ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ ಮಳೆ ಕಡಿಮೆ ಆಗಿರುವ ಈ ಸಂದರ್ಭದಲ್ಲಿ ಕೃಷಿಕರು ಮಿತವಾಗಿ ನೀರಿನ ಬಳಕೆ ಮಾಡಬೇಕು ಮತ್ತು ಮಳೆ ನೀರನ್ನು ಸಂರಕ್ಷಿಸಿಕೊಂಡು ಆಧುನಿಕ ತಂತ್ರಜ್ಞಾನಗಳನ್ನ ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಬೇಕೆಂದು ಪ್ರಗತಿಪರ ಕೃಷಿಕ ಎಂ.ಸಿ. ಕೃಷ್ಣೇಗೌಡ ಸಲಹೆ ನೀಡಿದರು.
ಹಾಸನ ಆಕಾಶವಾಣಿ ಕೇಂದ್ರ ಅರಕಲಗೂಡು ತಾಲೂಕು ಮಲ್ಲಿಪಟ್ಟಣದಲ್ಲಿ ಫೆಬ್ರವರಿ ೧೬ ರ ಗುರುವಾರ ಹಮ್ಮಿಕೊಂಡಿದ್ದ ಹಳ್ಳಿಧ್ವನಿ ಹಾಗೂ ರೇಡಿಯೋ ಕಿಸಾನ್ ದಿವಸ-೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ಕಡಿಮೆ ಮಳೆ ಬೀಳುವ ಇಸ್ರೇಲ್ ದೇಶ ಅತ್ಯುನ್ನತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಡಿಮೆ ನೀರಿನಲ್ಲಿಯೇ ಹೆಚ್ಚು ಕೃಷಿ ಉತ್ಪನ್ನ ಪಡೆಯಲಾಗುತ್ತಿದೆ. ನೀರಿನ ಕುರಿತ ಜಾಗೃತಿ ಆ ದೇಶದ ಕೃಷಿಕರಲ್ಲಿ ಅತ್ಯಧಿಕವಾಗಿದೆ ಅಂತಹ ಅರಿವು ನಮ್ಮ ರೈತರಲ್ಲಿಯೂ ಮೂಡಬೇಕು ಎಂದು ಅವರು ಕೃಷಿಕರಿಗೆ ಕಿವಿಮಾತು ಹೇಳಿದರು. ನಮ್ಮ ದೇಶದಲ್ಲಿ ನೀರೂ ಸೇರಿದಂತೆ ಇತರೆ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿ ದೊರೆಯುತ್ತಿವೆ. ಅವುಗಳನ್ನು ಲಭ್ಯವಿರುವ ತಂತ್ರಜ್ಞಾನದೊಂದಿಗೆ ಸದ್ಬಳಕೆ ಮಾಡಿಕೊಂಡು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮಳೆ ನೀರಿನ ಸಂರಕ್ಷಣೆಗೆ ಕೃಷಿ ಹೊಂಡಗಳನ್ನು ಮಾಡಿಕೊಂಡು ಮುಂದಿನ ದಿನಗಳನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.ಗುರುವಾರ ಬೆಳಗ್ಗೆ ೧೧ ರಿಂದ ೧೨.೨೦ರ ವರೆಗೆ ಹಮ್ಮಿಕೊಂಡ ನೇರ ಪ್ರಸಾರದ ಹಳ್ಳಿಧ್ವನಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಲಾಯಿತು. ಮಲ್ಲಿಪಟ್ಟಣದ ಸರಕಾರಿ ಪ್ರೌಢಶಾಲಾ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದರು. ಹಾಸನ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಿಜಯ್ ಅಂಗಡಿ ಪ್ರಾಸ್ಥಾವಿಕವಾಗಿ ಮಾತನಾಡಿ, ಹಳ್ಳಿ ಧ್ವನಿ ಆಕಾಶವಾಣಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಹಳ್ಳಿಗಳ ವಸ್ತುಸ್ಥಿತಿಯನ್ನು ಅರಿಯುವ ಸಲುವಾಗಿ ಇದನ್ನು ರೂಪಿಸಲಾಗಿದೆ. ಹಳ್ಳಿ ಧ್ವನಿಯ ಮೂಲಕ ಹಳ್ಳಿಗಳ ಇತಿಹಾಸ, ಅಲ್ಲಿನ ಜನ ಜೀವನವನ್ನು ತಿಳಿಯುವ ಹಾಗೂ ಆಕಾಶವಾಣಿಯ ಕೇಳುಗರಿಗೆ ತಲುಪಿಸಿ ಅದನ್ನು ದಾಖಲೀಕರಣ ಮಾಡುವ ಕೆಲಸವನ್ನು ಆಕಾಶವಾಣಿ ಮಾಡುತ್ತಿದೆ ಎಂದು ಅವರು ಹೇಳಿದರು. ಅರಕಲಗೂಡಿನ ಹಿರಿಯ ಪತ್ರಕರ್ತ ಅ.