ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಒತ್ತಾಯ, ಚಾಮರಾಜನಗರದಲ್ಲಿ ಪ್ರತಿಭಟನೆ

| Published : Dec 18 2024, 12:45 AM IST

ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಒತ್ತಾಯ, ಚಾಮರಾಜನಗರದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ 3 ಮತ್ತು 4 ನೌಕರರು ಎಂದು ಪರಿಗಣಿಸಿ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಚಾಮರಾಜನಗರದಲ್ಲಿ ಮಂಗಳವಾರ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ । ಬೆಳಗಾವಿ ಅಧಿವೇಶನದಲ್ಲಿ ವಿವಿಧ ಸಮಸ್ಯೆ ಪ್ರಸ್ತಾವಕ್ಕೆ ಆಗ್ರಹ । ಜಿಲ್ಲಾಡಳಿತ ಭವನ ವರೆಗೆ ಮೆರವಣಿಗೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಳಿಗಾಲದ ಅಧಿವೇಶನದಲ್ಲಿ ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ 3 ಮತ್ತು 4 ನೌಕರರು ಎಂದು ಪರಿಗಣಿಸಿ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಮಾತನಾಡಿ, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿರನ್ನು ವರ್ಗ 3 ಮತ್ತು 4 ನೌಕರರು ಎಂದು ಪರಿಗಣಿಸಿ ಕಾಯಂ ಮಾಡಬೇಕು. ಮಹಿಳಾ, ಮಕ್ಕಳ ಇಲಾಖೆಯ 14 ಐಸಿಡಿ 2023ರ ಆದೇಶದ ಪ್ರಕಾರ ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು. 2018 ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಕೇಂದ್ರ ಸರ್ಕಾರವು 26 ಸಾವಿರ ರು.ಗೆ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

2023ರ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಘೋಷಣೆ ಮಾಡಿದ 15 ಸಾವಿರ ರು.ಗೆ ಗೌರವಧನ ಹೆಚ್ಚಿಸಬೇಕು, ನಿವೃತ್ತಿಯಾದವರಿಗೆ ಇಡಗಂಟು ಅಥವಾ ಎನ್‌ಪಿಎಸ್ ಹಣ ಹಾಗೂ10 ಸಾವಿರ ರು. ಮಾಸಿಕ ಪಿಂಚಣಿ ನೀಡಬೇಕು. ಶಿಕ್ಷಣ ಇಲಾಖೆ, ಎಸ್‌ಡಿಎಂಸಿಗಳಿಂದ ಪ್ರಾರಂಭ ಮಾಡಿರುವ ಎಲ್‌ಕೆಜಿ, ಯುಕೆಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶಾನಾಲಯಬೇಕು. ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭಾ ಚುನಾವಣೆಗಳು ಅಲ್ಲದೇ ಉಪಚುನಾವಣೆಗಳಲ್ಲಿ ಮತದಾರರನ್ನು ಗುರ್ತಿಸುವುದು, ಅನರ್ಹಗೊಳಿಸುವುದು, ಚುನಾವಣಾ ಸಂಧರ್ಭದಲ್ಲಿ ಚೀಟಿ ಹಂಚುವುದು, ಬೂತ್‌ಗಳಲ್ಲಿ ಕೆಲಸ ಮಾಡುವುದು ಮುಂತಾದ ಕೆಲಸಗಳಿಂದ ಅಂಗನವಾಡಿ ಕೇಂದ್ರದ ನಿತ್ಯದ ಕೆಲಸಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸಬೇಕು. ಸಾಮೂಹಿಕ ಆರೋಗ್ಯ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು ಎಂದು ಆಗ್ರಹಿಸಿದರು.

ಮುಂಗಡವಾಗಿ ಕರೆನ್ಸಿ ಹಣ, ಕೋಳಿಮೊಟ್ಟೆ, ಬಾಡಿಗೆ, ಗ್ಯಾಸ್, ತರಕಾರಿ, ಕಾಂಟೆಜಿನ್ಸಿ ಬಿಲ್‌ಗಳನ್ನು ಹಾಕದೇ ಫಲಿತಾಂಶ ಕೇಳಬಾರದು. ಅಂಗನವಾಡಿ ಕೇಂದ್ರದಲ್ಲಿ ಮೊಬೈಲ್‌ನಲ್ಲಿ ದಾಖಲೆ ನಿರ್ವಹಿಸುತ್ತಿರುವುದರಿಂದ ದಾಖಲಾತಿ ಬರೆಸುವ ಸಂಖ್ಯೆ ಕಡಿಮೆ ಮಾಡಬೇಕು. ಘೋಷಣ್ ಟ್ರ್ಯಾಕರ್‌ನಲ್ಲಿರುವ ಅಪಾಯದ ಅಂಶ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಸಂಘದ ಖಜಾಂಚಿ ಜಿ.ಭಾಗ್ಯ, ಕಾರ್ಯದರ್ಶಿ ಶಾಯಿದಭಾನು, ಖಜಾಂಚಿ ಗುರುಲಿಂಗಮ್ಮ, ಸಂತೇಮರಹಳ್ಳಿ ಅಧ್ಯಕ್ಷೆ ಪಾರ್ವತಮ್ಮ, ಖಜಾಂಚಿ ಜಯಮಾಲ, ಕಾರ್ಯದರ್ಶಿ ತುಳಸಮ್ಮ, ಯಳಂದೂರು ಅಧ್ಯಕ್ಷೆ ಮೀನಾಕ್ಷಿ, ಖಜಾಂಚಿ ಕೆಂಪಮ್ಮ, ಗುಂಡ್ಲುಪೇಟೆ ಅಧ್ಯಕ್ಷೆ ಸುಜಿಯಾ, ಖಜಾಂಚಿ ಸುಮಿತ್ರ, ಕಾರ್ಯದರ್ಶಿ ಗುರುಮಲ್ಲಮ್ಮ, ಕೊಳ್ಳೇಗಾಲ ಅಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ಸುಂದ್ರಮ್ಮ, ಸದಸ್ಯರು ಭಾಗವಹಿಸಿದ್ದರು.