ಆದರ್ಶ ಶಾಲೆಯ ಅವ್ಯವಸ್ಥೆ ಸರಿಪಡಿಸಲು ಸೂಚನೆ

| Published : Sep 11 2024, 01:05 AM IST

ಸಾರಾಂಶ

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ವ್ಯವಸ್ಥೆ ಇದ್ದರೂ ಕೂಡ ಇದುವರೆಗೂ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿಲ್ಲ. ಮೊದಲ ವಾರ್ಷಿಕ ಪರೀಕ್ಷೆಗೆ ಕೇವಲ ಹದಿನೈದು ದಿನಗಳು ಮಾತ್ರ ಬಾಕಿ ಇದೆ, ಆದರೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯ ಬೋಧಿಸುವ ಶಿಕ್ಷಕರೇ ಇಲ್ಲ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಆದರ್ಶ ಶಾಲೆಯಲ್ಲಿ ಅವ್ಯವಸ್ಥೆ ಎಂಬ ವರದಿ ಸೆಪ್ಟೆಂಬರ್ 4ರಂದು ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ತಹಸೀಲ್ದಾರ್‌ ಮಹೇಶ್ ಎಸ್ ಪತ್ರಿ ಅವರು, ಮಂಗಳವಾರ ನಗರದ ಹೊರವಲಯದಲ್ಲಿರುವ ಆದರ್ಶ ಶಾಲೆಯಗೆ ಭೇಟಿ ನೀಡಿ ಪರಿಶೀಲಿಸಿದರು.

ಸುಮಾರು 480 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಆದರ್ಶ ಶಾಲೆಯಲ್ಲಿನ ಸಮಸ್ಯೆಗಳ ಗಂಭೀರತೆಯನ್ನು ಅರಿತ ತಹಸೀಲ್ದಾರ್ ಮಹೇಶ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಅಕ್ಷರಾ ದಾಸೋಹ ಅಧಿಕಾರಿ ನರಸಿಂಹಯ್ಯ ಆರ್‌ಐ ಅಮರ ನಾರಾಯಣ ಅವರೊಡನೆ ಮಂಗಳವಾರ ಆದರ್ಶ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳು ಹಾಗೂ ಪೋಷಕರ ಅಹವಾಲು ಆಲಿಸಿದರು. ಶಾಲೆಯಲ್ಲಿನ ಶೌಚಾಲಯ ದತ್ತ ಧಾವಿಸಿದ ತಹಸೀಲ್ದಾರ್‌ ಅಲ್ಲಿ ಚಿಲಕವಿಲ್ಲದ ಬಾಗಿಲು, ನೀರು ಬಾರದ ನಲ್ಲಿ, ಸ್ವಚ್ಛತೆ ಕಾಣದ ಶೌಚಾಲಯಗಳನ್ನು ಕಂಡ ಶಾಲೆಯ ಪ್ರಾಂಶುಪಾಲೆ ವಿನುತ ಅವರನ್ನು ತರಾಟೆಗೆ ತೆಗೆದುಕೊಂಡರು. ಅಡುಗೆ ಮನೆಗೆ ತೆರಳಿದ ತಹಸೀಲ್ದಾರ್, ಅಹಾರ ಸಾಮಾಗ್ರಿಗಳನ್ನು ಪರಿಶೀಲನೆ ನಡೆಸಿ, ಅಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ವ್ಯವಸ್ಥೆ ಇದ್ದರೂ ಕೂಡ ಇದುವರೆಗೂ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿಲ್ಲ. ಮೊದಲ ವಾರ್ಷಿಕ ಪರೀಕ್ಷೆಗೆ ಕೇವಲ ಹದಿನೈದು ದಿನಗಳು ಮಾತ್ರ ಬಾಕಿ ಇದೆ, ಆದರೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯ ಬೋಧಿಸುವ ಶಿಕ್ಷಕರೇ ಇಲ್ಲ. ಇದನ್ನು ಕೇಳಿ ಕುಪಿತರಾದ ತಹಸೀಲ್ದಾರ್ ಅವರು ಬಿಇಒ ಮತ್ತು ಪ್ರಾಂಶುಪಾಲರಿಗೆ ಮುಂದಿನ ಶುಕ್ರವಾರದೊಳಗೆ ಶಾಲೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಇಒ ಶ್ರೀನಿವಾಸ್ ಮೂರ್ತಿ ಅಕ್ಷರ ದಾಸೋಹ ಉಪನಿರ್ದೇಶಕ ನರಸಿಂಹಪ್ಪ ಅಮರನಾರಾಯಣ್ ಮತ್ತು ಶಾಲಾ ಸಿಬ್ಬಂದಿ ವರ್ಗ ಮತ್ತು ಪೋಷಕರು ಹಾಜರಿದ್ದರು.