ಸಂಗಣ್ಣ ಕರಡಿ ಮನವೊಲಿಸಲು ಮುಂದುವರಿದ ಕಸರತ್ತು

| Published : Mar 23 2024, 01:06 AM IST

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಸಂಸದ ಸಂಗಣ್ಣ ಕರಡಿ ಅವರ ನಿವಾಸಕ್ಕೆ ಶುಕ್ರವಾರ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ, ಅವರ ಮನವೊಲಿಸುವ ಪ್ರಯತ್ನ ಮಾಡಿದರು.

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಸಂಸದ ಸಂಗಣ್ಣ ಕರಡಿ ಅವರ ಮನವೊಲಿಸುವ ಕಸರತ್ತು ಮುಂದುವರಿದಿದೆ. ಶಾಸಕ ಅರವಿಂದ ಬೆಲ್ಲದ ಅವರು ಶುಕ್ರವಾರ ಸಂಗಣ್ಣ ಕರಡಿ ಅವರ ನಿವಾಸದಲ್ಲಿ ಗಂಟೆಗಟ್ಟಲೇ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿಯ ನಿಷ್ಠಾವಂತ ನಾಯಕರು, ಪಕ್ಷದ ಬಗ್ಗೆ ಅಪಾರ ಗೌರವ ಇರುವವರು. ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದಾರೆ. ಹೀಗಾಗಿ, ಅವರು ಬಿಜೆಪಿಯನ್ನು ತೊರೆಯುವುದಿಲ್ಲ. ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದರು.

ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಮಾತನಾಡಲು ಬಂದಿದ್ದೇನೆ, ಅವರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಸೂಕ್ತ ಸ್ಥಾನಮಾನ, ಗೌರವ ನೀಡಲಾಗುವುದು ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಪಕ್ಷದ ವರಿಷ್ಠರೊಂದಿಗೆ ಮಾತುಕತೆಯಾದ ಮೇಲೆಯೇ ನಾನು ಸೂಕ್ತ ನಿರ್ಧಾರ ಪ್ರಕಟಿಸುತ್ತೇನೆ. ಚುನಾವಣೆ ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಅವರಿಂದ ಸಿಕ್ಕ ಉತ್ತರ ಆಧಾರದ ಮೇಲೆ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.