ಸೌಲಭ್ಯ ವಂಚಿತ ಅಂಗನವಾಡಿ

| Published : Aug 27 2024, 01:35 AM IST

ಸಾರಾಂಶ

ಹಳೇಪಾಳ್ಯ ಗ್ರಾಮದ ಅಂಗನವಾಡಿ ಕಟ್ಟಡ ಹಳೇ ಶಾಲಾ ಕಟ್ಟಡವಾಗಿದ್ದು ಪಕ್ಕದಲ್ಲಿ ಬೆಟ್ಟಗುಡ್ಡಗಳು ಇದ್ದು ಮಳೆ ಬಂದರೆ ಗುಡ್ಡದ ಮೇಲೆ ಬಿದ್ದ ನೀರು ಶಾಲೆ ಕಟ್ಟಡಡ ಹಿಂದೆ ಮುಂದೆ ನಿಂತು ಸೊಳ್ಳೆ ಕಾಟ, ದುರ್ವಾಸನೆ ಬೀರುತ್ತಿದೆ. ಮೇಲೆ ಚಾವಣಿ ಸಿಮೆಂಟ್ ಕಿತ್ತು ಹೋಗಿದೆ. ಮಕ್ಕಳು ಭಯದಿಂದಲೇ ಅಂಗನವಾಡಿಗೆ ಬರುತ್ತಾರೆ

ಕನ್ನಡಪ್ರಭ ವಾರ್ತೆ ಟೇಕಲ್

ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸರ್ಕಾರ ಕೋಟಿಗಟ್ಟಲೆ ವೆಚ್ಚ ಮಾಡುತ್ತಿದ್ದರೂ ಕೆಲವು ಕಡೆ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಟೇಕಲ್‌ನ ಬೆಟ್ಟಗುಡ್ಡಗಳ ಪ್ರದೇಶದಲ್ಲಿರುವ ಕೆ.ಜಿ.ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳೇಪಾಳ್ಯ ಗ್ರಾಮದ ಅಂಗನವಾಡಿ ಅಗತ್ಯ ಸೌಲಭ್ಯಗಳಿಲ್ಲದೆ ವಂಚಿತವಾಗಿದೆ.

ಗ್ರಾಮದಲ್ಲಿ ಬಡವರು, ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಜೀವನ ಸಾಗಿಸುವುದೇ ಕಷ್ಟ. ಅಂತಹ ಸಮಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಇನ್ನೂ ಕಷ್ಟಕರವಾಗಿದೆ. ಮಕ್ಕಳನ್ನು ಅಂಗನವಾಡಿಗೆ ಸೇರಿಸಲು ಬಯಸುವವರಿಗೆ ಅಲ್ಲಿಯ ಕಟ್ಟಡದ ದುಸ್ಥಿತಿ ನೋಡಿದ ಭಯಪಡುವಂತಾಗಿದೆ. ಕಿತ್ತುಹೋದ ಚಾವಣಿ ಸಿಮೆಂಟ್‌

ಗ್ರಾಮದ ಅಂಗನವಾಡಿ ಕಟ್ಟಡ ಹಳೇ ಶಾಲಾ ಕಟ್ಟಡವಾಗಿದ್ದು ಪಕ್ಕದಲ್ಲಿ ಬೆಟ್ಟಗುಡ್ಡಗಳು ಇದ್ದು ಮಳೆ ಬಂದರೆ ಗುಡ್ಡದ ಮೇಲೆ ಬಿದ್ದ ನೀರು ಶಾಲೆ ಕಟ್ಟಡಡ ಹಿಂದೆ ಮುಂದೆ ನಿಂತು ಸೊಳ್ಳೆ ಕಾಟ, ದುರ್ವಾಸನೆ ಬೀರುತ್ತಿದೆ. ಮೇಲೆ ಚಾವಣಿ ಸಿಮೆಂಟ್ ಕಿತ್ತು ಹೋಗಿದೆ. ಮಳೆ ಬಂದರೆ ಸೋರುತ್ತಿದ್ದು ಮಕ್ಕಳು ಭಯದ ವಾತಾವರಣದಲ್ಲಿ ಇದ್ದಾರೆ. ಮಕ್ಕಳು ಶಾಲೆಯ ಮುಂದೆ ಗ್ರಾಮದ ನೀರಿನ ಟ್ಯಾಂಕ್ ಇದ್ದು ಸುತ್ತಲೂ ನೀರು ನಿಂತು ಕಸ ಬೆಳೆದಿದೆ. ಮಕ್ಕಳು ಓಡಾಡಲು ಕನಿಷ್ಟ ದಾರಿಯು ಸಹ ಇಲ್ಲ, ಗಿಡ, ಗಂಟೆಗಳು ಬೆಳೆದಿದ್ದು ಈ ಬಗ್ಗೆ ಪಂಚಾಯಿತಿ ನಿರ್ಲಕ್ಷ್ಯ ತೋರಿದೆ.

ಮಕ್ಕಳಿಗೆ ಶೌಚಾಲಯ ಇಲ್ಲಸರಿಯಾದ ಶೌಚಾಲಯ ಇಲ್ಲ, ನೀರಿನ ಸಂಪರ್ಕ ಇಲ್ಲ, ಕನಿಷ್ಟ ಶಾಲೆಯಲ್ಲಿ ಒಂದು ಟೇಬಲ್, ಚೇರ್ ಸಹ ಇಲ್ಲ ಅಡುಗೆ ಮನೆಯಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಅಲ್ಲಯೇ ಸಿಲಿಂಡರ್ ಇಟ್ಟು ಅಡುಗೆ ಸಹ ಮಾಡಬೇಕು, ಇಂತಹ ಅಪಾಯಕಾರಿ ಸ್ಥಿತಿಯಲ್ಲೇ ಮಕ್ಕಳು ಅಂಗನವಾಡಿಗೆ ಹೋಗುತ್ತಿದ್ದಾರೆ. ಅಲ್ಲದೆ ಅಂಗನವಾಡಿಯ ಕಾರ್ಯಕರ್ತೆಯರು ಭಯದ ವಾತಾವರಣದಲ್ಲೇ ಪಾಠ ಪ್ರವಚನ ಮಾಡುತ್ತಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.