ಅನಂತ ಹೆಗಡೆ ದೇಶಕ್ಕೇ ಕ್ಯಾನ್ಸರ್‌ ಇದ್ದಂತೆ: ಕಾಂಗ್ರೆಸ್‌

| Published : Jan 16 2024, 01:45 AM IST

ಸಾರಾಂಶ

ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಃಸ್ಥಿತಿಯ ಅನಂತಕುಮಾರ್‌ ಹೆಗಡೆ ಅಂತಹವರು ದೇಶಕ್ಕೆ ಕ್ಯಾನ್ಸರ್‌ ಇದ್ದಂತೆ ಎಂದು ರಾಜ್ಯ ಕಾಂಗ್ರೆಸ್‌ ಟೀಕಾಪ್ರಹಾರ ನಡೆಸಿದೆ.

- ದಲಿತ. ಒಬಿಸಿ ರಾಜಕೀಯ ಏಳಿಗೆ ಸಹಿಸದ ವಿಕೃತ ಮನಸ್ಸಿನವರು

- ಹೆಗಡೆ ಅವರಲ್ಲಿ ಮಿತಿಮೀರಿದ ಪುರೋಹಿತಶಾಹಿ ಅಹಂಕಾರ ನರ್ತನ

- ಹೆಗಡೆ ಕುಂಭಕರ್ಣನ ಥರ, 4 ವರ್ಷ ಮಲಗಿ, 5ನೇ ವರ್ಷ ಏಳ್ತಾರೆ

- ಸಿದ್ದು ವಿರುದ್ಧ ಏಕವಚನ ಪ್ರಯೋಗಕ್ಕೆ ಕಾಂಗ್ರೆಸ್‌ ಟ್ವೀಟರ್ ಖಾತೆ ಕಿಡಿ

ಕನ್ನಡಪ್ರಭ ವಾರ್ತೆ, ಬೆಂಗಳೂರುದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಃಸ್ಥಿತಿಯ ಅನಂತಕುಮಾರ್‌ ಹೆಗಡೆ ಅಂತಹವರು ದೇಶಕ್ಕೆ ಕ್ಯಾನ್ಸರ್‌ ಇದ್ದಂತೆ ಎಂದು ರಾಜ್ಯ ಕಾಂಗ್ರೆಸ್‌ ಟೀಕಾಪ್ರಹಾರ ನಡೆಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಸಂಸದ ಅನಂತಕುಮಾರ್‌ ಹೆಗಡೆ ಹೇಳಿಕೆಗೆ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯ ಕಾಂಗ್ರೆಸ್‌ ತಿರುಗೇಟು ನೀಡಿದೆ.ಅನಂತ್ ಕುಮಾರ್ ಹೆಗಡೆ ಅವರು ಕುಂಭಕರ್ಣನಿದ್ದಂತೆ. ನಾಲ್ಕುವರೆ ವರ್ಷ ಮಲಗುವುದು, ಚುನಾವಣೆ ಬಂದಾಗ ಏಳುವುದು ಹಾಗೂ ಟಿಕೆಟ್‌ ಗಿಟ್ಟಿಸಲು ವಿಷ ಕಾರುವುದು ಅವರ ಕೆಲಸ. ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಸ್ಥಿತಿಯ ಪರಂಪರೆಯನ್ನು ಅನಂತಕುಮಾರ್‌ ಹೆಗಡೆ ಮುಂದುವರೆಸಿದ್ದಾರೆ. ಇಂತಹ ಕ್ರಿಮಿ ಕೀಟಗಳು ಈ ದೇಶಕ್ಕೆ ಕ್ಯಾನ್ಸರ್ ನಂತೆ ಕಾಡುತ್ತವೆ. ಈ ಕ್ಯಾನ್ಸರ್ ಗೆ ಸಂವಿಧಾನದಲ್ಲಿ ಔಷಧವಿದೆ ಎಂದು ತಿರುಗೇಟು ನೀಡಿದೆ.ಕಾಂಗ್ರೆಸ್ ಪಕ್ಷದ ಬಗ್ಗೆ, ಸಿದ್ದರಾಮಯ್ಯ ಅವರ ಬಗ್ಗೆ ತನ್ನ ಕೊಳಕು ನಾಲಿಗೆ ಹರಿಬಿಡುವ ಮೊದಲು ಸಂಸದನಾಗಿ ತನ್ನ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಈ ಅಸಹ್ಯದ ವ್ಯಕ್ತಿಯಲ್ಲಿ ಪುರೋಹಿತಶಾಹಿಯ ಅಹಂಕಾರ ಮಿತಿ ಮೀರಿ ನರ್ತಿಸುತ್ತಿದೆ. ಈ ಅಹಂಕಾರದ ಮದ ಇಳಿಸುವ ತಾಕತ್ತು ಕನ್ನಡಿಗರಿಗೆ ಇದೆ ಎಂದೂ ಹೇಳಿದೆ.