ಆನಂದ ಸಿಂಗ್‌ ಖೆಡ್ಡಾಕ್ಕೆ ಕೆಡವಲು ಹೋದ ಕಾಂಗ್ರೆಸ್‌ನ ಭಿನ್ನಮತ ಬಹಿರಂಗ

| Published : Sep 14 2024, 01:48 AM IST

ಆನಂದ ಸಿಂಗ್‌ ಖೆಡ್ಡಾಕ್ಕೆ ಕೆಡವಲು ಹೋದ ಕಾಂಗ್ರೆಸ್‌ನ ಭಿನ್ನಮತ ಬಹಿರಂಗ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಜಿಲ್ಲಾ ಕಾಂಗ್ರೆಸ್‌ಗೆ ಸಹಕಾರ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ನಗರಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಆನಂದ ಸಿಂಗ್‌ ಅವರನ್ನು ಖೆಡ್ಡಾಕ್ಕೆ ಕೆಡವಲು ಹೋಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಈಗ ಕೆಪಿಸಿಸಿಗೆ ಪತ್ರ ಬರೆಯಲು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ಸಜ್ಜಾಗಿದ್ದಾರೆ.

ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಜಿಲ್ಲಾ ಕಾಂಗ್ರೆಸ್‌ಗೆ ಸಹಕಾರ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಶಾಸಕರ ಆಪ್ತ ವಲಯದವರು ಮಾತ್ರ ನಗರಸಭೆ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದ ಸದಸ್ಯ ಅಸ್ಲಂ ಮಾಳಗಿ ಒಮ್ಮೆಯೂ ಶಾಸಕರನ್ನು ಸೌಜನ್ಯದ ಭೇಟಿ ಮಾಡಿಲ್ಲ. ಆದರೂ ಶಾಸಕರು ಪಕ್ಷದ ಗೌರವದ ಮೇಲೆ ನಗರಸಭೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಕೆಪಿಸಿಸಿ ಅಂಗಳಕ್ಕೆ ದೂರು ಕೊಂಡೊಯ್ಯಲು ಪಕ್ಷದ ಜಿಲ್ಲಾಧ್ಯಕ್ಷ ಮುಂದಾಗಿದ್ದಾರೆ. ಹಾಗಾಗಿ, ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮತ್ತೊಂದು ಕದನಕ್ಕೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ರಹದಾರಿಯಾಗಿ ಮಾರ್ಪಟ್ಟಿದೆ.

ಆನಂದ ಸಿಂಗ್‌ ಪ್ರತಿತಂತ್ರ:

ಹೊಸಪೇಟೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮಾಜಿ ಸಚಿವ ಆನಂದ ಸಿಂಗ್‌ ಅವರನ್ನು ಮಣಿಸಿ, ರಾಜಕೀಯ ಮೇಲುಗೈ ಸಾಧಿಸಲು ಕಾಂಗ್ರೆಸ್‌ ಎಣಿಸಿತ್ತು. ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಆನಂದ ಸಿಂಗ್‌ ಬಹಿರಂಗವಾಗಿ ಸಭೆ ಮಾಡದೇ ಗೌಪ್ಯವಾಗಿಯೇ ದಾಳ ಉರುಳಿಸಿ ಕಾಂಗ್ರೆಸ್‌ಗೆ ಭಾರೀ ಪೆಟ್ಟು ನೀಡಿದ್ದಾರೆ. ಈ ಮೂಲಕ ವಿಜಯನಗರದಲ್ಲಿ ಆನಂದ ಸಿಂಗ್‌ ಪಾರುಪತ್ಯ ಇನ್ನು ಮುಗಿದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಪಕ್ಷೇತರರ ಮೇಲೆ ಕಣ್ಣಿಟ್ಟಿದ್ದ ಆನಂದ ಸಿಂಗ್‌:

ನಗರಸಭೆಯ 35 ಸದಸ್ಯರಲ್ಲಿ ಕಾಂಗ್ರೆಸ್‌ 12, ಬಿಜೆಪಿ 10, ಆಪ್‌ ಒಂದು ಸ್ಥಾನ ಮತ್ತು ಪಕ್ಷೇತರರು 12 ಮಂದಿ ಇದ್ದಾರೆ. ಈ ಪೈಕಿ ಪಕ್ಷೇತರರಲ್ಲಿ 9 ಸದಸ್ಯರು ಈಗಾಗಲೇ ಆನಂದ ಸಿಂಗ್‌ ಅವರ ಜೊತೆಗೆ ಗುರುತಿಸಿಕೊಂಡಿದ್ದರು. ಆಪ್‌ ಸದಸ್ಯ ಕೂಡ ಆನಂದ ಸಿಂಗ್‌ ಜತೆ ಗುರುತಿಸಿಕೊಂಡಿದ್ದರು. ಕಳೆದ ಬಾರಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲೂ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಪಕ್ಷೇತರರ ನಡೆಯ ಮೇಲೆ ಮಾಜಿ ಸಚಿವ ಆನಂದ ಸಿಂಗ್‌ ಕಣ್ಣಿಟ್ಟಿದ್ದರು. ಕೊನೆಗೂ ಯಶಸ್ಸು ಕಂಡರು.ಕಾಂಗ್ರೆಸ್‌ನ ಒಡಕು ಬಹಿರಂಗ:

ಈ ಬಾರಿ ಶತಾಯ ಗತಾಯ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿತ್ತು. ಆದರೆ ಕಾಂಗ್ರೆಸ್‌ ಸದಸ್ಯ ಕೆ.ಮಹೇಶಕುಮಾರ ಗೈರಾಗಿದ್ದರು. ಕಾಂಗ್ರೆಸ್‌ಗೆ 17 ಮತ ಬಂದರೆ ಬಿಜೆಪಿ 19 ಮತ ಪಡೆದಿದ್ದರಿಂದ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಈಗ ಕಾಂಗ್ರೆಸ್‌ ಸದಸ್ಯ ಮಹೇಶಕುಮಾರ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಚರ್ಚೆ ನಡೆದಿದೆ. ಇನ್ನು ಸದಸ್ಯತ್ವ ಅನರ್ಹಗೊಳಿಸಲು ಜಿಲ್ಲಾಧಿಕಾರಿ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಎಚ್.ಆರ್‌. ಗವಿಯಪ್ಪ ಗೌರವ ಕೊಡುತ್ತಿಲ್ಲ. ನಗರಸಭೆ ಚುನಾವಣೆಯಲ್ಲಿ ಅವರಿಂದ ಎಳ್ಳಷ್ಟೂ ಸಹಕಾರ ಸಿಕ್ಕಿಲ್ಲ. ನಗರಸಭೆ ಚುನಾವಣೆ ಬೆಳವಣಿಗೆ ಕುರಿತು ಕೆಪಿಸಿಸಿಗೆ ದೂರು ಸಲ್ಲಿಸುವೆ ಎನ್ನುತ್ತಾರೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌.