ಸಾರಾಂಶ
- ಬೆಟ್ಟ ಏರಲು 2 ದಿನ ಅವಕಾಶ । ಮೊದಲ ದಿನ 50 ಸಾವಿರ ದಾಟಿದ ಭಕ್ತರು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗಾ ದೇವೀರಮ್ಮ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮಘಟ್ಟದ ತಪ್ಪಲಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಮಳೆಯನ್ನು ಲೆಕ್ಕಿಸದೆ ಆಗಮಿಸಿ, ಬೆಳಗಿನ ಜಾವದ ಚಳಿ ಮತ್ತು ನಡೆಯುವ ದಾರಿಗೆ ಎದುರಾಗಿ ನಿಂತ ಮಂಜಿನ ಮುಸುಕನ್ನು ಸೀಳಿಕೊಂಡು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಭಕ್ತರು ಬೆಟ್ಟ ಏರತೊಡಗಿದರು.
ರಾತ್ರಿ ಇಡೀ ಬಿದ್ದ ಮಳೆ ಹಿನ್ನೆಲೆಯಲ್ಲಿ ಬೆಟ್ಟ ಏರಲು ಭಕ್ತರಿಗೆ ಕಠಿಣ ಸವಾಲು ಎದುರಾಗಿತ್ತು. ಪರಿಸ್ಥಿತಿ ಹೀಗಿದ್ದರೂ ಕೂಡ ಸರದಿ ಸಾಲಿನಲ್ಲಿ ತೆರಳಿದ ಸಾವಿರಾರು ಭಕ್ತರು ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯ ದರ್ಶನ ಪಡೆದು ಪುನೀತರಾದರು.ಭಕ್ತರಿಗೆ ಬೆಟ್ಟ ಏರಲು ಅನುಕೂಲವಾಗುವಂತೆ ಹಲವಡೆ ಹಗ್ಗಗಳನ್ನು ಕಟ್ಟಲಾಗಿತ್ತಲ್ಲದೆ ಅಲ್ಲಲ್ಲಿ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ನಿಂತು, ಪೋಲಿಸರು ಸ್ನೇಹಮಯ ವಾತಾವರಣ ಕಲ್ಪಿಸಿ ಸಹಕರಿಸಿದ್ದು ಗಮನ ಸೆಳೆಯಿತು. ಬೆಟ್ಟವನ್ನು ಮೇಲೆ ಮೇಲೆ ಏರುತ್ತಿದ್ದಂತೆ ಹೊತ್ತು ಸರಿದು ಸೂರ್ಯ ಕಾಣಿಸಿಕೊಂಡು ಸುತ್ತಮುತ್ತಲ ರಮಣೀಯ ದೃಶ್ಯವನ್ನು ತುಸು ಕಾಲ ಸವಿಯಲು ಅನುಕೂಲ ಆಯಿತಾದರೂ ಈ ಸನ್ನಿವೇಶ ಹೆಚ್ಚು ಹೊತ್ತು ಇರದೇ ಇದ್ದದ್ದು ಸಾಹಸಿಗಳಂತೆ ಬೆಟ್ಟವನ್ನು ಏರುತ್ತಿದ್ದ ಭಕ್ತರಿಗೆ ನಿರಾಸೆಯಾಯಿತು. ಆದರೂ, ಮಂಜು ಮುಸುಕಿದ ವಾತಾವರಣ ತಣ್ಣನೆ ಬೀಸುತ್ತಿದ್ದ ಗಾಳಿಯ ಮಧ್ಯೆ, ಇರುವೆಗಳಂತೆ ಮಹಿಳೆಯರು ಪುರುಷರು ಜೊತೆಗೂಡಿ, ಕಡಿದಾದ ಸ್ಥಳಗಳಲ್ಲಿ ಮಹಿಳೆಯರ ಕೈಹಿಡಿದು ಸಾಲು ಸಾಲಾಗಿ ಬೆಟ್ಟ ಹತ್ತಿದರು.
