ಬೆಳ್ತಂಗಡಿ: ನ್ಯಾಯ ಕೊಡಲು ಮುಕ್ತ ವಾತಾವರಣವಿರಬೇಕು. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ನ್ಯಾಯಾಲಯದ ಕಟ್ಟಡವಾಗಿದೆ. ಕಟ್ಟಡ ಚೆನ್ನಾಗಿದ್ದು, ಅಲ್ಲಿನ ವಾತಾವರಣ ಉತ್ತಮವಾಗಿದ್ದಾಗ ನ್ಯಾಯಾಧೀಶರು, ವಕೀಲರು ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೈಕೋರ್ಟ್‌ನ ನ್ಯಾಯಾಧೀಶ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಚ್.ಟಿ. ನರೇಂದ್ರ ಪ್ರಸಾದ್ ಹೇಳಿದರು.ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ 23 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುವ ನೂತನ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಭಾನುವಾರ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೈಕೋರ್ಟ್ ವತಿಯಿಂದ ಕಳೆದ 10 ವರ್ಷಗಳಿಂದ ಮೂಲಭೂತ ಸೌಕರ್ಯವಿರುವ ನ್ಯಾಯಾಲಯ ಸಂಕೀರ್ಣ ಮತ್ತು ನ್ಯಾಯಾಧೀಶರಿಗೆ ವಸತಿ ಗೃಹಕ್ಕೆ ಆದ್ಯತೆ ನೀಡುತ್ತಾ ಬಂದಿದ್ದೇವೆ. ಈ ಕಟ್ಟಡದ ಕೆಲಸ ಕಾರ್ಯಗಳು ಸರಿಯಾಗಿ ನಡೆಯದೆ ಹೋದರೆ ಪ್ರಿನ್ಸಿಪಲ್ ಜಡ್ಜ್ ಗಮನಕ್ಕೆ ತರಬಹುದು. ಅವರು ನಮ್ಮ ಗಮನಕ್ಕೆ ತಂದಾಗ ನಾವು ಸರಿಯಾದ ಕ್ರಮ ಕೈಗೊಳ್ಳುತೇವೆ ಎಂದರು.ವಕೀಲ ವೃತ್ತಿಗೆ ವಿಶೇಷ ಗೌರವ: ಸಚಿವ ಖಾದರ್: ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ಫರೀದ್ ಮಾತನಾಡಿ, ಶಿಕ್ಷಣ, ಆರೋಗ್ಯ, ಕಾನೂನು ಕ್ಷೇತ್ರ ಎಲ್ಲದಕ್ಕೂ ಸುಸಜ್ಜಿತ ಸವಲತ್ತು ಕೊಡಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಸರ್ಕಾರ 9 ಕೋಟಿ ರು. ಬಿಡುಗಡೆ ಮಾಡಿದ್ದು, ಬಾಕಿ ಉಳಿದ ಮೊತ್ತವನ್ನು ಕೆಲಸ ಪೂರ್ತಿಯಾಗುವ ಮುಂಚಿತವಾಗಿಯೇ ಬಿಡುಗಡೆ ಮಾಡುತ್ತೇವೆ ಎಂದರು.
ಹೈಕೋರ್ಟ್ ನ್ಯಾಯಾಧೀಶ ಮಹಮ್ಮದ್ ನವಾಜ್ ಮಾತನಾಡಿ, ನ್ಯಾಯಾಲಯ ನ್ಯಾಯ ನೀಡುವ ದೇಗುಲ. ಉತ್ತಮ ನ್ಯಾಯಾಧೀಶರಿಗೆ ಕೊರತೆಯಿಲ್ಲ. ಆದರೆ ಅವರಿಗೆ ಉತ್ತಮ ಸೌಕರ್ಯ ನೀಡುವಲ್ಲಿ ವ್ಯವಸ್ಥೆ ವಿಫಲವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೆಲವೊಮ್ಮೆ ನ್ಯಾಯ ವಿಳಂಬವಾಗುತ್ತಿದೆ ಎಂದರು. ಹೈಕೋರ್ಟ್ ನ್ಯಾಯಾಧೀಶರಾದ ವಿಶ್ವಜಿತ್ ಶೆಟ್ಟಿ, ರಾಜೇಶ್ ರೈ ಕೆ., ತ್ಯಾಗರಾಜ ಎನ್. ಇನವಳ್ಳಿ, ಮುರಳೀಧರ ಪೈ, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಪ್ರತಾಪಸಿಂಹ ನಾಯಕ್, ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ ಪಿ.ಪಿ. ಹೆಗ್ಡೆ ಇದ್ದರು.ವಕೀಲ ಉಷಾ ಎನ್.ಜಿ., ಅಕ್ಷಯ್ ಡಿ. ರಾವ್, ಮುಮ್ತಾಜ್ ಬೇಗಂ, ಪ್ರವೀಣ್ ಕುಮಾರ್ ವಂದೇ ಮಾತರಂ ಹಾಗೂ ನಾಡಗೀತೆ ಹಾಡಿದರು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಲೋಬೋ ಸ್ವಾಗತಿಸಿದರು. ಹಿರಿಯ ವಕೀಲ ಧನಂಜಯ ರಾವ್ ಹಾಗೂ ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ವಂದಿಸಿದರು.