ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಮಕ್ಕಳು ಮತ್ತು ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ವಿತರಣೆಯಾಗುವ ಆಹಾರ ಸಾಮಗ್ರಿಗಳು ಅತ್ಯಂತ ಗುಣಮಟ್ಟದಿಂದ ಕೂಡಿವೆ ಎಂದು ಸಿಡಿಪಿಒ ಎಸ್.ಎನ್.ಶಿವಪ್ರಕಾಶ್ ಹೇಳಿದರು.ತಾಲೂಕಿನ ಕೆ.ಬಿದರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾಗಿದ್ದ ಹುಳಿಗೆರೆ ವೃತ್ತದ ಪೋಷಣ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡಲಾಗುವ ಒಂದು ಕೆಜಿ ಆಹಾರ ಸಾಮಗ್ರಿಯನ್ನು ತಯಾರು ಮಾಡಲು ಸರಕಾರ ₹400 ರು.ಗೂ ಹೆಚ್ಚಿನ ಹಣ ಖರ್ಚು ಮಾಡುತ್ತದೆ. ಆದರೆ, ಪೋಷಕರು ಇವುಗಳನ್ನು ಬಳಸದೆ ಅಂಗಡಿಗಳಲ್ಲಿ ದೊರೆಯುವ ಕೃತಕ ಆಹಾರ ಪದಾರ್ಥ ತಿನ್ನಿಸಿ ಮಕ್ಕಳ ಆರೋಗ್ಯ ಹಾಳು ಮಾಡುತ್ತಿದ್ದಾರೆ. ಪೋಷಕರು ಅಂಗನವಾಡಿಗಳ ಮೂಲಕ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಅರಿತು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಸರಕಾರದ ಅನೇಕ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಅಂಗನವಾಡಿ ಕಾರ್ಯಕರ್ತೆಯರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸಿಂಗಟಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಎಸ್.ರಂಗಸ್ವಾಮಿ ಮಾತನಾಡಿ, ಹಣ್ಣು ಅಥವಾ ತರಕಾರಿಯನ್ನು ಗಿಡದಿಂದ ಕೊಯ್ಲು ಮಾಡಿದ 48 ಗಂಟೆಯೊಳಗೆ ಸೇವಿಸಿದರೆ ಮಾತ್ರ ಪರಿಪೂರ್ಣ ಪೋಷಕಾಂಶ ದೊರೆಯುತ್ತದೆ. ಸಾತ್ವಿಕ ಆಹಾರ ಸೇವಿಸಬೇಕು. ಹಣಕ್ಕಿಂತ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಕ್ಕರೆ ಮತ್ತು ಅಕ್ಕಿಯನ್ನು ಮಿತವಾಗಿ ಬಳಸಬೇಕು. ನುಗ್ಗೆ ಸೊಪ್ಪು, ಕಾಯಿ ಮತ್ತು ರಾಸಾಯನಿಕ ಬಳಸದೆ ಬೆಳೆಯುವ ಹುಣಸೆ ಹಣ್ಣನ್ನು ಬಳಸುವುದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ದೂರವಾಗುತ್ತವೆ ಎಂದರು.ಮೇಲ್ವಿಚಾರಕಿ ಬಿ.ಎಸ್.ಕವಿತಾ ಮಾತನಾಡಿ, ತಾಯಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಬಗ್ಗೆ ಅರಿವು ಮೂಡಿಸಲು ಸರಕಾರ ಪೋಷಣ್ ಅಭಿಯಾನ ಜಾರಿಗೆ ತಂದಿದೆ. ಉತ್ತಮ ಆರೋಗ್ಯ ಹೊಂದಲು ಹೆಚ್ಚಿನ ಪೋಷಕಾಂಶ ಹೊಂದಿದ ಆಹಾರ ಸೇವಿಸಬೇಕು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೆ.ಬಿದರೆ ಗ್ರಾಪಂ ಅಧ್ಯಕ್ಷೆ ರಚನಾ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಜಿ.ಪ್ರಭು, ರೇವತಿ ನಾಗರಾಜ್, ಚಂದ್ರಮ್ಮ, ವೈ.ಡಿ.ಪ್ರೇಮಾ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯ ಸಿಂಗಟಗೆರೆ ಮಧು, ಅಂಗನವಾಡಿ ಕಾರ್ಯಕರ್ತೆಯರಾದ ಯು.ಆರ್.ಪಾರ್ವತಮ್ಮ, ಬಿ.ಪಿ.ಸುನಂದಮ್ಮ, ಎಂ.ಸಿ. ಶೋಭಾ, ಬಿ.ಎಸ್.ಕವನಾ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.10ಕೆಡಿಆರ್ 2 ಕಡೂರು ತಾಲ್ಲೂಕಿನ ಕೆ.ಬಿದರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹುಳಿಗೆರೆ ವೃತ್ತದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಸಿಡಿಪಿಒ ಎಸ್.ಎನ್.ಪ್ರಕಾಶ್ ಉದ್ಘಾಟಿಸಿದರು. ರಚನಾ ಬಸವರಾಜ್, ರೇವತಿ ನಾಗರಾಜ್, ಕವಿತಾ, ಅನಿಲ್‌ಕುಮಾರ್, ಚಂದ್ರಮ್ಮ, ಜಿ.ಪ್ರಭು ಇದ್ದರು.