ರಾ. ಸುಬ್ಬರಾವ್ ಮಲ್ಲಿಪಟ್ಟಣದ ಊರಿನ ಇತಿಹಾಸ ಕುರಿತು ಮಾತನಾಡಿದರು. ಮಲ್ಲಿಪಟ್ಟಣದಲ್ಲಿರುವ ಉಳುಮೇಶ್ವರ ದೇವಾಲಯವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಮಲ್ಲಿಪಟ್ಟಣ ವಿಭಿನ್ನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಗ್ರಾಮವಾಗಿದೆ ಎಂದು ಹೇಳಿದರು. ಊರಿನ ಅಭಿವೃದ್ಧಿಗೆ ಕಾಯಕ ಮಾಡಿದವರ ಕುರಿತು ಅಂಚೆ ಇಲಾಖೆಯ ನಿವೃತ್ತ ನೌಕರ ಚಂದ್ರಶೇಖರ್ ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಊರಿನಲ್ಲಿರುವ ಸಂಘ ಸಂಸ್ಥೆಗಳು ಹಾಗೂ ದೇವಾಲಯಗಳ ಪರಿಚಯವನ್ನು ಸಮಾಜ ಸೇವಕ ಎಂ.ಟಿ. ಹುಲ್ಮನೆ ಮಂಜುನಾಥ್ ಮಾಡಿಕೊಟ್ಟರು. ತಾಲೂಕಿನ ಗಡಿ ಗ್ರಾಮಗಳಲ್ಲಿ ಬಾಧಿಸುತ್ತಿರುವ ಆನೆ ಸಮಸ್ಯೆಯ ಆರಂಭ, ಉಪಟಳ ಹಾಗೂ ಪರಿಹಾರಗಳನ್ನು ಕುರಿತು ಗ್ರಾಪಂ ಮಾಜಿ ಅಧ್ಯಕ್ಷ ಮದಲಾಪುರದ ಎಂ.ಆರ್. ರಂಗಸ್ವಾಮಿ ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಮಲ್ಲಿಪಟ್ಟಣದಲ್ಲಿರುವ ಕೊರತೆಗಳು ಹಾಗೂ ಆಗಲೇಬೇಕಿರುವ ಕಾರ್ಯಗಳ ಕುರಿತು ಕಾಫಿ ಬೆಳೆಗಾರ ಹೆಚ್.ಎನ್. ವೆಂಕಟೇಶ್ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ಸೇವೆಗಳನ್ನು ಕುರಿತು ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಟಿ. ನಾಗರಾಜ್ ವಿಚಾರಗಳನ್ನು ಹಂಚಿಕೊಂಡರು. ಜೈವಿಕ ಇಂಧನದ ಉತ್ಪಾದನೆ ಹಾಗೂ ಅದರ ಅನುಕೂಲಗಳ ಕುರಿತು ಜೈವಿಕ ಇಂಧನ ಉದ್ಯಾನದ ಯೋಜನಾ ಸಂಯೋಜಕ ಡಾ ಎ.ಸಿ. ಗಿರೀಶ್ ಅವರು ತಿಳಿಸಿದರು.
ಹಾಸನದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಮಹಾವಿದ್ಯಾಲಯದ ವೈದ್ಯರು ಮತ್ತು ತಂಡ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳ ಆರೋಗ್ಯ ತಪಾಸಣೆ ಮಾಡಿದರು, ಔಷಧಿಗಳನ್ನು ವಿತರಿಸಿದರು. ಪ್ರಾಧ್ಯಾಪಕರಾದ ಡಾ. ತೋಟದ್ ಮುತ್ತಪ್ಪ ಮಾತನಾಡಿ ನಮ್ಮ ಆಹಾರ ಕ್ರಮ ಇಂದು ನಮ್ಮ ಆರೋಗ್ಯಕ್ಕೆ ಮುಳುವಾಗಿದ್ದು, ನಿತ್ಯವೂ ಹಣ್ಣು ಮತ್ತು ತರಕಾರಿಗಳನ್ನು ತಪ್ಪದೆ ಜನ ಬಳಸಿಕೊಳ್ಳಬೇಕು, ಅಧಿಕ ಎಣ್ಣೆಯು ಆಹಾರದಲ್ಲಿ ಬಳಕೆಯಾಗಬಾರದು ಎಂದು ಸಲಹೆ ನೀಡಿದರು. ಮಲ್ಲಿಪಟ್ಟಣದಲ್ಲೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇಲ್ಲಿಯ ಜನರನ್ನು ಬಾಧಿಸುತ್ತಿದ್ದು ಜೀವನ ಶೈಲಿ ಮತ್ತು ಆಹಾರ ಕ್ರಮಗಳಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದರು.ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಂಗನಾವಾಡಿಯ ಗಿರಿಜಾ ಪೌಷ್ಟಿಕಾಂಶದ ಮಹತ್ವ ಕುರಿತ ಗೀತೆಯೊಂದನ್ನು ಪ್ರಸ್ತುತಪಡಿಸಿದರು.