳಲ್ಲಿ ಒಂದು ಶರ್ಟ್‌ನಲ್ಲಿ ಅವರ ಪತ್ನಿಯ 4 ತೊಲೆ ಚಿನ್ನದ ಮಾಂಗಲ್ಯ ಸರ ಇತ್ತು. ಅದನ್ನು ತಿಳಿಯದೇ ಬಸನಗೌಡರು ಇಸ್ತ್ರಿ ಮಾಡಲು ನೀಡಿದ್ದರು. ಅಷ್ಟೇ ಅಲ್ಲದೇ ಅರ್ಜೆಂಟ್ ಇದೆ ಎಂದು ಎರಡು ಜೊತೆ ಬಟ್ಟೆ ಇಸ್ಟ್ರಿ ಮಾಡಿಕೊಂಡು ಉಳಿದಿದ್ದನ್ನು ಆ ಮೇಲೆ ಒಯ್ಯುತ್ತೇನೆ ಎಂದು ಬೆಂಗಳೂರಿಗೆ ತೆರಳಿದ್ದರು.ಪಾಟೀಲರ ಪತ್ನಿ 4 ತೊಲೆಯ ಮಾಂಗಲ್ಯ ಸರವನ್ನು ತಿಜೋರಿಯಲ್ಲಿ ಇಡುವಂತೆ ಮಗಳಿಗೆ ತಿಳಿಸಿದ್ದಳು. ಮಗಳು ಅವಸರದಲ್ಲಿ ಅದನ್ನು ತಂದೆಯ ಅಂಗಿಯ ಕಿಸೆಯಲ್ಲಿ ಇಟ್ಟಿದ್ದಳು. ತಿಜೋರಿಯಲ್ಲಿ ಹುಡುಕಿದಾಗ ಅದು ಸಿಗಲಿಲ್ಲ, ಬಳಿಕ ಪಾಟೀಲರ ಅಂಗಿ ಕಿಸೆಯಲ್ಲಿ ಇರುವುದು ತಿಳಿದು ಫೋನ್ ಮಾಡಿ ವಿಚಾರಿಸಿದಾಗ ಅದು ಇಸ್ತ್ರಿಗೆ ನೀಡಿದ ವಿಚಾರ ಗೊತ್ತಾಗಿದೆ.
ಬಸನಗೌಡ ಪಾಟೀಲರು ದೂರವಾಣಿ ಮೂಲಕ ಲಾಂಡ್ರಿ ಮಾಲಿಕ ಸಾಜಿದ ಅಹ್ಮದ ಫಾಕಜಾದೆ ಅವರನ್ನು ಸಂಪರ್ಕಿಸಿದಾಗ, ಆತ ಮಾಂಗಲ್ಯ ಸರ ಸಿಕ್ಕಿದೆ. ಇಸ್ತ್ರಿ ಮಾಡುವಾಗ ಕೆಳಕ್ಕೆ ಬಿದ್ದಿತ್ತು. ಅದು ಯಾರದೆಂದು ತಿಳಿಯದೇ ಎಲ್ಲರನ್ನೂ ವಿಚಾರಿಸಿದೆ. ಗೊತ್ತಾಗಲಿಲ್ಲ ಎಂದು ಹೇಳಿದ್ದಲ್ಲದೇ ಅದನ್ನು ಜೋಪಾನವಾಗಿ ಎತ್ತಿಟ್ಟಿದ್ದರು. ಬಳಿಕ ಅದನ್ನು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.ಸಾಜೀದ್ ಪಾಕಜಾದೆ ಮಾನವೀಯತೆಯನ್ನು ಅರಿತು ಬಸನಗೌಡ ಹಾಗೂ ಸ್ನೇಹಿತರು ಸನ್ಮಾನಿಸಿ ಗೌರವಿಸಿದ್ದಾನೆ.