ಅಗ್ನಿಶಾಮಕ ಠಾಣೆಯಲ್ಲಿ ವಾಯಿದೆ ಮುಗಿದಿರುವ ಹಳೆಯ ಜಲವಾಹನ..!

| Published : Mar 07 2025, 12:52 AM IST

ಅಗ್ನಿಶಾಮಕ ಠಾಣೆಯಲ್ಲಿ ವಾಯಿದೆ ಮುಗಿದಿರುವ ಹಳೆಯ ಜಲವಾಹನ..!
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಬೇಸಿಗೆ ಆರಂಭವಾಗಿದೆ. ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಪ್ರತಿನಿತ್ಯ ಒಂದಲ್ಲೊಂದು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಾಯಿದೆ ಮುಗಿದಿರುವ ಜಲವಾಹನವನ್ನು ರಸ್ತೆಗಿಳಿಸಲು ಅವಕಾಶವಿಲ್ಲದಿದ್ದರೂ ಕೂಡ ಸ್ವಂತ ಜವಾಬ್ದಾರಿಯಿಂದ ಅಧಿಕಾರಿಗಳು, ಸಿಬ್ಬಂದಿ ಜನರಿಗೆ ತುರ್ತು ಸೇವೆ ನೀಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಅವಧಿ ಮುಗಿದಿರುವ ಹಳೆಯ ಜಲವಾಹನದಲ್ಲಿಯೇ ಅಗ್ನಿ ಅವಘಡ, ಬೆಂಕಿ ನಂದಿಸುವ ಪರಿಸ್ಥಿತಿ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗೆ ಬಂದೊದಗಿದೆ.

ಈಗಾಗಲೇ ಬೇಸಿಗೆ ಆರಂಭವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಪ್ರತಿನಿತ್ಯ ಒಂದಲ್ಲೊಂದು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಾಯಿದೆ ಮುಗಿದಿರುವ ಜಲವಾಹನವನ್ನು ರಸ್ತೆಗಿಳಿಸಲು ಅವಕಾಶವಿಲ್ಲದಿದ್ದರೂ ಕೂಡ ಸ್ವಂತ ಜವಾಬ್ದಾರಿಯಿಂದ ಅಧಿಕಾರಿಗಳು, ಸಿಬ್ಬಂದಿ ಜನರಿಗೆ ತುರ್ತು ಸೇವೆ ನೀಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಸಾರಿಗೆ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ 2007ರಲ್ಲಿ ಪಟ್ಟಣಕ್ಕೆಅಗ್ನಿ ಶಾಮಕ ಠಾಣೆ ಮಂಜೂರು ಮಾಡಿಸಿ 2009ರ ಡಿ.5ರಂದು 75 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ನೂತನ ಅಗ್ನಿ ಶಾಮಕ ಠಾಣೆ ಉದ್ಘಾಟಿಸಿದ್ದರು. ಆಗ ನೀಡಿದ್ದ ಕೆಎ11 ಜಿ310 ಸಂಖ್ಯೆಯ ಜಲವಾಹನಕ್ಕೆ 15 ವರ್ಷವಾಗಿ ವಾಯಿದೆ ಮುಗಿದಿದೆ ಎಂದು ನಾಮಫಲಕ ಹಾಕಿ ಎರಡು ವರ್ಷಗಳಿಂದ ಅಗ್ನಿಶಾಮಕ ಠಾಣೆಯಲ್ಲಿಯೇ ನಿಲ್ಲಿಸಲಾಗಿದೆ.

ನಂತರದಲ್ಲಿ ಮೈಸೂರಿನ ಹೆಬ್ಬಾಳದ ಅಗ್ನಿಶಾಮಕ ಠಾಣೆಯಿಂದ ಹೊರ ಕರ್ತವ್ಯದ ಮೇರೆಗೆ 2008ರ ಮಾದರಿಯ ಕೆಎ 42, ಜಿ 0434 ಸಂಖ್ಯೆಯ ಜಲವಾಹನವನ್ನು ಪಟ್ಟಣದ ಅಗ್ನಿಶಾಮಕ ಠಾಣೆಗೆ ನೀಡಲಾಗಿದೆ. 2010 ಮಾ.3ರ ನೋಂದಣಿಯ ಈ ಜಲವಾಹನದ ವಾಯಿದೆಯು 2025ರ ಮಾ.2ಕ್ಕೆ ಮುಗಿದಿರುವುದರಿಂದಈ ಜಲವಾಹನವನ್ನೂ ಕೂಡ ರಸ್ತೆಗಿಳಿಸುವಂತಿಲ್ಲ. ಆದರೂ ಕೂಡ ಅಗ್ನಿಕರೆ ಮತ್ತು ರಕ್ಷಣಾ ಕರೆಗಳಿಗೆ ಈ ಜಲವಾಹನವನ್ನೇ ಬಳಸಿಕೊಳ್ಳಬೇಕಾಗಿದೆ.

