ಸಾರಾಂಶ
ಬೀದರ್: ಬಸವಾದಿ ಶರಣರು ವಿವಿಧ ಸಂಘ ಸಂಸ್ಥೆಗಳು, ಮಠಾಧೀಶರು, ಬಸವ ತತ್ವ ಅನುಯಾಯಿಗಳ ಮನವಿ ಮೇರೆಗೆ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಶನಿವಾರ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.12ನೇ ಶತಮಾನದಲ್ಲಿ ಕ್ರಾಂತಿಯೋಗಿ ಬಸವಣ್ಣ ಅವರು ಪ್ರತಿಪಾದಿಸಿದ ಸಾರ್ವತ್ರಿಕ ಮೌಲ್ಯಗಳಾದ ಜಾತಿ ರಹಿತ ಸಮಾಜ ನಿರ್ಮಾಣ, ಕಾಯಕದ ಮಹತ್ವ ಮತ್ತು ವರ್ಗ ರಹಿತ ಸಮಾಜ, ಜೀವನ ಮಾರ್ಗ ಸರ್ವಕಾಲಕ್ಕೂ ದಾರಿ ದೀಪವಾಗಿದೆ. ಕಲ್ಯಾಣ ಕ್ರಾಂತಿ ಮೂಲಕ ಸರ್ವರ ಸಮಾನತೆ ಅಸ್ಪೃಶ್ಯತೆ ಹೋಗಲಾಡಿಸಲು ಬಸವಣ್ಣನವರು ವೈಚಾರಿಕ ತಳಹದಿ ಮೇಲೆ ಸುಂದರ ಸಮಾಜ ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಿದವರು ಎಂದು ಹೇಳಿದರು.
ವಯಕ್ತಿಕ ಸ್ವಾತಂತ್ರ್ಯ ಸಮಾನತೆ, ದಾಸೋಹ, ಸಹಬಾಳ್ವೆ, ವರ್ಗ ರಹಿತ ಸಮಾಜ, ವರ್ಣ ರಹಿತ ಸಮಾಜ, ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿದು ವಚನ ಸಾಹಿತ್ಯದ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಹಬಾಳು ಎನ್ನುವ ಮೂಲಕ ಸಮಭಾವದ ತಾತ್ವಕತೆಗಳ ಮೂಲಕ ಸಮಾಜವನ್ನು ಕಟ್ಟುವುದಕ್ಕೆ ಬೇಕಾದ ನೀತಿಗಳನ್ನು ಬೋಧಿಸಿ ದೇಶದ ಸಂವಿಧಾನದ ಆಶಯಗಳಿಗೆ ಅವರ ಚಿಂತನೆಗಳು, ಸಾಂಸ್ಕೃತಿಕ ರಾಯಭಾರಿತ್ವಕ್ಕೆ ಸಮರ್ಥನೀಯ ನೆಲೆ ಒದಗಿಸಿರುವ ಮೇರೆಗೆ ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಕೂಡಲ ಸಂಗಮದ ಬಸವಧರ್ಮ ಪೀಠದ ಪೂಜ್ಯ ಡಾ.ಗಂಗಾದೇವಿ ಅವರು ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯೋಣ ಎಂದು ಹೇಳಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಬಸವಣ್ಣನವರು ಒಂದೇ ಜಾತಿಗೆ ಸೀಮಿತವಲ್ಲ ಅವರ ವಚನ ಸಾಹಿತ್ಯದ ಮೂಲಕ ಸಮಸಮಾಜ ನಿರ್ಮಿಸಲು ಪ್ರಾಮಾಣಿಕವಾಗಿ ದುಡಿದ ಮಹಾನ್ ನಾಯಕರು. ಬಸವಣ್ಣನವರ ತತ್ವ ಸಿದ್ದಾಂತಗಳನ್ನು, ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡರೆ ಮುಂದೆ ಕೋಮು ಗಲಭೆಗಳು ನಡೆಯುವುದಿಲ್ಲ ಎಂದು ಹೇಳಿದರು.ಕಾರ್ಯಕ್ರಮ ಮುನ್ನ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ಭಗತಸಿಂಗ್ ವೃತ್ತ, ಡಾ.ಅಂಬೇಡ್ಕರ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕನ್ನಡಾಂಬೆ ವೃತ್ತದ ಮೂಲಕ ರಂಗಮಂದಿದವರೆಗೆ ತಲುಪಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಎಂಡಿ ಗೌಸ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಅಧಿಕಾರಿಗಳಾದ ಗಿರೀಶ ದೀಲೀಪ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಬಸವಸೇವಾ ಪ್ರತಿಷ್ಠಾನ ಬೀದರ್‌ನ ಡಾ.ಗಂಗಾದೇವಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ಜಿಲ್ಲಾ ಬಸವ ದಳದ ಅಧ್ಯಕ್ಷರು, ಸಮಾಜದ ಮುಖಂಡರು, ಹಿರಿಯರು, ಬಸವ ಅನುಯಾಯಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.