ಉಡುಪಿ: ಮಧ್ವಾಚಾರ್ಯರಿಗೆ ಶ್ರೀಕೃಷ್ಣ ದೊರೆತ ಪರಮ ಪವಿತ್ರ ಸ್ಥಳ ಮಲ್ಪೆ ಕಡಲ ತೀರವನ್ನು ಆಧ್ಯಾತ್ಮಿಕ ಕೇಂದ್ರವನ್ನಾಗಿ ರೂಪಿಸಬೇಕು. ಆ ಮೂಲಕ ಈ ಆನಂದ ಶರದಿ ಪ್ರದೇಶವು ಪಾರಮಾರ್ಥಿಕ ಆನಂದ ಸಾಧನೆಗೆ ಪ್ರೇರಣೆಯಾಗಬೇಕು ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.
ಅವರು ಮಲ್ಪೆ ಕಡಲ ತೀರದ ಆನಂದಶರಧಿಯಲ್ಲಿ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ಮಾತೃ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು. ಪ್ರತಿಯೊಬ್ಬರು ನಾವು ಶಾಶ್ವತ ಎಂಬ ಭ್ರಮೆಯಲ್ಲಿ ಜೀವಿಸುತ್ತಿದ್ದೇವೆ. ಆದರೆ ನಾವು ಇಲ್ಲಿರುವುದು ಕೆಲವೇ ದಿನ ಮಾತ್ರ ಎಂಬುವುದು ವಾಸ್ತವ. ಮನುಷ್ಯರ ನಡುವಿನ ಸಂಬಂಧಗಳೂ ಶಾಶ್ವತವಲ್ಲ. ದೇವರ ಜೊತೆಗೆ ನಮಗಿರುವ ಸಂಬಂಧ ಮಾತ್ರ ಶಾಶ್ವತವಾದುದು. ದೇವರು ಮತ್ತು ನಮ್ಮ ಸಂಬಂಧ ಉಳಿಯಬೇಕಾದರೆ ಸತ್ಕಾರ್ಯದಲ್ಲಿ ತೊಡಗಬೇಕು, ಜಡ ಬದುಕು ಬಾಳದೆ ಸತ್ಸಂಗಗಳನ್ನು ಮಾಡಬೇಕು ಎಂದು ಅವರು ಹೇಳಿದರು.ಖ್ಯಾತ ವಾಗ್ಮಿ, ಆಧ್ಯಾತ್ಮಿಕ ಚಿಂತಕಿ ಡಾ. ಆರತಿ ವಿ.ಬಿ. ದಿಕ್ಕೂಚಿ ಭಾಷಣ ಮಾಡಿ, ಮಹಿಳೆ ಮನೆವಾರ್ತೆ ನೋಡಿಕೊಳ್ಳುವುದು ಶಿಕ್ಷೆಯಲ್ಲ. ಅದು ಬಹು ದೊಡ್ಡ ಜವಾಬ್ದಾರಿ. ವಾತ್ಸಲ್ಯಮಯಿ ಗೃಹಣಿ ಇರುವ ಮನೆಯಲ್ಲಿ ವೀರೋದ್ಧಾತ ಚರಿತ್ರವಂತರು ಜನ್ಮ ತಳೆದಿದ್ದಾರೆ. ಇದು ಮಹಿಳೆಯರ ಹೆಗ್ಗಳಿಕೆ ಎಂದರು.
ಕರ್ಣಾಟಕ ಬ್ಯಾಂಕ್‌ನ ಉಪ ಮಹಾಪ್ರಬಂಧಕ ವಾದಿರಾಜ್, ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಹಿರಿಯ ಸಂಘಟಕಿ ಉಷಾ ಎ. ಸುವರ್ಣ, ಜಿಲ್ಲಾ ಶಬರಿಮಲೆ ಸೇವಾ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ, ಸಂಗೀತ ವಿದುಷಿ ಉಷಾ ಹೆಬ್ಬಾರ್, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ವೈಜಯಂತಿ ಕಾಮತ್, ಪ್ರಮುಖರಾದ ಸಂಧ್ಯಾ ರಮೇಶ್, ರಶ್ಮಿ ಭಟ್, ಲಕ್ಷ್ಮಿ ಮಂಜುನಾಥ್, ಜ್ಯೋತಿ ಹೆಬ್ಬಾರ್, ಶೋಭಾ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಮೊದಲು ಗೋಪೂಜೆ, ಮಹಿಳೆಯರಿಗೆ ಸ್ಥಳದಲ್ಲೇ ಬಳೆ ಇಡುವುದು, ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಮಹಿಳೆಯರಿಗೆ ಅಂದೂ ಶಿಕ್ಷಣವಿತ್ತು: ಭಾರತದ ಪ್ರಾಚೀನ ಕಾಲದಲ್ಲಿ ಮಹಿಳೆಯರನ್ನು ಶಿಕ್ಷಣವಂಚಿತರನ್ನಾಗಿಸಲಾಗಿತ್ತು, ಬ್ರಿಟಿಷರು ಬಂದ ಮೇಲೆ ಮಹಿಳೆಯರಿಗೆ ಶಿಕ್ಷಣದ ಅವಕಾಶ ಸಿಕ್ಕಿತು ಎನ್ನುವುದು ಎಡಪಂಥಿಯರು ಹರಡಿದ ಸುಳ್ಳು, ಹಿಂದೆ ವೇದಾಧ್ಯಯನವನ್ನು ಬಿಟ್ಟು ಬೇರೆಲ್ಲ ಶಿಕ್ಷಣವನ್ನು ನೀಡಲಾಗುತ್ತಿತ್ತು. ಅತ್ಯಂತ ಸಾಕ್ಷರರಾದ ಮಹಿಳೆಯರು ನಮ್ಮಲ್ಲಿದ್ದರು. ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ದುರ್ಗಾವತಿ, ರಾಣಿ ಅಬ್ಬಕ್ಕ ಮುಂತಾದವರು ಉದಾಹರಣೆಯಾಗಿದ್ದಾರೆ ಎಂದು ಡಾ. ಆರತಿ ಹೇಳಿದರು.