ಪುರಸಭೆಯ ಪ್ರಮುಖ ಫೈಲ್ ನಾಪತ್ತೆ

| Published : Jun 27 2024, 01:10 AM IST

ಸಾರಾಂಶ

ಶಿರಾಳಕೊಪ್ಪ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಉಪವಿಭಾಗಾಧಿಕಾರಿ ಯತೀಶ್ ಅದ್ಯಕ್ಷತೆಯಲ್ಲಿ ನಡೆಯಿತು. ಮುಖ್ಯಾಧಿಕಾರಿ ಹೇಮಂತ್ ಇದ್ದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಖಾಲಿ ಇರುವಂತಹ ನಿವೇಶನಗಳನ್ನು ಹಾಗೂ ಅನಧೀಕೃತವಾಗಿ ವಾಸಿಸುವ ನಿವೇಶನಗಳನ್ನು ಗುರುತಿಸಿ ಈ ಹಿಂದೆ ಇದ್ದಂತಹ ತಹಸೀಲ್ದಾರ್ ಪುರಸಭೆಗೆ ಕಳಿಸಿದ್ದ ಫೈಲ್ ನಾಪತ್ತೆ ಆಗಿದ್ದು, ಖಾಲಿ ಇರುವ ನಿವೇಶನಗಳನ್ನು ಕೆಲವು ಸಿಬ್ಬಂದಿ ಹಣಕ್ಕೆ ಹಂಚುತ್ತಿದ್ದಾರೆ. ಈ ಕುರಿತು ಫೈಲ್ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು ಹಾಗೂ ಫೈಲ್ ಕಾಣೆಯಾಗಲು ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಪುರಸಭೆ ಸದಸ್ಯರು ಒತ್ತಾಯ ಮಾಡಿದ್ದಾರೆ.ಶಿರಾಳಕೊಪ್ಪ ಪುರಸಭೆಯ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಆಗಿರುವ ಯತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫೈಲ್ ಕಾಣೆ ಆಗಿರುವ ಬಗ್ಗೆ ಸದಸ್ಯ ಟಿ.ರಾಜು ಪ್ರಸ್ತಾಪಿಸಿದಾಗ ಕೆಲ ಸದಸ್ಯರು ಧ್ವನಿ ಸೇರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಉಪವಿಭಾಗಾಧಿಕಾರಿ ಯತೀಶ್ ಮಾತನಾಡಿ, ಇದೊಂದು ಬಹುದೊಡ್ಡ ಅಪರಾಧ, ೪೦೦ ನಿವೇಶನ ಗುರುತಿಸಿ ಫೈಲ್ ಕಳಿಸಿರುವ ಸಂಗತಿ ಗೊತ್ತಿದೆ. ಇಂತಹ ಅಪರಾಧ ಮಾಡಿದವರ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಡಲಾಗುತ್ತದೆ. ನಂತರ ಕಾನೂನುನಾತ್ಮಕ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.ತಡಗಣಿ ರಾಜಣ್ಣ ಮಾತನಾಡಿ, ಶಿರಾಳಕೊಪ್ಪ ಪಟ್ಟಣದಲ್ಲಿ ಡೆಂಘೀ ಜ್ವರವು ತೀವ್ರವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಸೊಳ್ಳೆ ನಿರ್ಮೂಲನೆ ಆಗಬೇಕು ಎಂಬ ಹಿನ್ನೆಲೆಯಲ್ಲಿ ಔಷಧಿ ಸಿಂಪಡಿಸಲಾಗುತ್ತಿತ್ತು. ಆದರೆ ಸ್ಪ್ರೇ ನಲ್ಲಿ ಔಷಧಿಯೇ ಬರುತ್ತಿರಲಿಲ್ಲ, ನಾಗರೀಕರು ಸೊಳ್ಳೆ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಈ ಬಗ್ಗೆ ಪುರಸಭೆಗೆ ಅರ್ಜಿ ಕೊಟ್ಟಿದ್ದೇನೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಪುರಸಭೆಯಲ್ಲಿ ಈ ಸ್ವತ್ತು ಮತ್ತು ಇತರೇ ಕೆಲಸ ಕಾರ್ಯಕ್ಕೆ ಅರ್ಜಿ ಕೊಟ್ಟರೆ ಕೆಲವು ದಿನಗಳ ನಂತರ ವಿಚಾರಣೆ ಮಾಡಿದರೆ ಕೊಟ್ಟಂತಹ ಅರ್ಜಿಗಳೇ ಇರುವದಿಲ್ಲ. ಈ ಕುರಿತು ಉಪ ವಿಭಾಗಾಧಿಕಾರಿಗಳು ನಾನು ಈ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದೆ. ಪುನಃ ತಪ್ಪು ಮಾಡಿದರೆ ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು. ೨೦೨೪-೨೫ನೇ ಸಾಲಿನ ಕೆಲಸ ಕಾರ್ಯಗಳ ಬಗ್ಗೆ ಕ್ರಿಯಾ ಯೋಜನೆ ಸಿದ್ಧ ಪಡಿಸಿರುವ ಕುರಿತು ಸದಸ್ಯರಾದ ರಾಘವೇಂದ್ರ, ಮಹಬಲೇಶ್, ಮುದಸೀರ್, ಟಿ.