ಅನಂತ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ಬಿಜೆಪಿ ಆಂತರಿಕ ನಿರ್ಧಾರ: ಐವನ್‌

| Published : Mar 13 2024, 02:02 AM IST

ಅನಂತ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ಬಿಜೆಪಿ ಆಂತರಿಕ ನಿರ್ಧಾರ: ಐವನ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಜನರು ಸಂವಿಧಾನವನ್ನು ಒಪ್ಪಿ ಮತ ಹಾಕಿ ಅವರನ್ನು ಆಯ್ಕೆ ಮಾಡಿದ್ದಾರೆ. ಹೇಳಿಕೆ ವೈಯಕ್ತಿಕವೇ ಆಗಿದ್ದರೂ ಸಂವಿಧಾನದ ವಿರುದ್ಧ ಮಾತನಾಡುವುದು ಅಪರಾಧ. ಅವರನ್ನು ತಕ್ಷಣದಿಂದ ಪಕ್ಷದಿಂದ ವಜಾ ಮಾಡಬೇಕು ಹಾಗೂ ಉತ್ತಮ ಚಿಕಿತ್ಸೆ ಒದಗಿಸಬೇಕು ಎಂದು ಐವನ್‌ ಡಿಸೋಜ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ಸಂಸದ ಅನಂತ ಕುಮಾರ್‌ ಹೆಗಡೆ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಅಲ್ಲ. ಬದಲಾಗಿ ಆರೆಸ್ಸೆಸ್‌ ನಿರ್ದೇಶನದ ಮೇರೆಗೆ ಬಿಜೆಪಿಯ ಆಂತರಿಕ ನಿರ್ಧಾರ ಅದು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತ ಹೆಗಡೆ ಹೇಳಿಕೆ ಅವರ ವೈಯಕ್ತಿಕ ಎಂದು ಬಿಜೆಪಿ ಮುಖಂಡರು ಹೇಗೆ ಹೇಳುತ್ತಾರೆ? ಅನಂತ ಹೆಗಡೆ ಸಂಸದರು, ಸಚಿವರಾಗಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದವರು. ದೇಶದ ಜನರು ಸಂವಿಧಾನವನ್ನು ಒಪ್ಪಿ ಮತ ಹಾಕಿ ಅವರನ್ನು ಆಯ್ಕೆ ಮಾಡಿದ್ದಾರೆ. ಹೇಳಿಕೆ ವೈಯಕ್ತಿಕವೇ ಆಗಿದ್ದರೂ ಸಂವಿಧಾನದ ವಿರುದ್ಧ ಮಾತನಾಡುವುದು ಅಪರಾಧ. ಅವರನ್ನು ತಕ್ಷಣದಿಂದ ಪಕ್ಷದಿಂದ ವಜಾ ಮಾಡಬೇಕು ಹಾಗೂ ಉತ್ತಮ ಚಿಕಿತ್ಸೆ ಒದಗಿಸಬೇಕು ಎಂದು ಐವನ್‌ ಡಿಸೋಜ ಆಗ್ರಹಿಸಿದರು.

ಬಿಜೆಪಿಯವರ ಸಂವಿಧಾನ ತಿದ್ದುಪಡಿ ಅಜೆಂಡಾ ಹೊಸತಲ್ಲ. ಸ್ವಾತಂತ್ರ್ಯದ 75ನೇ ವರ್ಷಾಚರಣೆ ವೇಳೆ ಪಾರ್ಲಿಮೆಂಟ್‌ನಲ್ಲಿ ನೀಡಿದ ಕೈಪಿಡಿಯಲ್ಲಿ ಜಾತ್ಯತೀತ ಪದವನ್ನೇ ಕೈಬಿಟ್ಟಿದ್ದರು. ಒತ್ತಡದ ಬಳಿಕ ಮತ್ತೆ ಸೇರಿಸಲಾಯಿತು. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವೇ ಇಲ್ಲ. ಅವರದೇ ಸಂವಿಧಾನವನ್ನು ದೇಶದಲ್ಲಿ ತರುವ ಅಜೆಂಡಾ ಹೊಂದಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಬಿಜೆಪಿ ಸರ್ಕಾರ 2019ರಲ್ಲಿ ಪಾಸ್‌ ಆಗಿತ್ತು, ಆಗಲೇ ಜಾರಿಗೊಳಿಸಲು ಸಾಧ್ಯವಿತ್ತು. ಆರು ತಿಂಗಳೊಳಗೆ ಅದಕ್ಕೆ ನಿಯಮಗಳನ್ನು ರೂಪಿಸಬೇಕಾಗಿತ್ತು. ಅದನ್ನು ಮಾಡದೆ ಇದೀಗ ಚುನಾವಣೆಯ ಹೊಸ್ತಿಲಲ್ಲಿ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದೆ ಇಂತಹ ವಿಚಾರಗಳನ್ನು ಬಿಜೆಪಿ ಮುಂದಿಡುವ ತಂತ್ರ ಹೂಡಿದೆ ಎಂದು ಐವನ್ ಹೇಳಿದರು.ಪಕ್ಷದ ನಾಯಕರಾದ ಪಿ.ವಿ. ಮೋಹನ್‌, ಪ್ರಕಾಶ್‌ ಸಾಲ್ಯಾನ್‌, ಮನುರಾಜ್‌, ಭರತ್‌ ಮುಂಡೋಡಿ, ಮೀನಾ ಟೆಲ್ಲಿಸ್‌, ಇಮ್ರಾನ್‌, ಜೇಮ್ಸ್‌, ಸಬಿತಾ ಮಿಸ್ಕಿತ್‌, ಭಾಸ್ಕರ್‌ ಮತ್ತಿತರರು ಇದ್ದರು.