ಅತಂತ್ರವಾಯಿತಾ ಪಾಲಿಕೆ ಆಡಳಿತ ಯಂತ್ರ?

| Published : Oct 10 2024, 02:17 AM IST / Updated: Oct 10 2024, 02:18 AM IST

ಸಾರಾಂಶ

ಸಂಪನ್ಮೂಲ ಕ್ರೋಡೀಕರಣ ಮಾಡದೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಯಂತ್ರ ಹಳಿ ತಪ್ಪಿದೆ. ಅನುದಾನ ಹಂಚಿಕೆಯಲ್ಲಿನ ತಾರತಮ್ಯದಿಂದ ವಾರ್ಡ್‌ವಾರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಸಂಪನ್ಮೂಲ ಕ್ರೋಢೀಕರಣ ಮಾಡದೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಯಂತ್ರ ಹಳಿ ತಪ್ಪಿದೆ. ಅನುದಾನ ಹಂಚಿಕೆಯಲ್ಲಿನ ತಾರತಮ್ಯದಿಂದ ವಾರ್ಡ್‌ವಾರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಜತೆಗೆ ಕಾಮಗಾರಿಗೂ ಹಣದ ಅಡಚಣೆಯಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಪರಿಣಾಮ ಮಹಾನಗರ ಪಾಲಿಕೆಯ ಮೇಲೆಯೂ ಬೀರಿದೆ. ಕಳೆದೊಂದು ವರ್ಷದಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದ ಅನುದಾನವೇ ಬಂದಿಲ್ಲ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ನಿರ್ವಹಣೆ ಮಾಡುವುದರ ಬಗ್ಗೆಯಾದರೂ ಪಾಲಿಕೆ ಅಧಿಕಾರಿಗಳಿಗಾಗಲಿ, ಸದಸ್ಯರಿಗಾಗಲಿ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಸದಸ್ಯರ ನಿರ್ಲಕ್ಷ್ಯ, ಅಧಿಕಾರಗಳ ಯಡವಟ್ಟಿನಿಂದಾಗಿ ಪಾಲಿಕೆಯ ಆರ್ಥಿಕ ಸ್ಥಿತಿ ಶಿಸ್ತು ಪತನಗೊಂಡಿದೆ ಎನ್ನಲಾಗಿದ್ದು, ತೆರಿಗೆ ಮೂಲಕ ಆದಾಯ ಸಂಗ್ರಹಿಸುವಲ್ಲಿ ಪಾಲಿಕೆ ಎಡವಿದೆ.

ಪಾಲಿಕೆಯಲ್ಲಿ ಸುದೀರ್ಘ ಅವಧಿವರೆಗೆ ಆಡಳಿತಾಧಿಕಾರಿ ಕಾರ್ಯನಿರ್ವಹಣೆ ಮಾಡಿರುವುದು ಪಾಲಿಕೆಯ ಇಂದಿನ ಆರ್ಥಿಕ ಸಂಕಷ್ಟಕ್ಕೆ ಕಾರಣ ಎನ್ನಲಾಗಿದೆ. ಈಗ ಜನಪ್ರತಿನಿಧಿಗಳ ಆಡಳಿತ ಇದ್ದರೂ ಆಡಳಿತ ಸರಿಯಾಗಿ ಕೈಗೆ ಸಿಗುತ್ತಿಲ್ಲ. ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್‌ ಪ್ರತಿಪಕ್ಷವಾಗಿದೆ. ಈ ಮೊದಲು ಬೆಳಗಾವಿ ಪಾಲಿಕೆಯಲ್ಲಿ ಭಾಷೆ, ಗುಂಪುಗಾರಿಕೆ ಆಧಾರದ ಮೇಲೆ ಸದಸ್ಯರು ಚುನಾಯಿತರಾಗುತ್ತಿದ್ದರು.

ಗಡಿ ಮತ್ತು ಭಾಷಾ ವಿವಾದವೇ ಪ್ರಧಾನವಾಗಿತ್ತಾದರೂ ಪಾಲಿಕೆ ಆಡಳಿತ ಜನೋಪಯೋಗಿಯಾಗಿತ್ತು. ಆದರೆ, ಈಗ ಪ್ರಥಮ ಬಾರಿಗೆ ರಾಷ್ಟ್ರೀಯ ಪಕ್ಷವೊಂದಕ್ಕೆ ಪೂರ್ಣ ಬಹುಮತ ಲಭಿಸಿದ್ದರೂ ಆಡಳಿತ ನಿರ್ವಹಣೆ ಮಾಡುವಲ್ಲಿ ಎಡವಿದೆ. ಇದರ ಪರಿಣಾಮ ರಾಜ್ಯ ಸರ್ಕಾರ ಪ್ರತಿವರ್ಷ ಮಹಾನಗರ ಪಾಲಿಕೆಗೆ ನೀಡುತ್ತಿದ್ದ ನಗರೋತ್ಥಾನ ಅನುದಾನ ಸ್ಥಗಿತಗೊಂಡಿದ್ದು, ಈ ಅನುದಾನ ತರುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎನ್ನಲಾಗಿದೆ.

ಪಾಲಿಕೆಯ ಆದಾಯ ಮೂಲಗಳಿಂದ ಕಟ್ಟುನಿಟ್ಟಾಗಿ ಕರ ಸಂಗ್ರಹಿಸಿದರೆ ಕನಿಷ್ಠವೆಂದರೂ ₹200 ಕೋಟಿ ಬರುತ್ತದೆ ಎನ್ನುತ್ತಾರೆ ನಿವೃತ್ತ ಅಧಿಕಾರಿಗಳು. ಈ ಅನುದಾನ ಸಂಗ್ರಹವಾದರೆ ಸರ್ಕಾರದ ಮೇಲಿನ ಅವಲಂಬನೆ ತಪ್ಪುತ್ತದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪಾಲಿಕೆಗೆ ಈ ದುಸ್ಥಿತಿ ಬಂದಿದೆ ಎನ್ನುತ್ತಾರೆ ಅವರು.

ಕೋಟ್ಯಂತರ ರು. ತೆರಿಗೆ ಬಾಕಿ: ಬೆಳಗಾವಿ ಮಹಾನಗರ ಪಾಲಿಕೆಗೆ ವಿವಿಧ ಸರ್ಕಾರಿ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳಿಂದ ಸುಮಾರು ₹200 ಕೋಟಿ ಆದಾಯ ಬರಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳಿಂದಲೇ ಸುಮಾರು ₹40 ಕೋಟಿ ಬಾಕಿಯಿದೆ. ಹೆಸ್ಕಾಂನ ₹17 ಕೋಟಿ ಬಾಕಿ ಇದ್ದರೆ, ಜಲಮಂಡಳಿಯಿಂದಲೂ ಕೋಟ್ಯಂತರ ರೂಪಾಯಿ ಬಾಕಿ ಇದ್ದು, ಈಗ ಅದನ್ನು ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಸರಿದೂಗಿಸಿಕೊಳ್ಳಲಾಗಿದೆ. ಕೇಬಲ್ ಕಂಪನಿಗಳಿಂದ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಇದೆ. ಇದರ ವಸೂಲಾತಿಗೆ ಏಕೆ ಯಾರು ಮುಂದೆ ಬರುತ್ತಿಲ್ಲ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ. ಇನ್ನೊಂದೆಡೆ ತೆರಿಗೆ ವಸೂಲಾತಿ ಸಹ ಶೋಚನೀಯವಾಗಿದೆ. ಅಧಿಕಾರಿಗಳು ಮತ್ತು ಸದಸ್ಯರೇ ಹೇಳುವಂತೆ ಶೆ.50 ರಿಂದ 60 ಮಾತ್ರ ತೆರಿಗೆ ವಸೂಲಿ ಆಗುತ್ತಿದೆ.

₹20 ಕೋಟಿ ಪ್ರಸ್ತಾಪ: ಶಹಾಪುರ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಹಳೇ ಬಿಪಿ ರಸ್ತೆಯ ನಿರ್ಮಾಣದ ವೇಳೆ ಜಾಗ ಕಳೆದುಕೊಂಡಿದ್ದ ಭೂ ಮಾಲೀಕ ಪಾಟೀಲ ಅವರಿಗೆ ₹20 ಕೋಟಿ ಪರಿಹಾರದ ಬದಲು ಪಾಲಿಕೆ ಆ ಜಮೀನನ್ನು ಮರಳಿ ಮಾಲೀಕರಿಗೆ ನೀಡುವ ಮೂಲಕ ಈ ಪ್ರಕರಣ ಸುಖಾಂತ್ಯಕಂಡಿದೆ. ಆದರೆ, ಈ ರಸ್ತೆ ಕಾಮಗಾರಿಗೆ ಆದ ವೆಚ್ಚದ ನಷ್ಟದ ತುಂಬುವವರು ಯಾರು? ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷದ ಸದಸ್ಯರು ಪಾಲಿಕೆ ಸಾಮಾನ್ಯಸಭೆಯಲ್ಲಿ ಆಗ್ರಹಿಸುತ್ತಾರಾ ಕಾದುನೋಡಬೇಕಿದೆ.ಮಹಾನಗರ ಪಾಲಿಕೆ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಸಂಬಂಧ ಹೈಕೋರ್ಟ್ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಮೇಯರ್‌ ವಿಶೇಷ ಸಭೆ ಕರೆದು ₹20 ಕೋಟಿ ಪರಿಹಾರ ನೀಡಲು ಠರಾವ್‌ ಪಾಸು ಮಾಡಿದ್ದು ದುರ್ದೈವ. ಪಾಲಿಕೆಯನ್ನು ಸೂಪರ್‌ಸೀಡ್‌ ಮಾಡುವುದಾಗಿ ಹೆದರಿಸಿ ಸದಸ್ಯರನ್ನು ಬಲಿಕಾ ಬಕ್ರಾ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಶಾಸಕರಿಗೆ ಸದಸ್ಯರು ಬೇಡವಾಗಿದ್ದಾರೆ.

-ರಮೇಶ ಕುಡಚಿ, ಮಾಜಿ ಶಾಸಕ