ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರನ್ನು ನೇಮಕ ಮಾಡದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಸೃಷ್ಟಿಯಾಗಿರುವ ಎರಡು ಬಣಗಳ ನಡುವಿನ ಶೀತಲ ಸಮರ ಮತ್ತೆ ಮುಂದುವರೆದಿದೆ.ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿ ಎಂದು ಸ್ವಯಂ ಘೋಷಿಸಿಕೊಂಡಿರುವ ಗಾಮನಹಳ್ಳಿ ಮಹದೇವಸ್ವಾಮಿ ಅವರು ಜಿಲ್ಲಾ ಹಾಗೂ ಎಲ್ಲಾ ತಾಲೂಕು, ಹೋಬಳಿ ಘಟಕಗಳ ಕಸಾಪ ಪದಾಧಿಕಾರಿಗಳ ಸಭೆಯನ್ನು ಜಿಲ್ಲಾ ಕಸಾಪ ವಿ.ಹರ್ಷ ಅವರ ಅಧ್ಯಕ್ಷತೆಯಲ್ಲಿ ಫೆ.೨೨ರಂದು ಸಂಜೆ ೪.೩೦ಕ್ಕೆ ಕರೆದಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರವಾಗಿರುವುದು ಕೇಂದ್ರ ಪರಿಷತ್ತಿನ ಗಮನಕ್ಕೆ ಬಂದಿದ್ದು, ಸಭೆ ಕರೆದಿರುವವರು ಮತ್ತು ಭಾಗವಹಿಸುವವರು ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗುತ್ತಾರೆ ಎಂದು ಎಚ್ಚರಿಕೆ ನೀಡಿದೆ.
ವಿ.ಹರ್ಷ ಜಿಲ್ಲಾ ಕಸಾಪ ಅಧ್ಯಕ್ಷರೂ ಅಲ್ಲ, ಮಹದೇವಸ್ವಾಮಿ ಗೌರವ ಕಾರ್ಯದರ್ಶಿಗಳೂ ಅಲ್ಲ. ಇದು ಅವರೇ ಸ್ವಯಂ ಘೋಷಿಸಿಕೊಂಡಿರುವ ಹುದ್ದೆಗಳಾಗಿವೆ. ಈ ಸಭೆ ಕರೆಯಲು ಬಳಸಿರುವ ಲೆಟರ್‌ಹೆಡ್‌ನಲ್ಲಿರುವ ಕಸಾಪ ಲೋಗೋ ಸೇರಿದಂತೆ ಇಡೀ ಪತ್ರ ಕೃತಕವಾಗಿ ರೂಪುಗೊಂಡಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅನುಮತಿ ಇಲ್ಲದೆ ಇಂತಹ ಪತ್ರವನ್ನು ರೂಪಿಸಿರುವುದೇ ಅಪರಾಧವಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರು ಸ್ಪಷ್ಟಪಡಿಸಿದ್ದಾರೆ.ಇದೊಂದು ಕಾನೂನುಬಾಹಿರ ಮತ್ತು ಅನಧಿಕೃತ ಸಭೆಯಾಗಿದ್ದು, ಈ ಅನಧಿಕೃತ ಸಭೆಯಲ್ಲಿ ಭಾಗವಹಿಸುವವರು ಕಾನೂನಿನ ದೃಷ್ಟಿಯಿಂದ ತಪ್ಪಿತಸ್ಥರಾಗಿರುತ್ತಾರೆ ಎಂದು ಹೇಳಿದೆ.
ಸಭೆ ಕರೆದಿರುವ ಮಹದೇವಸ್ವಾಮಿ ಗಾಮನಹಳ್ಳಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಮತ್ತು ವಿ.ಹರ್ಷ ಅವರನ್ನು ಜಿಲ್ಲಾ ಕಸಾಪ ಅಧ್ಯಕ್ಷರನ್ನಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಾಮನಿರ್ದೇಶನ ಮಾಡಿರುವುದಿಲ್ಲ. ಅಂತಹ ಪ್ರಸ್ತಾವನೆ ಕೂಡ ಬಂದಿರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ೩೨(೩) (ಇ) ಪ್ರಕಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅನುಮತಿ ತಲುಪಿದ ನಂತರ ಆಯಾ ಘಟಕದ ಅಧ್ಯಕ್ಷರು ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಪ್ರಕಟಗೊಳಿಸತಕ್ಕದ್ದು ಎಂದು ಸ್ಪಷ್ಟವಾಗಿ ತಿಳಿಸಿದೆ.ಇಂತಹ ಅಧಿಕಾರವಿರುವುದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಮಾತ್ರವಿದ್ದು, ಜಿಲ್ಲಾ ಘಟಕಗಳು ಲಿಖಿತ ರೂಪದಲ್ಲಿ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಸ್ವಯಂ ಘೋಷಿಸಿಕೊಂಡಿರುವ ಈ ಎರಡೂ ಹುದ್ದೆಗಳು ಅನಧಿಕೃತ ಎಂದು ಸ್ಪಷ್ಟಪಡಿಸಿದೆ.