ರಾಜು, ಮಕಬುಲ್ ಸಾಬ್, ಮಾತನಾಡಿ, ನಮಗೆ ಪಟ್ಟಣದಲ್ಲಿ ಏನು ಕೆಲಸ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ವಾರ್ಡಿನಲ್ಲಿ ಮಾಡಬೇಕಾದ ಸಾಕಷ್ಟು ಕೆಲಸ ಕಾರ್ಯ ಬಿಟ್ಟು ತಿಳಿದಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದಾರೆ ಎಂದಾಗ ಇಂಜನೀಯರ್ ಈ ಕ್ರಿಯಾ ಯೋಜನೆ ಕುಡಿಯುವ ನೀರಿನ ಯೋಜನೆ ಆಗಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವ ಕಡೆ ಯೋಜನೆ ರೂಪಿಸಲಾಗಿದೆ ಎಂದರು. ಸದಸ್ಯ ಟಿ.ರಾಜು ನೀರಿನ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಿ. ಆದರೆ ಪಟ್ಟಣಕ್ಕೆ ನೀರು ಪೂರೈಸುವ ಟ್ಯಾಂಕ್ ಗಳನ್ನು ತುಂಬಿಸಿದರೆ ಎಲ್ಲಾ ಭಾಗಗಳಿಗೆ ನೀರು ಪೂರೈಸಬಹುದು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಯತೀಶ್ ಮಾತನಾಡಿ, ನೀವು ಕ್ರಿಯಾ ಯೋಜನೆ ರೂಪಿಸುವಾಗ ಸದಸ್ಯರ ಗಮನಕ್ಕೆ ತರಬೇಕು ಎಂದು ಇಂಜನೀಯರಿಗೆ ತಿಳಿಸಿ, ಕ್ರಿಯಾ ಯೋಜನೆ ಬದಲಿಸಲು ಬರುತ್ತದೆ. ಅದನ್ನು ಚಚಿರ್ಸಿ ಬಗೆ ಹರಿಸಬೇಕು ಎಂದು ತಿಳಿಸಿದರು. ನಗರೋತ್ಥಾನ ಸೇರಿದಂತೆ ಕೆಲವು ಯೋಜನೆಗಳಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಈ ಎಲ್ಲಾ ಯೋಜನೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸಲಾಗಿದೆ. ಅವರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಈ ವರೆಗೆ ನಮ್ಮ ವಾರ್ಡ್‌ಗಳಿಗೆ ೫ ಲಕ್ಷ ರು.ಗಳನ್ನು ಕೊಟ್ಟಿಲ್ಲ ಎಂದು ಮಹಬಲೇಶ್ ಆಕ್ರೋಶ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಯತೀಶ್ ಮಾಹಿತಿ ನೀಡಿ, ಕುಮದ್ವತಿ ನದಿಯಿಂದ ಕುಡಿಯುವ ನೀರು ತರಲು ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಮಾಗರ್ಮಧ್ಯೆದಲ್ಲಿಯ ರೈತರು ಇರುವದರಿಂದ ಸಮಸ್ಯೆ ಎದುರಾಗಿದೆ. ಈಗ ಎಕ್ಸಪ್ರೆಸ್ ಲೈನ್ ಸಿದ್ದಪಡಿಸಲಾಗುತ್ತಿದ್ದು, ವಿದ್ಯುತ್ ಇಲಾಖೆ ಸಿದ್ದಪಡಿಸಿಕೊಟ್ಟ ನಂತರ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದರು. ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾದರಿ ಪ್ರಶ್ನೆ ಪತ್ರಿಕೆಗೆ ಸಹಾಯವಾಗಲೆಂದು ಪಟ್ಟಣದಲ್ಲಿರುವ ೬ ಶಾಲೆಗಳಿಗೆ ದಿನ ಪತ್ರಿಕೆಯನ್ನು ಪುರಸಭೆಯಿಂದ ಕೊಡಿಸಿ ಕೊಡಲು ಅನುಮತಿ ನೀಡಲಾಯಿತು. ಪಟ್ಟಣದಲ್ಲಿಯ ವಿವಿದ ಜನಾಂಗದ ಶವ ಸಂಸ್ಕಾರಕ್ಕೆ ಶವಸಂಸ್ಕರಣ ಪೆಟ್ಟಿಗೆ ಕೋರಿಕೆ ಬಂದ ಹಿನ್ನೆಲೆಯಲ್ಲಿ ೪ ಶವ ಸಂಸ್ಕರಣ ಪೆಟ್ಟಿಗೆ ತರಿಸಲು ಪರವಾನಿಗೆ ದೊರೆಯಿತು. ಸಭೆಯಲ್ಲಿ ಒಟ್ಟು ೨೨ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ವೇದಿಕೆಯಲ್ಲಿದ್ದ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಸದಸ್ಯರ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು.