ಕುಸ್ತಿ ಪಟುಗಳ ತರಬೇತಿಗಾಗಿ ಬೇಕಿದೆ ಸ್ವತಂತ್ರ ಸೂರು!

| Published : Jan 24 2024, 02:04 AM IST

ಸಾರಾಂಶ

ಜಿಲ್ಲೆಯ ಕುಸ್ತಿ ಪಟುಗಳಿಗೆ ಪ್ರತ್ಯೇಕ ಸಭಾಂಗಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸೇರಿದಂತೆ ಆಡಳಿತ ವ್ಯವಸ್ಥೆಗೆ ಹಲವು ಬಾರಿ ಮನವಿ ಮಾಡಲಾಗಿದೆ. ಬರೀ ಭರವಸೆ ನೀಡುತ್ತಿದ್ದಾರೆಯೇ ಹೊರತು ಜಾಗ, ಸಭಾಂಗಣ ಒದಗಿಸುವ ಮಹತ್ವದ ಕಾರ್ಯ ಮಾಡುತ್ತಿಲ್ಲ.

ಬಸವರಾಜ ಹಿರೇಮಠ

ಧಾರವಾಡ: ಗ್ರಾಮೀಣ ಕ್ರೀಡೆ ಎಂದೇ ಪ್ರಸಿದ್ಧಿ ಪಡೆದಿರುವ, ಕುಸ್ತಿ ಕ್ರೀಡೆಯಲ್ಲಿ ಈ ಹಿಂದೆ ಧಾರವಾಡದ ಜಟ್ಟಿಗಳು ಸಾಕಷ್ಟು ಸಾಧನೆ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕುಸ್ತಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಎಂಬ ತವಕ ಯುವ ಕುಸ್ತಿ ಪಟುಗಳಲ್ಲಿದೆ. ಆದರೆ, ಇವರಿಗೆ ಸ್ವತಂತ್ರ ಸೂರಿಲ್ಲದೇ ಇರುವುದು ಅವರ ಸಾಧನೆಗೆ ಅಡ್ಡಿಯಾಗಿದೆ.

ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲೆಯ ಕುಸ್ತಿ ಪಟುಗಳಿಗೆ ಸೂರು ಬೇಕೆಂದು ಪ್ರಯತ್ನಿಸುತ್ತಿದ್ದರೂ ಆಡಳಿತ ವ್ಯವಸ್ಥೆಯಿಂದ ಒಂಚೂರು ಸ್ಪಂದನೆ ಸಿಗದಿರುವುದು ಅತೀವ ಬೇಸರದ ಸಂಗತಿ. ರಾಜ್ಯ ಸರ್ಕಾರ ಕ್ರೀಡೆಗೆ ಏನೆಲ್ಲ ಮಾಡುತ್ತಿದೆ ಎಂದು ಹೇಳಿಕೊಂಡಿದ್ದೇ ಬಂತು. ಇತ್ತೀಚೆಗೆ ಬಂದಿರುವ ಹೊಸ ಹೊಸ ಕ್ರೀಡೆಗಳಿಗೆ ಬೇಕಾದ ಮೈದಾನ, ಸೂರು-ಸೌಲಭ್ಯ ಒದಗಿಸಿ ಐತಿಹಾಸಿಕ ಮತ್ತು ಗ್ರಾಮೀಣ ಕ್ರೀಡೆಯಾಗಿರುವ ಕುಸ್ತಿಗೆ ಅಗತ್ಯವಾಗಿ ಬೇಕಾದ ಸೌಲಭ್ಯ ನೀಡದೇ ಇರುವುದು ಕ್ರೀಡಾಪಟುಗಳು ಸೇರಿದಂತೆ ಕ್ರೀಡಾಭಿಮಾನಿಗಳಿಗೂ ಅತೀವ ಬೇಸರ ತರಿಸಿದೆ.

ಧಾರವಾಡದಲ್ಲಿ ಈ ಮೊದಲು ಗರಡಿ ಮನೆಗಳಲ್ಲಿ ಕುಸ್ತಿ ಪಟುಗಳು ಸಿದ್ಧರಾಗುತ್ತಿದ್ದರು. ಆದರೆ, 2020ರಲ್ಲಿ ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರದಿಂದ ಜಿಲ್ಲೆಯ ಕುಸ್ತಿಪಟುಗಳಿಗೆ ತರಬೇತಿ ಕೇಂದ್ರ ಶುರು ಮಾಡಲಾಗಿದೆ. ಸದ್ಯ ಒಳಾಂಗಣ ಕ್ರೀಡಾಂಗಣದಲ್ಲಿಯೇ ಕುಸ್ತಿ ತರಬೇತಿ ನಡೆಯುತ್ತಿದೆ. ಅಲ್ಲಿ ಬ್ಯಾಡ್ಮಂಟಿನ್, ಟೇಬಲ್‌ ಟೆನ್ನಿಸ್‌, ಟೆಕ್ವಾಂಡೋ ಸೇರಿದಂತೆ ಹಲವು ಕ್ರೀಡೆಗಳ ತರಬೇತಿ ನಡೆಯುತ್ತಿವೆ. ಹೀಗಾಗಿ ನಿರ್ದಿಷ್ಟವಾಗಿ ಕುಸ್ತಿ ಪಟುಗಳು ತರಬೇತಿ ಪಡೆಯಲು ಅನಾನುಕೂಲವಾಗುತ್ತಿದೆ.