ನಾಮ ನಿರ್ದೇಶನಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಮಯದಲ್ಲಿ ಅನಧಿಕೃತ ಹುದ್ದೆಗಳನ್ನು ಸೃಷ್ಟಿಸಿಕೊಂಡು ತಾವೇ ಆ ಹುದ್ದೆಗಳ ಫಲಾನುಭವಿಗಳಾಗುವುದು, ಅನಧಿಕೃತ ಸಭೆಗಳನ್ನು ಕರೆಯುವುದು ನ್ಯಾಯಾಂಗಕ್ಕೆ ಉದ್ದೇಶಪೂರ್ವಕವಾಗಿ ತೋರುವ ಅಗೌರವವಾಗುತ್ತದೆ. ನ್ಯಾಯಾಲಯದ ಘನತೆಗೆ ಕುಂದು ತರುವ ನ್ಯಾಯಾಂಗ ನಿಂದನೆ ಕೂಡ ಆಗಿರುತ್ತದೆ ಎಂದು ಹೇಳಿದೆ.ಈ ಸಭೆಯನ್ನು ಕರೆದಿರುವವರು ಮತ್ತು ಭಾಗವಹಿಸುವವರು ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಮ್ಮೆ ಎಚ್ಚರಿಸಿದೆ.ಹುದ್ದೆಗಾಗಿ ನಿಲ್ಲದ ಬಣ ಜಗಳ: ಪರಿಷತ್ತು ಅತಂತ್ರ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಳಗೆ ಅಧಿಕಾರಕ್ಕಾಗಿ ಬಣ ಜಗಳ ಮುಂದುವರೆದಿರುವುದರಿಂದ ಸಾಹಿತ್ಯ ಪರಿಷತ್ತು ಯಾವುದೇ ಚಟುವಟಿಕೆಗಳಿಲ್ಲದೆ ಅತಂತ್ರವಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ಎರಡೇ ದಿನಕ್ಕೆ ಮೀರಾ ಶಿವಲಿಂಗಯ್ಯ ಅವರನ್ನು ಸಮ್ಮೇಳನದ ಸಂಚಾಲಕಿ ಹುದ್ದೆಯನ್ನು ರದ್ದುಗೊಳಿಸಿ, ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಪ್ರೊ.ಎಚ್.ಎಸ್.ಮುದ್ದೇಗೌಡ ಅವರನ್ನು ನಾಮನಿರ್ದೇಶಿತ ಅಧ್ಯಕ್ಷರನ್ನಾಗಿ ನೇಮಿಸಿ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಆದೇಶ ಹೊರಡಿಸಿದರು. ಈ ಆದೇಶವನ್ನು ಪ್ರಶ್ನಿಸಿ ಕಸಾಪ ಪದಾಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್‌ನಲ್ಲಿ ಅರ್ಜಿ ಹಾಕಿದವರೇ ಈಗ ಸಭೆ ಕರೆದಿರುವುದಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬ್ರೇಕ್ ಹಾಕಿದೆ.ಜೋಶಿ ಏಕಪಕ್ಷೀಯ ನಡೆ ಗೊಂದಲಗಳಿಗೆ ಕಾರಣಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿ.ರವಿಕುಮಾರ ಮರಣಹೊಂದಿದ ಬಳಿಕ ಕಾನೂನಾತ್ಮಕವಾಗಿ ಹೊಸ ಅಧ್ಯಕ್ಷರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೇಮಕ ಮಾಡಿದ್ದರೆ ಗೊಂದಲಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಅಧ್ಯಕ್ಷರನ್ನು ನೇಮಿಸಿದೆ ಅಧಿಕಾರವೆಲ್ಲವನ್ನೂ ತಮ್ಮಲ್ಲೇ ಇಟ್ಟುಕೊಂಡು ಸ್ವಪ್ರತಿಷ್ಠೆ, ಏಕಪಕ್ಷೀಯ ನಡೆ ಅನುಸರಿಸಿದ್ದರಿಂದ ಸಾಹಿತ್ಯ ಪರಿಷತ್ತು ಒಡೆದ ಮನೆಯಾಗುವುದಕ್ಕೆ ಮುಖ್ಯ ಕಾರಣರಾದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ನಂತರವೂ ಜನರಿಗೆ ಕೃತಜ್ಞತೆ ಹೇಳಿ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಅಧ್ಯಕ್ಷರ ನೇಮಕಕ್ಕೆ ಮುಂದಾಗದೆ ಜಿಲ್ಲಾ ಕಸಾಪ ಪದಾಧಿಕಾರಿಗಳೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ.