ಸಾರಾಂಶ
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್ (ಜಿ.ಸಿ.ಪಿ.ಎ.ಎಸ್.) ಇದರ ದಶಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಎನ್. ಮನು ಚಕ್ರವರ್ತಿ ಅವರು ರಚಿಸಿದ ಪ್ರೊ.ಯು.ಆರ್.ಅನಂತಮೂರ್ತಿ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಜ್ಞಾನಪೀಠ ಪುರಸ್ಕೃತ ಸಾಹಿತಿ ಪ್ರೊ. ಯು.ಆರ್. ಅನಂತಮೂರ್ತಿ ಅವರು ಯಾವುದೇ ಸಿದ್ಧಾಂತಗಳಿಂದ ಕಟ್ಟುಬಿದ್ದವರಲ್ಲ. ವಿವಿಧ ಪ್ರಭಾವಗಳಿಗೆ ಮನಸ್ಸು ತೆರೆದುಕೊಂಡರೂ, ಯಾವುದೇ ಒಂದೇ ಸಿದ್ಧಾಂತದಿಂದ ಮಾತ್ರವೇ ಪ್ರಭಾವಿತರಾಗಿರಲಿಲ್ಲ ಎಂದು ಹಿರಿಯ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಹೇಳಿದರು.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್ (ಜಿ.ಸಿ.ಪಿ.ಎ.ಎಸ್.) ಇದರ ದಶಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಎನ್. ಮನು ಚಕ್ರವರ್ತಿ ಅವರು ರಚಿಸಿದ ಪ್ರೊ.ಯು.ಆರ್.ಅನಂತಮೂರ್ತಿ ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯು.ಆರ್. ಅನಂತಮೂರ್ತಿ ಅವರ ಬಗೆಗಿನ ಈ ಪುಸ್ತಕವು ಅವರ ಎಲ್ಲ ಬರವಣಿಗೆಯ ವಿಷಯಗಳು, ಎಲ್ಲ ವಿಚಾರಧಾರೆಗಳನ್ನು ಗಂಭೀರ ಪರೀಕ್ಷೆಗೆ ಒಳಪಡಿಸಿವೆ. ಅವರ ಹೆಸರಿನಲ್ಲಿರುವ ‘ಯು’ ‘ಉಡುಪಿ’ಯಾಗಿದ್ದು, ಅವರು ಎಲ್ಲೇ ಇದ್ದರೂ ಉಡುಪಿಯ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರು ಎಂದರು.ಪುಸ್ತಕ ಬಿಡುಗಡೆಗೊಳಿಸಿದ ಲೇಖಕ ಪ್ರೊ.ಕೆ.ಫಣಿರಾಜ್ ಮಾತನಾಡಿ, ಅನಂತಮೂರ್ತಿ ಅವರು ಯಾವಾಗಲೂ ಇತರರ, ಅದರಲ್ಲೂ ವಿರೋಧಿ ದೃಷ್ಟಿಕೋನ ತಿಳಿದುಕೊಳ್ಳಲು ಉತ್ಸುಕರಾಗಿದ್ದರು. ಇದು ಜ್ಞಾನದ ಸೃಷ್ಟಿಗೆ ಸಹಾಯ ಮಾಡುತಿತ್ತು ಎಂದು ಹೇಳಿದರು.ಲೇಖಕ ಪ್ರೊ.ಮನು ಚಕ್ರವರ್ತಿ, ತಮ್ಮ ಗುರುಗಳಾದ ಯು.ಆರ್.ಅನಂತಮೂರ್ತಿ ಅವರೊಂದಿಗಿನ ಅವರ ಅಕ್ಕರೆಯ ಒಡನಾಟ ಮತ್ತು ಅವರು ತಮ್ಮ ಮೇಲೆ ಬೀರಿದ ಪ್ರಭಾವವನ್ನು ಸ್ಮರಿಸಿದರು.ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಮಾಹೆಯಲ್ಲಿ ಮಾನವಿಕ ಕೇಂದ್ರವನ್ನು ಅದರ ಮೊದಲ ನಿರ್ದೇಶಕರಾಗಿ ಪ್ರಾರಂಭಿಸಿ ನಡೆಸುವಲ್ಲಿ ಅನಂತಮೂರ್ತಿ ಅವರ ಕೊಡುಗೆಯನ್ನು ನೆನಪಿಸಿಕೊಂಡರು. ಸಘರ್ ಅಡಾ ಕಾರ್ಯಕ್ರಮ ನಿರ್ವಹಿಸಿದರು.