ಸಾರಾಂಶ
ಪದ್ಮಶ್ರೀ ಪುರಸ್ಕೃತರಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಸಮಂಜಸ ತಂಡವು ಸನ್ಮಾನಿಸಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈದ್ಯರು ಬೇಜವಾಬ್ದಾರರಾದರೆ ಜನರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ಕ್ಷೇತ್ರದಲ್ಲಿ ರಾಕ್ಷಸತೆ ಹೆಚ್ಚುತ್ತಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.ಶನಿವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಮಂಜಸ ತಂಡ ಆಯೋಜಿಸಿದ್ದ ಪದ್ಮಶ್ರೀ ಪುರಸ್ಕೃತರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕ ಹಣ ಮಾಡಬೇಕೆಂಬ ಸ್ವಾರ್ಥಕ್ಕೆ ಸಿಲುಕಿರುವ ಹಲವು ವೈದ್ಯರು ವೃತ್ತಿಪರತೆಯನ್ನೇ ಮರೆಯುತ್ತಿರುವ ಕಾಲ ಘಟ್ಟದಲ್ಲಿದ್ದೇವೆ. ಸಣ್ಣ ಚಿಕಿತ್ಸೆಗೂ ಮೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಸಾಮಾನ್ಯ ಜನರು ಏನೂ ಮಾಡಲಾಗದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮನೋವೈದ್ಯ ಪದ್ಮಶ್ರೀ ಡಾ। ಸಿ.ಆರ್.ಚಂದ್ರಶೇಖರ್ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ವಿದ್ಯಾವಂತರನ್ನಷ್ಟೇ ತಯಾರು ಮಾಡಲು ಸೀಮಿತವಾಗಿದೆ. ಆದರೆ ಮೌಢ್ಯ, ಮೂಢನಂಬಿಕೆ ಇನ್ನೂ ನಮ್ಮಿಂದ ದೂರವಾಗಿಲ್ಲ. ವಿಜ್ಞಾನ ಕ್ಷೇತ್ರ ಬೆಳವಣಿಗೆಯಾಗುತ್ತಿದ್ದು, ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಆದರೂ ಮಾನಸಿಕ ಕಾಯಿಲೆಗೆ ವೈದ್ಯರಿಗಿಂತ ಜ್ಯೋತಿಷಿಗಳು, ಶ್ರದ್ಧಾ ಕೇಂದ್ರಗಳಿಗೆ ಹೋಗುವುದೇ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ನಿವೃತ್ತ ಲೆ.ಜ.ರಮೇಶ್ ಹಲಗಲಿ, ಸಮಂಜಸ ತಂಡದ ಪ್ರೊ.ಕೆ.ಈ.ರಾಧಾಕೃಷ್ಣ ಇದ್ದರು.ಪದ್ಮಶ್ರೀ ಸಾಧಕರಿಗೆ ಸನ್ಮಾನಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೃಷಿ ತಜ್ಞ ಸತ್ಯನಾರಾಯಣ ಬೆಲ್ಲೇರಿ, ಸಮಾಜ ಸೇವಾ ಸಾಧಕ ವಿಶೇಷ ಚೇತನ ಕೆ.ಎಸ್.ರಾಜಣ್ಣ, ಶಿಕ್ಷಣ ಸಾಧಕ ಡಾ। ಎಂ.ಕೆ.ಶ್ರೀಧರ್, ಅಗ್ನಿರಕ್ಷಾ ಸಂಸ್ಥಾಪಕಿ ಡಾ। ಪ್ರೇಮಾ ಧನರಾಜ್, ಸಮಾಜ ಸೇವಕ ಸೋಮಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.