ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಘಟನೆ ಮಾಡಿದ ಅನಂತ ಹರಿಹರ ಸ್ಮರಣೆಯಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವಿವಿಧ ಸಂಘಟನೆಗಳೊಂದಿಗೆ ಇಲ್ಲಿಯ ಆಲೂರು ಭವನದಲ್ಲಿ ಡಿ. 22ರಿಂದ ಮೂರು ದಿನಗಳ `ಅನಂತ ಸ್ವರ ನಮನ'''' ಸಂಗೀತೋತ್ಸವ ಆಯೋಜಿಸಿದೆ.

ಧಾರವಾಡ:

ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಘಟನೆ ಮಾಡಿದ ಅನಂತ ಹರಿಹರ ಸ್ಮರಣೆಯಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವಿವಿಧ ಸಂಘಟನೆಗಳೊಂದಿಗೆ ಇಲ್ಲಿಯ ಆಲೂರು ಭವನದಲ್ಲಿ ಡಿ. 22ರಿಂದ ಮೂರು ದಿನಗಳ `ಅನಂತ ಸ್ವರ ನಮನ'''''''' ಸಂಗೀತೋತ್ಸವ ಆಯೋಜಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಷಮತಾ ಸಂಸ್ಥೆಯ ಗೋವಿಂದ ಜೋಶಿ, ಡಿ. 22ರ ಸಂಜೆ 5ಕ್ಕೆ ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ, ಎಲ್‌ಐಸಿ ಮಾರುಕಟ್ಟೆ ವ್ಯವಸ್ಥಾಪಕರಾದ ರತ್ನಪ್ರಭಾ ಶಂಕರ್ ಭಾಗವಹಿಸುತ್ತಾರೆ. ಡಿ. 24ರ ಸಮಾರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈರೇಶ ಅಂಚಟಗೇರಿ, ಬಿ.ಎಸ್. ಚಕ್ರವರ್ತಿ, ಕುಮಾರ ಬೆಕ್ಕೇರಿ, ಗೋವಿಂದ ಬೆಡೇಕರ ಇರುತ್ತಾರೆ ಎಂದರು.

ಸಂಗೀತೋತ್ಸವ:

ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮುಖ್ಯಸ್ಥ ಸಮೀರ ಜೋಶಿ ಮಾತನಾಡಿ, ಡಿ. 22ರಂದು ಸಂಜೆ 5.30ಕ್ಕೆ ಪುಣೆಯ ವಿದುಷಿ ರುಚಿರಾ ಕೇದಾರ ಹಾಗೂ ಕಿರಾನಾ ಘರಾಣೆಯ ಮೇರು ಪ್ರತಿಭೆ ಪಂ. ಜಯತೀರ್ಥ ಮೇವುಂಡಿ ಅವರ ಗಾನಸುಧೆ ಹರಿದುಬರಲಿದೆ. 23ರಂದು ಸಂಜೆ 5.30ಕ್ಕೆ ಪುಣೆಯ ಪ್ರಬುದ್ಧ ಗಾಯಕಿ ವಿದುಷಿ ಸಾವನಿ ಶೇಂಡೆ ಅವರಿಂದ ಸಂಗೀತ ನಿನಾದ ಮೂಡಿಬರಲಿದೆ. ನಂತರ ಪಂ. ಎಂ. ವೆಂಕಟೇಶಕುಮಾರ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ. 24ರಂದು ಸಂಜೆ 6ರ ನಂತರ ಪುಣೆಯ ಪಂ. ಸಂದೀಪ ಆಪ್ಟೆ ಅವರಿಂದ ಸಿತಾರ ತಂತುಗಳ ನಿನಾದ ಝೇಂಕರಿಸಿಲಿದೆ. ನಂತರ ಪುಣೆಯ ವಿದುಷಿ ಮಂಜೂಷಾ ಪಾಟೀಲ ಕುಲಕರ್ಣಿ ಗಾಯನದ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದರು.

ಮೂರು ದಿನಗಳ ಈ ಸಂಗೀತೋತ್ಸವದಲ್ಲಿ ಡಾ. ಶ್ರೀಹರಿ ದಿಗ್ಗಾವಿ, ಕೇಶವ ಜೋಶಿ, ಉಸ್ತಾದ ನಿಸಾರ್ ಅಹಮ್ಮದ್‌ ತಬಲಾ ಸಾಥ್ ನೀಡಲಿದ್ದಾರೆ. ಬಸವರಾಜ ಹಿರೇಮಠ, ಸತೀಶ ಭಟ್ ಹೆಗ್ಗಾರ, ಸಾರಂಗ ಕುಲಕರ್ಣಿ, ಗುರುಪರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಸಂಗೀತ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜೋಶಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹ.ವೆಂ. ಕಾಖಂಡಕಿ ಇದ್ದರು.