ಸದ್ಯ ಮಹಿಳಾ ಕುಸ್ತಿ ಪಟುಗಳು ಸೇರಿದಂತೆ 25ಕ್ಕೂ ಹೆಚ್ಚು ಕುಸ್ತಿ ಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ಜತೆಗೆ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಸಾಕಷ್ಟು ಚಿನ್ನ, ಬೆಳ್ಳಿ ಪದಕಗಳನ್ನೂ ಪಡೆದು ಧಾರವಾಡದ ಖ್ಯಾತಿ ಹೆಚ್ಚಿಸುತ್ತಿದ್ದಾರೆ. ಪುಷ್ಪಾ ನಾಯಕ ಎಂಬ ಬಾಲಕಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯದಲ್ಲಿ ಪದಕ, ಭಜರಂಗಿ ದೊಡಮನಿ, ಯಂಕಪ್ಪ ಕೂಡಗಿ ರಾಜ್ಯ ಮಟ್ಟದಲ್ಲಿ ಗೆಲವು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ. ಸ್ವಂತ ಸೂರಿಲ್ಲದೇ ಇದ್ದರೂ ಅತ್ಯುತ್ತಮ ತರಬೇತಿ ಪಡೆದು ಪದಕಗಳನ್ನು ತರುತ್ತಿದ್ದು ಬರುವ ದಿನಗಳಲ್ಲಿ ಕುಸ್ತಿ ತರಬೇತಿಗೆ ಪ್ರತ್ಯೇಕ ಸಭಾಂಗಣ ದೊರೆತರೆ ರಾಜ್ಯದಲ್ಲಿಯೇ ಧಾರವಾಡದ ಕುಸ್ತಿ ಪಟುಗಳು ಮಿಂಚಲಿದ್ದಾರೆ ಎಂದು ಕುಸ್ತಿ ತರಬೇತುದಾರರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಕುಸ್ತಿ ಪಟುಗಳಿಗೆ ಪ್ರತ್ಯೇಕ ಸಭಾಂಗಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸೇರಿದಂತೆ ಆಡಳಿತ ವ್ಯವಸ್ಥೆಗೆ ಹಲವು ಬಾರಿ ಮನವಿ ಮಾಡಲಾಗಿದೆ. ಬರೀ ಭರವಸೆ ನೀಡುತ್ತಿದ್ದಾರೆಯೇ ಹೊರತು ಜಾಗ, ಸಭಾಂಗಣ ಒದಗಿಸುವ ಮಹತ್ವದ ಕಾರ್ಯ ಮಾಡುತ್ತಿಲ್ಲ. ಧಾರವಾಡ ಜಿಲ್ಲೆಯು ಕುಸ್ತಿಯ ತವರೂರು. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕುಸ್ತಿ ಪಟು ಅಶೋಕ ಏಣಗಿ, ಬಸಣ್ಣ ಇಟಿಗಟ್ಟಿ, ಮೌಲಾಸಾಬ ಸಿಂಗನಹಳ್ಳಿ, ರಫೀಕ ಹೋಳಿ ಅಂತಹ ಕುಸ್ತಿಪಟುಗಳು ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ ಪ್ರಶಸ್ತಿ ಪಡೆದವರು ಇಲ್ಲಿದ್ದಾರೆ. ಇವರ ಹೆಸರು ಉಳಿಸಿಕೊಳ್ಳಲು ಪ್ರತ್ಯೇಕ ಸೂರು ಮಾಡಿಕೊಡುವ ಮೂಲಕ ಸಾಕಷ್ಟು ಯುವ ಕುಸ್ತಿ ಪಟುಗಳು ಬೆಳೆಯಲು ಮತ್ತು ಕುಸ್ತಿ ಕ್ರೀಡೆಯನ್ನು ಬೆಳೆಸಲು ಪ್ರೋತ್ಸಾಹಿಸಬೇಕಿದೆ. ಒಳಾಂಗಣ ಕ್ರೀಡಾಂಗಣ ಹಿಂಭಾಗ ಮತ್ತು ಮುಂಭಾಗದಲ್ಲಿ ಎಲ್ಲಿಯಾದರೂ ಆರ್.ಎನ್‌. ಶೆಟ್ಟಿ ಕ್ರೀಡಾಂಗಣದ ಹತ್ತಿರ ಒಂದು ಮ್ಯಾಟ್ ಹಾಲು ಮಾಡಿಕೊಡಬೇಕು ಎಂದು ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಲಿಂಗರಾಜ್ ಹಡಪದ, ಜಿನ್ನಪ್ಪ ಕುಂದಗೋಳ, ಮುಶಪ್ಪ ಮಾಯಣ್ಣವರ್, ವಿರೂಪಾಕ್ಷಿ ವಡಕನ್ನವರ್, ಮಾರುತಿ ಅಗಸಿಮನಿ, ಧನಂಜಯ್ ಇಟಿಗಟ್ಟಿ, ಅರ್ಜುನ್ ಬೆಳ್ಳಿಗಟ್ಟಿ ಆಗ್ರಹಿಸುತ್ತಾರೆ.

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಜಾಗದ ಅನುಕೂಲತೆ ನೋಡಿಕೊಂಡು ಆದಷ್ಟು ಶೀಘ್ರ ಕುಸ್ತಿ ತರಬೇತಿಗಾಗಿ ಪ್ರತ್ಯೇಕ ಸಭಾಂಗಣ ನಿರ್ಮಿಸಿಕೊಡುವ ಕುರಿತು ಕ್ರೀಡಾ ನಿರ್ದೇಶಕರ ಜತೆಗೆ ಸಭೆ ಮಾಡುತ್ತೇನೆ. ಜತೆಗೆ ಅವರ ಹಾಸ್ಟೇಲ್‌ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಪ್ರಯತ್ನಿಸಲಾಗುವುದು ಜಿಲ್ಲಾಧಿಕಾರಿ ಗುರುದತ್ತ್‌ ಹೆಗಡೆ ತಿಳಿಸಿದ್ದಾರೆ.