ಸಾರಾಂಶ
ಅಜೀಜಅಹ್ಮದ ಬಳಗಾನೂರ
ಧಾರವಾಡ:ಕೃಷಿ ಮೇಳದಲ್ಲಿ ಜಿಲ್ಲಾಡಳಿತ, ಧಾರವಾಡ ಜಿಪಂ, ಕೃಷಿ ಇಲಾಖೆ ಧಾರವಾಡ ಆಶ್ರಯದಲ್ಲಿ ಆಕರ್ಷಕವಾದ ಸಮಗ್ರ ಕೃಷಿ ಪದ್ಧತಿಯ ಅಳವಡಿಕೆ ಕುರಿತು ಮಾಹಿತಿ ನೀಡುವ ರೂಪಕ ರೈತರ ಆಕರ್ಷಣೆಗೆ ಕಾರಣವಾಯಿತು.
ರೈತರು ಬಿತ್ತನೆ ಮಾಡಿದ ಬೆಳೆಯು ಸಮರ್ಪಕ ಮಳೆಯಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಗ್ರಾಮ ಹೇಗಿರಲಿದೆ ಎಂಬುದರ ಕುರಿತು ಕೃಷಿ ಮೇಳದಲ್ಲಿ ರೂಪಕ ತಯಾರಿಸಿ ರೈತರಿಗೆ ಸಮಗ್ರ ಮಾಹಿತಿ ನೀಡಿದೆ.ಪ್ರಕೃತಿಯಲ್ಲಿ ಸಂಭವಿಸುವ ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಅನ್ನದಾತ ಬೆಳೆದ ಬೆಳೆ ಹಾಳಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ರೈತರಿಗೆ ಕೃಷಿಯ ಬಗೆಗಿರುವ ಮಾಹಿತಿಯ ಕೊರತೆ. ಆಧುನಿಕತೆಗೆ ತಕ್ಕಂತೆ ಹೊಸ-ಹೊಸ ಪ್ರಯೋಗಗಳ ಮೂಲಕವೂ ಕೃಷಿ ಚಟುವಟಿಕೆ ನಡೆಸಬಹುದಾಗಿದೆ. ಇದರಿಂದಾಗಿ ರೈತ ಹೆಚ್ಚಿನ ಲಾಭ ಗಳಿಸಬಹುದು. ಇದೇ ಸಮಗ್ರ ಕೃಷಿ ಪದ್ಧತಿ.
ರೈತರು ತಮ್ಮ ಜಮೀನಿನ ಒಂದೇ ಪ್ರದೇಶದಲ್ಲಿ ಬೆಳೆಯ ಜತೆಗೆ ಇತರೆ ಬೆಳೆಗಳ ಉತ್ಪಾದನೆ, ಪಶುಸಂಗೋಪನೆ, ಕೋಳಿ, ಮೀನುಗಾರಿಕೆ, ತೋಟಗಾರಿಕೆ, ಕೋಳಿ, ಬಾತುಕೋಳಿ ಸಾಕಾಣಿಕೆ, ಅರಣ್ಯ, ಪಾರಿವಾಳ ಸಾಕಾಣಿಕೆ, ಜೇನು ಕೃಷಿ, ಅಣಬೆ ಕೃಷಿ, ರೇಷ್ಮೆ ಕೃಷಿ, ಹೈನುಗಾರಿಕೆ, ಕೋಳಿ, ಮೇವು ಉತ್ಪಾದನೆ, ಮೇಕೆ ಸಾಕಾಣಿಕೆ, ನರ್ಸರಿ, ಕುರಿ ಸಾಕಾಣಿಕೆ, ಬೀಜ ಉತ್ಪಾದನೆ, ಹಂದಿ ಸಾಕಾಣಿಕೆ, ಮೊಲ ಸಾಕಾಣಿಕೆ ಸೇರಿದಂತೆ ಇತರೆ ಉಪಕಸಬು ಕೈಗೊಳ್ಳುವ ಮೂಲಕ ರೈತರು ಹೆಚ್ಚಿನ ಲಾಭ ಹೇಗೆ ಗಳಿಸಬಹುದು ಎಂಬುದನ್ನು ರೈತರಿಗೆ ಮಾಹಿತಿ ನೀಡಲಾಯಿತು.ಗುಡ್ಡ ಪ್ರದೇಶದಲ್ಲಿರುವ ಫಲವತ್ತಾದ ಮಣ್ಣು ಮಳೆನೀರಿಗೆ ಹರಿದು ಹೋಗದಂತೆ ಅಡ್ಡಲಾಗಿ ಚೆಕ್‌ಡ್ಯಾಂ, ಸಮಪಾತಳಿ ಕಂದಕ, ಪರ‍್ಯಾಯ ಸಮಪಾತಳಿ ಕಂದಕ, ಸಮಪಾತಳಿ ಬದು, ಹಾಗೆಯೇ ಹೊಲಗಳಲ್ಲಿ ಫಲವತ್ತಾದ ಮಣ್ಣು ಹರಿದು ಹೋಗದಂತೆ ಬೋದುಸಾಲು, ಚೌಕುಮಡಿ ನಿರ್ಮಾಣ, ಹೊಲಗಳಲ್ಲಿ ತುಂತುರು ಹನಿ ನೀರಾವರಿ ಪದ್ಧತಿ ಅಳವಡಿಕೆ, ಕೃಷಿಹೊಂಡ ನಿರ್ಮಾಣ ಮಾಡುವ ಕುರಿತು ಸಮಗ್ರ ಮಾಹಿತಿಯನ್ನು ರೂಪಕದ ಮೂಲಕ ತಿಳಿಸಲಾಗುತ್ತಿದೆ.ಉತ್ತಮ ಸ್ಪಂದನೆ:
ಪ್ರತಿವರ್ಷವೂ ಕೃಷಿ ಮೇಳದಲ್ಲಿ ಈ ರೀತಿಯ ರೂಪಕ ಸಿದ್ಧಪಡಿಸಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದಾಗುವ ಲಾಭದ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ಇದಕ್ಕೆ ರೈತರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹುಬ್ಬಳ್ಳಿಯ ಸಹಾಯಕ ಕೃಷಿ ಅಧಿಕಾರಿ ಆರ್.ಎಸ್. ಜಂಬಗಿ ಕನ್ನಡಪ್ರಭಕ್ಕೆ ತಿಳಿಸಿದರು.ಸರಿಯಾಗಿ ಮಳಿ, ಬೆಳಿ ಆಗದೇ ಬಾಳ ತೊಂದರಿ ಅನುಭವಿಸಕತ್ತೀವ್ರಿ. ಕೃಷಿ ಇಲಾಖೆಯಿಂದ ಹೆಚ್ಚೆಚ್ಚು ಇಂತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡ್ರ ನಮಗೂ ಬಾಳ ಚಲೋ ಆಕ್ಕೇತ್ರಿ ಎಂದು ಹನುಮಪ್ಪ ದ್ಯಾವೂರ ಹೇಳಿದರು.ಪ್ರತಿವರ್ಷ ಕೃಷಿ ಮೇಳಕ್ಕೆ ಆಗಮಿಸುತ್ತೇನೆ. ಸಮಗ್ರ ಕೃಷಿ ಪದ್ಧತಿ ಅಳವಡಿಕೆಯ ಕುರಿತ ರೂಪಕವು ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದು ಮೈಲಾರಪ್ಪ ಕೊಣ್ಣೂರ ಹೇಳಿದರು.