15 ವರ್ಷಗಳ ಹಳೆಯದಾದ ತುರ್ತು ಸೇವೆ ನೀಡುವ ವಾಹನಗಳನ್ನು ತಕ್ಷಣ ಬದಲಿಸಬೇಕಿರುವುದು ಕೇಂದ್ರ ಹಾಗೂ ಸರ್ಕಾರದ ಜವಾಬ್ದಾರಿ. ಆದರೆ, ಪಟ್ಟಣದ ಅಗ್ನಿ ಶಾಮಕ ಠಾಣೆಯಲ್ಲಿ ಎರಡು ಜಲವಾಹನಗಳಿದ್ದರೂ ಕೂಡ ನಿಷ್ಪ್ರಯೋಜಕವಾಗಿವೆ. ತಾಲೂಕಿನಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಆಕಸ್ಮಿಕ ಬೆಂಕಿಯಿಂದ ರಾಗಿ, ಭತ್ತದ ಹುಲ್ಲಿನ ಮೆದೆಗಳು ಸುಟ್ಟು ಭಸ್ಮವಾಗುತ್ತಿವೆ. ಸುಡು ಬಿಸಿಲಿನ ತಾಪಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಂತಹ ಬೆಂಕಿ ಅನಾಹುತಗಳು ಉಂಟಾಗುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ ಜನರು ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡುತ್ತಾರಾದರೂ 15 ವರ್ಷದ ಹಳೆಯ ವಾಹನವನ್ನು ರಸ್ತೆಯಲ್ಲಿ ವೇಗವಾಗಿ ಓಡಿಸಲಾಗದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬರುವಷ್ಟರಲ್ಲಿ ಅಪಾರ ಪ್ರಮಾಣದ ಹಾನಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ವಾಸ್ತವಾಂಶ ಗೊತ್ತಿಲ್ಲದ ಜನರು ಅಗ್ನಿಶಾಮಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಹರಿಹಾಯ್ದು ಹಿಡಿಶಾಪ ಹಾಕುವ ದುಸ್ಥಿತಿ ನಿರ್ಮಾಣವಾಗಿದೆ.

ನಾಗಮಂಗಲ ಅಗ್ನಿ ಶಾಮಕ ಠಾಣೆಯೂ ಸೇರಿದಂತೆ ರಾಜ್ಯದ ಹಲವಾರು ಅಗ್ನಿಶಾಮಕ ಠಾಣೆಗಳಲ್ಲಿರುವ 15 ವರ್ಷಕ್ಕಿಂತ ಹಳೆಯ ಜಲವಾಹನಗಳ ನೋಂದಣಿ ರದ್ದಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಈವರೆಗೂ ಯಾವುದೇ ಹೊಸ ಜಲವಾಹನಗಳನ್ನು ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನಾಗಮಂಗಲದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ವಾಯಿದೆ ಮುಗಿದಿರುವ ಒಂದೇ ಜಲವಾಹನದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ತುರ್ತು ಸೇವೆ ನೀಡುತ್ತಿದ್ದಾರೆ. ಹೊಸ ಜಲವಾಹನವನ್ನು ಕೊಡಿಸಿಕೊಡುವಂತೆ ಇಲ್ಲಿನ ಅಧಿಕಾರಿಗಳು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕಣ್ಮುಚ್ಚಿ ಕುಳಿತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಪಟ್ಟಣದ ಅಗ್ನಿಶಾಮಕಠಾಣೆಗೆ ಹೊಸ ಜಲವಾಹನದ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಜಲವಾಹನವನ್ನು ಕೊಡಿಸಿಕೊಟ್ಟರೆ ಅಗ್ನಿಅವಘಡ ಮತ್ತು ಇನ್ನಿತರೆ ತುರ್ತು ಸಂದರ್ಭದಲ್ಲಿ ಬೆಂಕಿ ಹಾಗೂ ನೀರಿನ ಅನಾಹುತಗಳನ್ನು ತಪ್ಪಿಸಲು ಅನುಕೂಲವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಮ್ಮ ಸ್ವಕ್ಷೇತ್ರದ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸುವರೇ ಎಂದು ಕಾದು ನೋಡಬೇಕಿದೆ.