ಕೆಲ ಕೇಂದ್ರಗಳಲ್ಲಿ ಕಾರ್ಯಕರ್ತೆಯರೇ ಇಲ್ಲದ ಕಾರಣ, ಹತ್ತಿರದ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ
ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಗ್ರಾಮೀಣ ಭಾಗದ ಮಕ್ಕಳ ಪೌಷ್ಟಿಕತೆ, ಪೂರ್ವ ಪ್ರಾಥಮಿಕ ಶಿಕ್ಷಣ ಹಾಗೂ ಗರ್ಭಿಣಿಯರ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗನವಾಡಿ ಕೇಂದ್ರಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಕುಷ್ಟಗಿ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ 15 ಕಾರ್ಯಕರ್ತೆಯರು ಹಾಗೂ 22 ಸಹಾಯಕಿಯರು ಸೇರಿದಂತೆ ಒಟ್ಟು 37 ಹುದ್ದೆಗಳು ದೀರ್ಘ ಕಾಲದಿಂದ ಖಾಲಿ ಉಳಿದಿದ್ದು, ಕೇಂದ್ರಗಳ ಕಾರ್ಯ ನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ, ಆರೋಗ್ಯ ತಪಾಸಣೆ, ಲಸಿಕೆ ಕಾರ್ಯಕ್ರಮ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ,ಆರೋಗ್ಯ ಸೇವೆ ಸೇರಿದಂತೆ ಹಲವು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇಂತಹ ಮಹತ್ವದ ಅಂಗನವಾಡಿ ಕೇಂದ್ರಗಳಲ್ಲಿಯೇ ಸಿಬ್ಬಂದಿ ಕೊರತೆ ಮುಂದುವರಿದಿರುವುದು ಆತಂಕ ಮೂಡಿಸಿದೆ.ಸಾವಿರಾರು ಫಲಾನುಭವಿಗಳು: ಕುಷ್ಟಗಿ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ 28953 ಮಕ್ಕಳು ಹಾಗೂ 2969 ಗರ್ಭಿಣಿಯರು ನೋಂದಣಿಯಾಗಿದ್ದಾರೆ. ಇಷ್ಟೊಂದು ಫಲಾನುಭವಿಗಳಿಗೆ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದು ಕಾರ್ಯಕರ್ತೆಯರ ಮೇಲಿನ ಒತ್ತಡ ಹೆಚ್ಚಿಸಿದೆ.
ಕೆಲ ಕೇಂದ್ರಗಳಲ್ಲಿ ಕಾರ್ಯಕರ್ತೆಯರೇ ಇಲ್ಲದ ಕಾರಣ, ಹತ್ತಿರದ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಇದರಿಂದ ಒಬ್ಬರೇ ಎರಡು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಮಕ್ಕಳ ಶಿಕ್ಷಣ ಚಟುವಟಿಕೆ, ಮನೆ ಭೇಟಿ, ಪೌಷ್ಟಿಕ ಆಹಾರ ವಿತರಣೆ, ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆ ಸೇರಿದಂತೆ ಹಲವು ಕಾರ್ಯ ಸಮರ್ಪಕವಾಗಿ ನಡೆಯಲು ಅಡಚಣೆ ಉಂಟಾಗುತ್ತಿದೆ.ಪ್ರಭಾರ ವ್ಯವಸ್ಥೆ ಶಾಶ್ವತ ಪರಿಹಾರವಲ್ಲ:ಖಾಲಿ ಹುದ್ದೆಗಳ ಹಿನ್ನೆಲೆ ಪ್ರಭಾರ ವ್ಯವಸ್ಥೆ ಮೂಲಕ ಕೇಂದ್ರಗಳ ಕಾರ್ಯ ನಿರ್ವಹಣೆ ಮುಂದುವರಿದಿದ್ದರೂ ಇದು ಶಾಶ್ವತ ಪರಿಹಾರವಲ್ಲ ಒಬ್ಬರೆ ಕಾರ್ಯಕರ್ತೆಯ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿರುವುದರಿಂದ ಸೇವೆಯ ಗುಣಮಟ್ಟಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ. ಎರಡು ಕೇಂದ್ರ ನಿರ್ವಹಿಸುವುದು ಸಿಬ್ಬಂದಿಗೆ ಬಹಳಷ್ಟು ಶ್ರಮದಾಯಕವಾಗಿದೆ.
ಮಕ್ಕಳ ಭವಿಷ್ಯದ ಪ್ರಶ್ನೆ: ಮೂರರಿಂದ ಆರು ವರ್ಷದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಅಡಿಪಾಯವಾಗಿವೆ. ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸುವುದು, ಪೌಷ್ಟಿಕ ಆಹಾರ ಒದಗಿಸುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಗತ್ಯ ಸಲಹೆ ಮತ್ತು ಪೌಷ್ಟಿಕ ಸೇವೆ ನೀಡುವ ಜವಾಬ್ದಾರಿಯೂ ಈ ಕೇಂದ್ರಗಳ ಮೇಲಿದೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಸಿಬ್ಬಂದಿ ಕೊರತೆ ದೀರ್ಘಕಾಲ ಮುಂದುವರಿಯುತ್ತಿರುವುದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.ಗ್ರಾಮೀಣ ಪ್ರದೇಶದ ಮಕ್ಕಳ, ಗರ್ಭಿಣಿಯರ ಆರೋಗ್ಯದ ಹಿತದೃಷ್ಟಿಯಿಂದ ಖಾಲಿ ಹುದ್ದೆ ತ್ವರಿತವಾಗಿ ಭರ್ತಿ ಮಾಡಿ ಪ್ರಭಾರ ವ್ಯವಸ್ಥೆಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ.
ಕುಷ್ಟಗಿ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿರುವ ಕಾರ್ಯಕರ್ತೆ ಹಾಗೂ ಸಹಾಯಕಿಯರ ಖಾಲಿ ಹುದ್ದೆಯ ಮಾಹಿತಿ ಸಿಡಿಪಿಓ ಅವರಿಂದ ಪಡೆಯಲು ಕ್ರಮ ವಹಿಸಲಾಗುತ್ತಿದ್ದು, ವಾರದಲ್ಲಿ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಹಾವಿನ್ ತಿಳಿಸಿದ್ದಾರೆ.ಕುಷ್ಟಗಿ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 37 ಹುದ್ದೆಗಳು ಖಾಲಿ ಇವೆ. ಹೊಸ ನೇಮಕಾತಿಗಾಗಿ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಹಂತದಲ್ಲಿದೆ. ನೇಮಕಾತಿ ಪೂರ್ಣಗೊಳ್ಳುವವರೆಗೆ ಖಾಲಿ ಇರುವ ಕೇಂದ್ರಗಳಿಗೆ ಹತ್ತಿರದ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಭಾರ ವಹಿಸಲಾಗಿದೆ ಎಂದು ಕುಷ್ಟಗಿ ಸಿಡಿಪಿಒ ಯಲ್ಲಮ್ಮ ಹಂಡಿ ತಿಳಿಸಿದ್ದಾರೆ.