ಈ ಬಾರಿ ಬಿಂಡಿಗಾ ದೇವಿರಮ್ಮ ಬೆಟ್ಟ ಹತ್ತಲು ಎರಡು ದಿನಗಳ ಕಾಲ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನವಾದ ಭಾನುವಾರ ಮಧ್ಯಾಹ್ನದ 12 ಘಂಟೆ ವೇಳೆಗೆ 15,000 ಭಕ್ತರು ಬೆಟ್ಟವನ್ನು ಏರಿರಬಹುದು ಎಂದು ಅಂದಾಜಿಸಲಾಗಿದೆ. ಸಂಜೆ ವೇಳೆಗೆ ಈ ಸಂಖ್ಯೆ 50,000 ದಾಟಿತ್ತು. ಸೋಮವಾರವೂ ಬೆಟ್ಟ ಏರಲು ಅವಕಾಶ ನೀಡಲಾಗಿದೆ. ಮಂಗಳ ವಾರದಂದು ಶ್ರೀ ಫಲಾಹಾರಸ್ವಾಮಿ ಮಠದಿಂದ ಪರಂಪರೆಯಂತೆ ಶ್ರೀ ಮಠಕ್ಕೆ ಸೇರಿದ ಹತ್ತಾರು ಹಳ್ಳಿಯ ಸ್ಥಳೀಯ ಭಕ್ತರು ಒಟ್ಟುಗೂಡಿ ದೇವಿಯ ಬೆಟ್ಟವನ್ನೇರಿ ಹಗಲಿಡಿ ಪೂಜಾ ಕೈಂಕರ್ಯ ನೆರವೇರಿಸಿ ಸಂಜೆ ಮರಿದೀಪ ಹಚ್ಚಿ ಹಿಂದಿರುಗಲಿದ್ದಾರೆ.--- ಬಾಕ್ಸ್ ----ಪಾರ್ಕಿಂಗ್ ವ್ಯವಸ್ಥೆದೀಪಾವಳಿ ಹಬ್ಬದ ಪ್ರಯುಕ್ತ ದೇವಿರಮ್ಮ ಬೆಟ್ಟ ಹತ್ತುವ ಭಕ್ತಾದಿಗಳು ತಮ್ಮ ವಾಹನಗಳನ್ನು ಮಲ್ಲೇನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ವಿಪರೀತ ಮಳೆಯಿಂದಾಗಿ ಪಾರ್ಕಿಂಗ್ ಮಾಡಲು ಕಷ್ಟಸಾಧ್ಯವಾದ ಕಾರಣ ನಗರದ ನಿಗದಿತ ಸ್ಥಳಗಳಲ್ಲಿ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ಮಾಡಲು ಪೊಲೀಸ್ ಇಲಾಖೆ ಮನವಿ ಮಾಡಿದೆ.
ದೇವಿರಮ್ಮ ಬೆಟ್ಟ ಹತ್ತಲು ಜಿಲ್ಲೆಯಿಂದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳು ತಮ್ಮ ಖಾಸಗಿ ವಾಹನ ಗಳನ್ನು ಪಾರ್ಕ್ ಮಾಡುವ ಸಲುವಾಗಿ ಮಲ್ಲೇನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ವಿಪರೀತ ಮಳೆಯಿಂದಾಗಿ ಸದರಿ ಸ್ಥಳದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಕಷ್ಟ ಸಾಧ್ಯವಾಗಿದ್ದು ಆದ್ದರಿಂದ ಚಿಕ್ಕ ಮಗಳೂರು ನಗರದ ಐಜಿ ರಸ್ತೆ ಎಂಜಿ ರಸ್ತೆ, ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ನಗರದ ಇತರೆಡೆ ವೆಹಿಕಲ್ ಜಾಮ್ ಆಗದ ರೀತಿಯಲ್ಲಿ ನಿಗದಿತ ಸ್ಥಳಗಳಲ್ಲಿ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ಮಾಡಬೇಕು.ಕೆಎಸ್ಆರ್ ಟಿಸಿಯಿಂದ ನಗರದ ಬಸ್ ನಿಲ್ದಾಣ ಹಾಗೂ ಟೌನ್ ಕ್ಯಾಂಟೀನ್ ವೃತ್ತಗಳಲ್ಲಿ ಮಲ್ಲೇನಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಸದರಿ ವಾಹನಗಳಲ್ಲಿ ಬಿಂಡಿಗಾ ದೇವೀರಮ್ಮ ದೇವರಸ್ಥಾನಕ್ಕೆ ಭಕ್ತಾದಿಗಳು ತೆರಳುವಂತೆ ಜಿಲ್ಲಾ ಪೊಲೀಸ್ ಕೋರಿದೆ.
19 ಕೆಸಿಕೆಎಂ 3, 4ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಶ್ರೀ ದೇವಿರಮ್ಮ ಬೆಟ್ಟವನ್ನು ಏರಿರುವ ಭಕ್ತ ಸಾಗರ.