ತುಂಬಿ ಹರಿಯುತ್ತಿರುವ ತುಂಗೆ; ಎಲ್ಲೆಲ್ಲೂ ಗಂಗೆ

| Published : Jul 05 2024, 12:50 AM IST

ಸಾರಾಂಶ

ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಮಲೆನಾಡು ಸೇರಿದಂತೆ ಜಿಲ್ಲೆಯ ಹಲವು ಕಡೆ ಧಾರಾಕಾರ ಮಳೆಯಾಗಿದೆ. ಕೆರೆ, ಕಟ್ಟೆ, ಹಳ್ಳಕೊಳ್ಳ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರಿ ಹರಿದು ಬರುತ್ತಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಮಲೆನಾಡು ಸೇರಿದಂತೆ ಜಿಲ್ಲೆಯ ಹಲವು ಕಡೆ ಧಾರಾಕಾರ ಮಳೆಯಾಗಿದೆ. ಕೆರೆ, ಕಟ್ಟೆ, ಹಳ್ಳಕೊಳ್ಳ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರಿ ಹರಿದು ಬರುತ್ತಿದೆ.

ಆರಿದ್ರ ಮಳೆಯ ಆರ್ಭಟದಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ‌ ಹೆಚ್ಚಾಗಿದೆ. ಅದರಂತೆ ನಗರದ ಕೋರ್ಪಳಯ್ಯ ಛತ್ರ ಹಿಂಭಾಗದಲ್ಲಿರುವ ನದಿಯ ಮಂಟಪ ಬಹುತೇಕ ಮುಳುಗಿದೆ. ಬುಧವಾರ ತುಂಗಾ ಜಲಾಶಯಕ್ಕೆ12 ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ಗುರುವಾರ ರಾತ್ರಿಯ ಹೊತ್ತಿಗೆ 18,412 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರಿಂದ ತುಂಗೆ ಮೈದುಂಬಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ಮತ್ತಷ್ಟು ಬಿರುಸುಗೊಂಡಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ.

ಸಾಗರದಲ್ಲಿ 111 ಮಿ.ಮೀ ಮಳೆ ದಾಖಲು:

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 116.37 ಮಿ.ಮೀ ಮಳೆ ದಾಖಲಾಗಿದೆ. ಸಾಗರದಲ್ಲಿ 111 ಮಿ.ಮೀ, ಹೊಸನಗರ ತಾಲೂಕಿನಲ್ಲಿ 100 ಮಿ.ಮೀ, ತೀರ್ಥಹಳ್ಳಿ 100, ಸೊರಬ 34, ಶಿಕಾರಿಪುರದಲ್ಲಿ 18, ಶಿವಮೊಗ್ಗದಲ್ಲಿ 19, ಭದ್ರಾವತಿಯಲ್ಲಿ 9 ಮಿ.ಮೀ ಮಳೆಯಾಗಿದೆ.

ಭದ್ರಾ ಜಲಾಶಯ ಮಟ್ಟಕ್ಕೆ 3 ದಿನದಲ್ಲಿ 2 ಅಡಿ ಹೆಚ್ಚಳ

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ನದಿ ಪಾತ್ರದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ಜುಲೈ ತಿಂಗಳ ಮೊದಲ ನಾಲ್ಕು ದಿನಗಳಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ಮೂರು ಅಡಿಯಷ್ಟು ಹೆಚ್ಚಳಗೊಂಡಿದೆ.

ಆರಿದ್ರೆಯ ಆರ್ಭಟದ ಫಲವಾಗಿ ಜುಲೈ 1ರಿಂದ 4ರವರೆಗೆ ಭದ್ರಾ ಜಲಾಶಯಕ್ಕೆ 20 ಸಾವಿರ ಕ್ಯುಸೆಕ್ ನೀರು ಹರಿದುಬಂದಿದೆ. ಜುಲೈ 1ರಂದು 4665 ಕ್ಯುಸೆಕ್ ಇದ್ದ ಒಳಹರಿವಿನ ಪ್ರಮಾಣ, ಜು.2ರಂದು 5243 ಕ್ಯುಸೆಕ್‌ಗೆ ಹೆಚ್ಚಳಗೊಂಡಿತ್ತು. ಜು.3ರಂದು 5324 ಕ್ಯುಸೆಕ್‌, ಜು.4ರಂದು 4908 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ.

ಭದ್ರ ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಇದ್ದು, ಇನ್ನೂ ಜು.1ರಂದು 124.7 ಅಡಿಗೆ ಇದ್ದ ನೀರಿನ ಪ್ರಮಾಣ ಜು.4ಕ್ಕೆ 127 ಅಡಿಗೆ ಏರಿಕೆಯಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗಾಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ನೀರಿನ ಮಟ್ಟ 165 ಅಡಿಗೆ ಹೆಚ್ಚಳವಾಗಬೇಕಿದೆ. ಮಳೆ ಇದೇ ರೀತಿ ಮುಂದುವರೆದರೆ ಜಲಾಶಯ ಮಟ್ಟ ಇನ್ನಷ್ಟು ಏರಿಕೆಯಾಗಲಿದೆ.

ಲಿಂಗನಮಕ್ಕಿಗೆ ಒಂದೇ ದಿನ 5 ಅಡಿ ನೀರು:

ಲಿಂಗನಮಕ್ಕಿ ಹಿನ್ನೀರು ಪ್ರದೇಶದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ಒಂದೇ ದಿನ ಲಿಂಗನಮಕ್ಕಿ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯಕ್ಕೆ ಜು.3ರಂದು 19,950 ಕ್ಯುಸೆಕ್‌ ನೀರು ಬಂದಿದ್ದು, ಜಲಾಶಯ ಮಟ್ಟ 1754.95 ಅಡಿಗೆ ತಲುಪಿತ್ತು. ಗುರುವಾರ 60,238 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಜಲಾಶಯ ಮಟ್ಟ 1760.10 ಅಡಿಗೆ ತಲುಪಿದೆ.ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್‌ ಕಂಬ

ಸಾಗರ ಭಾಗದಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆ- ಗಾಳಿಯಿಂದ ಸಿಗಂದೂರು ಹೊಳೆಬಾಗಿಲು ರಸ್ತೆಗೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಸಾಗರ ತಾಲೂಕು ಬಾನುಕುಳಿ ಗ್ರಾಪಂ ವ್ಯಾಪ್ತಿಯ ಕಣಪಗಾರು ಗ್ರಾಮದಲ್ಲಿ ವಿಜಯಕುಮಾರ್, ನೀಲ್ ಕುಮಾರ್ ಮತ್ತಿತರರ ಜಮೀನುಗಳಿಗೆ ಭಾರಿ ಪ್ರಮಾಣದ ಮಳೆಯಿಂದ ನೀರು ನುಗ್ಗಿದೆ. ಸುಮಾರು ನಾಲ್ಕು ದಶಕದ ಈಚೆಗೆ ಈ ರೀತಿ ಘಟನೆ ನಡೆದಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.