ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಳ್ಳೇಗಾಲದ ಮಸಣಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನ ನಾಮಫಲಕದ ದೀಪಗಳನ್ನು ಹೊಡೆದುಹಾಕಿ ಅವಮಾನ ಮಾಡಿದ ಆರೋಪ ಸಂಬಂಧ 19 ವರ್ಷದ ಮಾನಸಿಕ ಅಸ್ವಸ್ಥ ಯುವಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಬಗ್ಗೆ ದಿಗ್ಭ್ರಾಂತಿ ವ್ಯಕ್ತಪಡಿಸಿದ ಹೈಕೋರ್ಟ್ ರಾಜ್ಯದಲ್ಲಿ ಅರಾಜಕತೆ ತಲೆ ಎತ್ತಿದೆ ಎಂದು ಕಿಡಿಕಾರಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಯಳಂದೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಚಾಮರಾಜನಗರ ತಾಲೂಕಿನ ಮಸಣಾಪುರದ ಉಪ್ಪಾರ ಬೀದಿಯ ಚಂದ್ರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ‌ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.ಅಲ್ಲದೇ, ಪ್ರಕರಣ ಸಂಬಂಧ ಎರಡೂ ಬಣಗಳು (ಅರ್ಜಿದಾರರು ಹಾಗೂ ದೂರುದಾರರು ಪರಪಸ್ಪರ) ದಾಖಲಿಸಿರುವ ದೂರು-ಪ್ರತಿ ದೂರುಗಳಿಗೆ ಸಂಬಂಧಿಸಿ ತನಿಖೆ ನಡೆಯಬೇಕು. ಅರ್ಜಿಯ ಮುಂದಿನ ವಿಚಾರಣೆ ವೇಳೆ ತನಿಖೆಯ ವಿಸ್ತೃತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರ ಹಾಗೂ ಪೊಲೀಸರಿಗೆ ಆದೇಶಿಸಿ ವಿಚಾರಣೆಯನ್ನು ಆ.20ಕ್ಕೆ ಮುಂದೂಡಿತು.

100 ಜನರ ಗುಂಪಿನಿಂದ ಹಲ್ಲೆ: ಇದೇ ವೇಳೆ ಸುಮಾರು 100 ಜನರ ಗುಂ‍ಪು ಮಾನಸಿಕ ಅಸ್ವಸ್ಥ ಯುವಕನನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಮನಸೋಇಚ್ಛೆ ಥಳಿಸಿದೆ. ‌ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು, ಆರೋಪಿಯ ಗಡಿಪಾರಿಗೆ ಆದೇಶಿಸುತ್ತೇನೆ, ರೌಡಿ ಶೀಟರ್ ತೆರೆಯುತ್ತೇನೆ, ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆವೊಡ್ಡಿ ಬಹಿರಂಗವಾಗಿ ನೀಡಿದ ವಿಡಿಯೋವನ್ನು ನೋಡಿದ ನ್ಯಾಯಮೂರ್ತಿಗಳು,‌ ಇವರೇನು ಪೊಲೀಸ್ ಅಧಿಕಾರಿಯೋ? ರಾಜಕಾರಣಿಯೋ? ರಾಜಕಾರಣಿಗಳ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಪೊಲೀಸ್‌ ಅಧಿಕಾರಿಯೊಬ್ಬರು ಹೀಗೆಲ್ಲಾ ಮಾತನಾಡುವುದಾದರೆ ಅವರಿಗೆ; ಖಾಕಿ ಸಮವಸ್ತ್ರ ಬಿಚ್ಚಿ ಬಿಳಿ ಬಣ್ಣದ ಧಿರಿಸು ಧರಿಸಿಕೊಳ್ಳಲಿ. ಇನ್ನು ಮುಂದೆ ಪೊಲೀಸರ ಉಪಸ್ಥಿತಿ ಇರುವೆಡೆ ರಾಜ್ಯದಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ; ಪೊಲೀಸ್ ಅಪರಾಧಗಳು ಕಡಿಮೆಯಾಗುತ್ತವೆ ಎಂದು ತರಾಟೆಗೆ ತೆಗೆದುಕೊಂಡರು.ಹಾಗೆಯೇ, ಯುವಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿರುವುದ ನಿಜಕ್ಕೂ ಅಕ್ಷಮ್ಯ ಅಪರಾಧ. ನಾವು ಯಾವ ಯುಗದಲ್ಲಿ ಬದುಕುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಘಟನ ನಡೆಯುತ್ತಿದೆ. ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಇಲ್ಲಿ ಜಗಳ ಮುಖ್ಯವಲ್ಲ. ಒಬ್ಬ ಯುವಕನನ್ನು ಬೆತ್ತಲೆಗೊಳಿಸಿ‌ ಥಳಿಸಲಾಗಿದೆ.‌ ಜನ ಸಹ ಬೇಡದ ವಿಚಾರಕ್ಕೆ ಗಲಾಟೆ ಮಾಡ್ತಾ ಇದ್ದರೆ ದೇಶವೂ ಉದ್ಧಾರವಾಗಲ್ಲ, ಜನರೂ ಉದ್ಧಾರ ಆಗಲ್ಲ ಎಂದು ಮಾರ್ಮಿಕವಾಗಿ ನುಡಿಯಿತು.

ಆಗ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌, ಇದು ದೂರು-ಪ್ರತಿದೂರಿನ ತಕರಾರು. ಈ ಘಟನೆಯಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಎಲ್ಲಾ ದೂರುಗಳ ಕುರಿತು ತನಿಖೆ ನಡೆಸಲಾಗುವುದು. ಇಲ್ಲಿ ಪೊಲೀಸ್ ವರಿಷ್ಠಾಧಿಕಾರಿಯವರ ಮಾತುಗಳನ್ನು ನ್ಯಾಯಪೀಠ ನಕಾರಾತ್ಮಕವಾಗಿ ಪರಿಗಣಿಸಬಾರದು. ತಪ್ಪು ಮಾಡುವ ‌ಜನರಿಗೆ ಎಚ್ಚರಿಕೆ ನೀಡುವ ಅರ್ಥದಲ್ಲಿ ಹೇಳಿದ್ದಾರೆ ಎಂದು ಮನವಿ ಮಾಡಿದರು.