ಬಯಲು ಶೌಚ, ಚರಂಡಿ ನಡುವೆ ಅಂಗನವಾಡಿ ಕಟ್ಟಡ

| Published : Sep 23 2024, 01:16 AM IST

ಬಯಲು ಶೌಚ, ಚರಂಡಿ ನಡುವೆ ಅಂಗನವಾಡಿ ಕಟ್ಟಡ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತ ಅಂಗನವಾಡಿ ಪಕ್ಕದಲ್ಲಿಯೇ ರಸ್ತೆ ಹಾಗೂ ಚರಂಡಿ ಇರುವ ಪರಿಣಾಮ ಅಂಗನವಾಡಿ ಮಕ್ಕಳಿಗೆ ಆಟ ಆಡಿಸಲು ಜಾಗವಿಲ್ಲ

ಎಸ್.ಎಂ. ಸೈಯದ್ ಗಜೇಂದ್ರಗಡ

ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ೪ ಅಂಗನವಾಡಿ ಕೇಂದ್ರಗಳು ಭಾಗಶಃ ಆರ್ಥಿಕವಾಗಿ ಹಿಂದುಳಿದ ಬಡಾವಣೆಗಳಲ್ಲಿ ಇವೆ. ಆದರೆ ಸುಲಭ ಶೌಚಾಲಯ, ಬಯಲು ಶೌಚ ಹಾಗೂ ಚರಂಡಿ ಪಕ್ಕದಲ್ಲಿಯೇ ಕೆಲವು ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ನೀಡಿ, ಕಟ್ಟಡ ಕಟ್ಟಲು ಪುರಸಭೆ ಹಸಿರು ನಿಶಾನೆ ನೀಡಿದೆ!

ಅಂಗನವಾಡಿ ಮಕ್ಕಳಿಗೆ ಆಡಲು ಜಾಗವಿಲ್ಲದ್ದು ಒಂದೆಡೆಯಾದರೆ ಪ್ರಾಣಾಪಾಯ ಮತ್ತು ಗಬ್ಬು ವಾಸನೆ ಸೇವನೆ ಕಂದಮ್ಮಗಳಿಗೆ ಸಾಮಾನ್ಯವಾಗುವ ದುಸ್ಥಿತಿ ನಿರ್ಮಾಣವಾಗಲಿದೆ.

ಪಟ್ಟಣದಲ್ಲಿ ಲ್ಯಾಂಡ್ ಆರ್ಮಿಯಿಂದ ಅಂದಾಜು ₹೮೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ೪ ಅಂಗನವಾಡಿ ಕೇಂದ್ರಗಳ ಪೈಕಿ ಎರಡು ಅಂಗನವಾಡಿ ಕೇಂದ್ರಗಳ ಹೊರಗೆ ಮಕ್ಕಳು ಕುಳಿತರೆ ಬಯಲು ಶೌಚಕ್ಕೆ ಹೋಗುವ ಜನ, ಶೌಚಾಲಯ ಮತ್ತು ಚರಂಡಿಯ ಗಬ್ಬು ವಾಸನೆ ಆವರಿಸುತ್ತದೆ.

ಇತ್ತ ಅಂಗನವಾಡಿ ಪಕ್ಕದಲ್ಲಿಯೇ ರಸ್ತೆ ಹಾಗೂ ಚರಂಡಿ ಇರುವ ಪರಿಣಾಮ ಅಂಗನವಾಡಿ ಮಕ್ಕಳಿಗೆ ಆಟ ಆಡಿಸಲು ಜಾಗವಿಲ್ಲ.

ಮಗು ಮತ್ತು ತಾಯಂದಿರ ಅಪೌಷ್ಟಿಕತೆ ದೂರ ಮಾಡುವ ಜತೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು ಸಹಾಯ ಮಾಡಲು ಪ್ರಮುಖ ಪಾತ್ರ ವಹಿಸುವ ಅಂಗನವಾಡಿ ಕೇಂದ್ರಗಳ ಜಾಗದ ಆಯ್ಕೆಯಲ್ಲಿ ಪುರಸಭೆ ಮೇಲ್ನೋಟಕ್ಕೆ ಎಡವಿದಂತೆ ಭಾಸವಾಗುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ನೀಡಬೇಕು ಎನ್ನುವುದು ಪ್ರಜ್ಞಾವಂತ ನಾಗಕರಿಕರ ಅಭಿಪ್ರಾಯವಾಗಿದೆ.

ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕಾಗಿ ಪುರಸಭೆಯವರಿಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಪುರಸಭೆ ನೀಡಿದ ಜಾಗದಲ್ಲಿಯೇ ೪ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಿಡಿಪಿಒ ವಿರೂಪಾಕ್ಷಯ್ಯ ಜಿ. ಹಿರೇಮಠ ಹೇಳಿದರು.ಶಾಲಾಪೂರ್ವ ಶಿಕ್ಷಣ ನೀಡುವ ಅಂಗನವಾಡಿ ಕೇಂದ್ರಗಳು ಸ್ವಚ್ಛ ಹಾಗೂ ಸುಂದರ ಪರಿಸರದಲ್ಲಿರಬೇಕು. ಆದರೆ ಪಟ್ಟಣದಲ್ಲಿ ಕೆಲವು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದಂತೆ ಕಾಣುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಹನಮಂತ ಕೆಂಚಿ ಹೇಳಿದರು.